Advertisement

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

05:20 PM Sep 07, 2024 | Team Udayavani |

ಇಡೀ ಊರಿಗೆ ಊರೇ ಸಂಭ್ರಮಿಸೋ ಗಣೇಶನ ಹಬ್ಬಕ್ಕೆ ಇನ್ನು ಒಂದೇ ದಿನ ಬಾಕಿಯಿತ್ತು. ಅದಾಗಲೇ ಊರಿನ ಪ್ರತಿ ಓಣಿಯ ಗುಂಪುಗಳು ಭರ್ಜರಿಯಾಗಿಯೇ ತಯಾರಿ ನಡೆಸಿದ್ದವು. ನಾವು ಕೂಡಾ ಪರ ಓಣಿಯವರಿಗೆ ಪೈಪೋಟಿ ನೀಡುವಂತೆ ನಮ್ಮ ತಯಾರಿಯೂ ಅಷ್ಟೇ ಜೋರಾಗಿತ್ತು. ದೇಣಿಗೆ ಕೂಡಾ ಅಷ್ಟೇ ಚೆನ್ನಾಗಿ ಸಂಗ್ರಹವಾಗಿತ್ತು. ಅದಕ್ಕೆ ತಕ್ಕಂತೆ ಗಣೇಶನ ಸಿಂಗಾರಕ್ಕೆ ಬೇಕಾದ ವಸ್ತುಗಳ ಖರೀದಿ ಮುಗಿದು ನಾಳೆಗೆ ಗಣೇಶನ್ನು ಪ್ರತಿಷ್ಠಾಪಿಬೇಕು ಎನ್ನುವಷ್ಟರಲ್ಲಿ ಅಂದು ರಾತ್ರಿ ವೀಪರಿತ ಗಾಳಿ-ಮಳೆಯಾಗಿ ತಯಾರಿ ಮುಗಿದು ಸಿದ್ದವಾಗಿದ್ದ ಗಣೇಶನನ್ನು ಕೂರಿಸುವ ಗೂಡು ಹಾರಿಹೋಗಿ ನಮ್ಮ ಸಂಭ್ರಮವನ್ನು ಕಸಿದುಕೊಂಡಿತ್ತು.

Advertisement

ಹಬ್ಬ ಮಾಡಿಯೇ ತೀರಬೇಕೆಂದು ಹಠ ಹಿಡಿದು ಮರುದಿನ ಬೆಳಿಗ್ಗೆ ತಯಾರಿಯ ಕಾಮಗಾರಿಯನ್ನು ಒಂದೇ ದಿನದಲ್ಲಿ ಮುಗಿಸಿ, ಅಂದು ಸಂಜೆಯೆ ಗಣೇಶನನ್ನು ಪ್ರತಿಷ್ಠಾಪಿಸಿದಾಗ. ಆ ಸಂತೋಷಕ್ಕೇ ನಮ್ಮ ಬೆನ್ನನ್ನು ನಾವೇ ತಟ್ಟಿಕೊಂಡು ಖುಷಿಪಟ್ಟು ಸಂಭ್ರಮಿಸಿದ್ದೆವು.

ಅದಾದ ನಂತರ ಶುರಾವಾಗಿದ್ದೇ ದೀಪ ಕಾಯೋ ಜಾಗರಣೇ ಕಾರ್ಯಕ್ರಮ ಅಂದರೇ ಗಣೇಶನನ್ನು ಪ್ರತಿಷ್ಠಾಪಿಸಿದ ಮೊದಲಿನಿಂದ ವಿಸರ್ಜಿಸುವ ಕೊನೆಯ ದಿನಗಳವರೆಗೂ ದೀಪ ಆರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಗುಂಪಿನವರದು. ಪಾಳಿ ಪ್ರಕಾರ ಇಂತಿಷ್ಟು ಗಂಟೆಗಳನ್ನು ನಮ್ಮೊಳೊಗೆ ನಿರ್ಧರಿಸಿ ಹಗಲು ರಾತ್ರಿ ಎನ್ನದೆ ದೀಪ ಶಾಂತವಾಗದಿರೋ ರೀತಿ ತಮ್ಮ ತಮ್ಮ ಸೇವೆಯನ್ನು ಪ್ರತಿಯೊಬ್ಬರು ಅಚ್ಚುಕಟ್ಟಾಗೆ ನಿಭಾಯಿಸಿದ್ದರು.

ಇಡೀ ಐದು ದಿನದ ಅವಧಿಯಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮವನ್ನೂ ಚೆನ್ನಾಗಿ ನಡೆಸಿಕೊಡುವ ಜವಾಬ್ದಾರಿ ಗುಂಪಿನ ಪ್ರತಿಯೊಬ್ಬರದ್ದು. ಆ ಹಿಂದಿನ ರಾತ್ರಿ ನಿದ್ದೆಗೆಟ್ಟು ಕ್ವಿಂಟಲ್‌ನಷ್ಟು ಬಗೆ ಬಗೆಯ ತರಕಾರಿಗಳನ್ನು ಕೊಯ್ದು ಅಡುಗೆ ಸಿದ್ದತೆ ನಡೆಸಿದ್ದೆವು. ಗೋಧಿ ಹುಗ್ಗಿ, ಬದನೆಕಾಯಿ ಪಲ್ಯ, ಅನ್ನ ಮತ್ತು ರುಚಿಕಟ್ಟಾದ ಸಾರು ತಯಾರಿಸಿ ಮರುದಿನ ಪ್ರಸಾದ ಸ್ವೀಕರಿಸಲು ಬಂದಿದ್ದ ಊರಿನವರಿಂದ ಅಡುಗೆ ಚೆನ್ನಾಗಿ ಮಾಡಿದ್ದೀರಾ ಎಂದು ಮಾತುಗಳ ಬಂದಾಗ ಥ್ಯಾಂಕ್ಸ್‌ ಎಂದು ಹೇಳಿ, ಒಳಗೋಳಗೆ ಆನಂದಿಸಿದ್ದು ಈಗಲೂ ನೆನಪಿದೆ.

ಇನ್ನು ನಾಲ್ಕನೇಯ ದಿನವೇ ಮನರಂಜನಾ ಕಾರ್ಯಕ್ರಮ. ಊರಿನ ಸಂಪ್ರದಾಯದ ಅನುಗುಣವಾಗಿ ಸಂಜೆ ಸಮಯದಲ್ಲಿ ಸಂಗೀತ ತಂಡದವರನ್ನು ಕರೆಸಿ, ಕಾರ್ಯಕ್ರಮಗಳನ್ನು ಆಯೋಜಿಸಿ ಸಂಗೀತ ಸಂಜೆಯನ್ನು ಸೃಷ್ಟಿಸಿ ಸಂಗೀತಲೋಕದಲ್ಲೇ ತೇಲಾಡುವ ಸ್ಥಿತಿಯೇ ನಿರ್ಮಾಣವಾಗಿತ್ತು. ಅಂದು ಪ್ರತಿಯೊಬ್ಬರು ಸಂಜೆಯ ಸಂಗೀತ ಕಾರ್ಯಕ್ರಮವನ್ನು ಆನಂದಿಸಿದ್ದರು.

Advertisement

ಇನ್ನು ಕೊನೆಯ ದಿನ, ಗಣೇಶನ ಮೇಲಿದ್ದ ಆಭರಣಗಳ ಹರಾಜು ಪ್ರಕ್ರಿಯೆ ನಡೆದು ವಿಸರ್ಜನಾ ಮೆರೆವಣಿಗೆಯೂ ಕೂಡಾ ಕಿವಿಗುಟ್ಟುವ ರೀತಿಯ ಅಬ್ಬರದ ಸಂಗೀತ ಶಬ್ದಕ್ಕೆ ಮೆರವಣಿಗೆಯಲ್ಲಿದ್ದರನ್ನು ಕುಣಿಸುತ್ತಿತ್ತು. ಬಗೆಬಗೆಯ ಬಣ್ಣಗಳನ್ನು ಒಬ್ಬರಿಗೊಬ್ಬರು ಎರಚಿಕೊಂಡು ನಮ್ಮನ್ನೇ ನಾವು ನಂಬದ ರೀತಿ ವಿಚಿತ್ರವಾಗಿ ಕಾಣಿಸುತ್ತಿದ್ದೆವು. ಒಲ್ಲದ ಮನಸ್ಸಿನಿಂದ ಗಣೇಶನಿಗೆ ವಿದಾಯ ಹೇಳಿ ಮನೆಗೆ ಬಂದು ಕಣ್ಣೀರು ಹಾಕಿದ್ದು ನೆನಪಿದೆ. ಒಟ್ಟಿನಲ್ಲಿ ಎದುರಾದ ಜವಾಬ್ದಾರಿಗಳನ್ನು ನಿಭಾಯಿಸುವ ಶಕ್ತಿ, ಪಾಠವನ್ನು ಗಣೇಶನ ಹಬ್ಬವು ಕಲಿಸಿದೆ ಎಂದರೇ ತಪ್ಪಾಗದು. ಹಳೆಯ ನೆನೆಪಿನ ಬುತ್ತಿಯನ್ನು ಈ ಬಾರಿಯ ಗಣೇಶ ಹಬ್ಬವು ಮತ್ತೆ ನೆನಪಿಸಿದೆ.

ವಿಜಯಕುಮಾರ್‌

ಗದಗ

Advertisement

Udayavani is now on Telegram. Click here to join our channel and stay updated with the latest news.