ಭಾರತೀಯರಿಗೆ ಹನ್ನೆರಡು ತಿಂಗಳೂ ಹಬ್ಬ ಮತ್ತು ಸಂಭ್ರಮ. ಉತ್ತರ ಹಾಗೂ ದಕ್ಷಿಣ ಭಾರತದ ಹಬ್ಬಗಳ ಆಚರಣೆ ಹೇಗೆ ವಿಭಿನ್ನವೋ ಹಾಗೆ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದಲ್ಲೂ ಕೂಡ. ನಾನು ಹುಟ್ಟಿ ಬೆಳೆದದ್ದು ಮೈಸೂರಿನಲ್ಲಿ ಆದರೆ ನನ್ನ ತಂದೆ ತಾಯಿ ಹುಬ್ಬಳ್ಳಿಯವರು. ಹೀಗಾಗಿ ಮನೆಯಲ್ಲಿ ನಮ್ಮ ಆಡು ಭಾಷೆ, ಅಡುಗೆ ಎಲ್ಲ ಉತ್ತರ ಕರ್ನಾಟಕದ್ದು.
ಬಾಲ್ಯದಿಂದಲೂ ಎರಡು ಪ್ರದೇಶಗಳನ್ನು ಹೋಲಿಸಿ ಮತ್ತು ವ್ಯತಿರಿಕ್ತಗಳನ್ನ ಪ್ರಶ್ನಿಸುತ್ತಾ ನನ್ನ ಅಮ್ಮನ ತಲೆ ತಿನ್ನುತಿದ್ದೆ. ಅದರಲ್ಲೂ ಗಣೇಶ ಚತುರ್ಥಿ ಬಂದರೆ ಮುಗಿತು. ಮೈಸೂರಿನಲ್ಲಿ ಗಣೇಶ ಹಬ್ಬದ ಹಿಂದಿನ ದಿನ ಮಂಗಳಗೌರಿ ಹಬ್ಬ. ಅಂದು ವ್ರತ ಮಾಡುವ ಸುಮಂಗಲಿಯರು ಗೌರಿ ಧಾರವನ್ನು ಕೈಗೆ ಕಟ್ಟಿಕೊಂಡಿ ಮುತ್ತೆ„ದೆಯರಿಗೆ ಬಾಗಿನ ಕೊಡುವ ಪದ್ಧತಿ. ಆದರೆ ಉತ್ತರ ಕರ್ನಾಟದಲ್ಲಿ ಶ್ರಾವಣ ಗೌರಿಯು ಪೂರ್ತಿ ಶ್ರಾವಣ ಮಾಸದ 4-5 ಶುಕ್ರವಾರಗಳು ಸ್ಥಾಪಿತಳಾಗಿ ಅಷ್ಟಮಿ ದಿನದಂದು ಸುಮಂಗಲಿಯರು ಗೌರಿಯ ನೈರ್ಮಲ್ಯವನ್ನು ಧಾರದಲ್ಲಿ ಕಟ್ಟಿ ಅದನ್ನು ಕೊರಳಿನಲ್ಲಿ ಧರಿಸುತ್ತಾರೆ.
ಹೀಗೆ ಗೌರಿಯ ಮಣ್ಣಿನ ಮೂರ್ತಿಯನ್ನು ಇಡುವ ಪದ್ಧತಿ ನಮ್ಮ ತವರಿನಲ್ಲಿ ಇಲ್ಲ. ಆದರೆ ನನ್ನ ಅಕ್ಕ ಚಿಕ್ಕವಳಾಗಿದ್ದಾಗ ನಮ್ಮ ತಂದೆಯೊಡನೆ ಮಣ್ಣಿನ ಗಣಪನ ಮೂರ್ತಿಯನ್ನು ತರಲು ಪೇಟೆಗೆ ಹೋದಾಗ ಬಹಳ ಹಠ ಮಾಡಿ ಒಂದು ಪುಟ್ಟ ಗೌರಿನೂ ತಂದಳಂತೆ. ನಮ್ಮ ತಾಯಿಗೆ ಒಂದು ಕಡೆ ಆಶ್ಚರ್ಯ ಮತ್ತೂಂದೆಡೆ ಉದ್ವೇಗ. ಗೌರಿ ಸಾಮಾನ್ಯದ ಹೆಣ್ಣಲ್ಲ ಅವಳ ಜತೆ ವಿಶಿಷ್ಟ ಆಚರಣೆ ಹಾಗೂ ಮಡಿವಂತಿಕೆ ಕೂಡಿದೆ ಅಂತ ಅಮ್ಮ ನಮ್ಮ ತಂದೆಗೆ ಹೇಳಿದರಂತೆ. ಮನೆಗೆ ಗೌರಿ ಬಂದಾಗಿದೆ ಗಣಪನ ಜತೆ ಗೌರಿಯೂ ಒಟ್ಟಿಗೆ ಪೂಜೆ ಮಾಡಿದರಾಯ್ತು ಅಂತ ನಮ್ಮ ತಂದೆ ಹೇಳಿದರಂತೆ.
ಉತ್ತರ ಕರ್ನಾಟಕದಲ್ಲಿ 4-5 ದಿನಗಳ ತನಕ ಗಣೇಶನ ಕೂರಿಸುವ ಪದ್ಧತಿ. ಆದರೆ ಮೈಸೂರಿನಲ್ಲಿ ನಾನು ಕಂಡಂತೆ ಒಂದೇ ದಿವಸ.
ಹಬ್ಬ ತಯಾರಿಯಲ್ಲೇ ಸಂಭ್ರಮ ಪಡುವ ನಾನು ಹಿಂದಿನ ದಿನ ತರಕಾರಿ ತರುವುದರಿಂದ ಹಿಡಿದು ರಂಗೋಲಿ ಹಾಕುವ ತನಕ ನನಗೆ ಏನೋ ಉತ್ಸಾಹ. ನಮ್ಮ ಮನೆಯಲ್ಲಿ ತುಂಬಾ ಮಡಿ. ಯಾವ ರೀತಿಯ ಮಡಿಯೆಂದು ಮತ್ತೂಮ್ಮೆ ತಿಳಿಸುತ್ತೇನೆ.
ಒಟ್ಟಾಗಿ ಹೇಳಬೇಂಕೆಂದ್ರೆ ಹಬ್ಬದ ದಿನವೇ ಮಡಿಯಲ್ಲಿ ಅಡುಗೆ ಮಾಡಿ ದೇವರಿಗೆ ನೈವೇದ್ಯ. ನನ್ನ ಅಮ್ಮ ಬಾಳೆ ಎಲೆ ತುದಿಯಿಂದ ತುದಿಯ ತನಕ ತುಂಬುವಷ್ಟು ರುಚಿರುಚಿಯಾದ ಅಡಿಗೆ ಮಾಡಿದ್ದರು. ನಮ್ಮ ಬೀದಿಯ ಉದ್ದಕ್ಕೂ ಮನೆಯವರ ಗಣಪತಿ ದರ್ಶನಕ್ಕೆಂದು ಹೋಗಿ ಸಿಹಿ ತಿನಿಸುಗಳನ್ನು ಸಂಗ್ರಹಿಸಿ ಮನೆಗೆ ತಂದು ಅಮ್ಮ ನೀನು ಯಾಕೆ ಒಬ್ಬಟ್ಟು ಚಕ್ಕುಲಿ ಚಿರೋಟಿ ಮಾಡೋದಿಲ್ಲ ಅಂತ ಹೇಳುತ್ತಿದ್ದೆ.
ಮೋದಕದಲ್ಲೂ ವಿವಿಧತೆ, ಕರ್ಚಿಕಾಯಿಯು ಕೂಡ. ಹೋಳಿಗೆಯಂತೂ ಕೇಳಲೇ ಬೇಡಿ ! ನನ್ನ ಗೆಳತಿಯ ಮನೆಯಲ್ಲಿ ಹಿಂದಿನ ದಿನವೇ ಕಾಯಿ ಒಬ್ಬಟ್ಟು, ಕರ್ಚಿಕಾಯಿ ಹೀಗೆ ತಿನಿಸುಗಳನ್ನು ಮಾಡಿ ಮಾರನೇ ದಿನ ಗಣಪನಿಗೆ ನೈವೇದ್ಯ ಮಾಡುತ್ತಿದ್ದರು. ಅದನ್ನು ತಿಳಿದ ನಾನು ತುಂಬಾ ಖುಷಿ ಇಂದ ಅಮ್ಮನಿಗೆ ಐಡಿಯಾ ಕೊಡೋಣ ಅಂತ ಬೇಗಬೇಗನೆ ಮನೆಗೆ ಬಂದು ಹೇಳಿದೆ. ಒಂದೇ ಕ್ಷಣದಲ್ಲಿ ಅಮ್ಮ ನಮ್ಮ ಮನೆಯಲ್ಲಿ ಹಬ್ಬದ ದಿನವೇ ಮಾಡಬೇಕು ಅಂತ ಹೇಳಿ ನನ್ನ ಬಾಯಿ ಮುಚ್ಚಿಸಿದಳು.
ಮತ್ತೂಂದು ಸವಿ ನೆನಪು ಅಂದರೆ ಶಮಂತಕ ಮಣಿಯ ಕಥಾ ಶ್ರಾವಣ ಮತ್ತು ಚಂದ್ರನ ದರ್ಶನ ಮಾಡಬಾರದೆಂದು ಎಲ್ಲರು ಹೇಳಿದರು ಏನೋ ಹುಡುಗುಬುದ್ಧಿ ನೋಡೇ ಮುಂದಿನ ಕೆಲಸ.
ಗಣಪನ ವಿಸರ್ಜನೆ ಮತ್ತೂಂದು ಸ್ವಾರಸ್ಯಕರ ಕೆಲಸ. ಕೆರೆ ನದಿಯಲ್ಲಿ ವಿಸರ್ಜನೆ ಮಾಡುವುದು ಸಂಪ್ರದಾಯ. ಆದರೆ ಆ ಸೌಲಭ್ಯವಿಲ್ಲದಿದ್ದರೆ ಬಾವಿಯಲ್ಲಿ ಗಣಪನ ಬೀಳ್ಕೊಡುಗೆ. ನಮ್ಮ ಬೀದಿಯಲ್ಲಿ ಒಂದೆರಡು ಮನೆಯಲ್ಲಿ ಮಾತ್ರ ಬಾವಿ ಇದ್ದದ್ದು. ಅವು ಗಳಲ್ಲಿ ಒಬ್ಬರು ಮಾತ್ರ ನಮ್ಮ ಗಣೇಶನ ವಿಸರ್ಜನೆ ಅನು ಮತಿ ಕೊಟ್ಟಿದ್ದರು. ರಾತ್ರಿ 9-10 ಗಂಟೆಗೆ ಮೆರವಣಿಗೆ. ಎಲ್ಲರ ಕೈಯಲ್ಲೂ ದೇವರು, ಗಂಟೆ, ಜಾಗಟೆ, ಮಂತ್ರ ಸ್ತೋತ್ರಗಳ ಜಪ.
ಮೈಸೂರಿನಲ್ಲೇ ಅತ್ಯಂತ ಪ್ರಸಿದ್ಧವಾದ 101 ಗಣಪತಿ ದೇವಸ್ಥಾನ ನಮ್ಮ ಮನೆಯಿಂದೆ ಕೆಲವೇ ನಿಮಿಷದಲಿದ್ದು ಅಲ್ಲಿಗೆ ಹೋಗುವುದು ಒಂದು ಸಂಪ್ರದಾಯವೇ ಆಗಿತ್ತು.
ಬೆಂಗಳೂರಿಗೆ ಬಂದ ಅನಂತರ ಬಕೇಟಿನಲ್ಲಿ ಗಣಪನ ವಿಸರ್ಜನೆ ಕೇಳಿ ವಿಚಿತ್ರ ಅನಿಸಿತು. ಲಂಡನ್ನಿನಲ್ಲಿ ನಮ್ಮ ಅತ್ತೆ ಮಾವ ಬಂದಾಗ ನಮ್ಮ ಅತ್ತೆ ಅವರು ಗಣಪತಿಯನ್ನು ಕೆರೆಯಲ್ಲಿಯೇ ವಿಸರ್ಜಿಸಬೇಕು ಅಂದ ಕಾರಣ ಕೆರೆ ಹುಡುಕುವ ಕೆಲಸ ಶುರುವಾಯಿತು. ಅದೊಂದು ಹಾಸ್ಯ ಘಟನೆಯೇ ಸರಿ. ಒಂದು ಪಿತೂರಿ ಮಾಡಿ ಯಾರು ಓಡಾಡದ ಜಾಗವನ್ನು ಹುಡುಕಿ ಅಲ್ಲಿ ಕಳ್ಳರಂತೆ ಕೆಲಸ ಮುಗಿಸಿದ್ದಾಯ್ತು.
ಓಣಿಯಲ್ಲಿ ಇದ್ದ ನಮ್ಮಂತ ಮಕ್ಕಳಲ್ಲಿ ಕಾಂಪಿಟಿಷನ್ ಯಾರು ಹೆಚ್ಚು ಗಣಪತಿಯನ್ನು ನೋಡುತ್ತಾರೋ ಅಂತ.
ಈಗ ವಿದೇಶದಲ್ಲಿ ನೆಲೆಸಿ ಇವೆಲ್ಲ ಸಂಭ್ರಮ ನಮ್ಮ ಮಕ್ಕಳಿಗೆ ಇಲ್ವಲ್ಲಾ ಅನ್ನೋ ಭಯದಲ್ಲಿ ಇದ್ದೆ. ಆದರೆ ಆ ನಿರ್ವಿಘ್ನನ ಕೃಪೆ ಇಲ್ಲೂ ಸಹ ಸ್ನೇಹಿತರು ದರ್ಶನಕ್ಕೆಂದು ಆಮಂತ್ರಿಸುತ್ತಾರೆ. ಹಿಂದೂಗಳ ಸಮೂಹ ಹಾಗೂ ಕನ್ನಡಿಗರ ಬೆಳೆಯುತ್ತಿರುವ ಸಂಖ್ಯೆ ನಮ್ಮ ಮಾತೃ ಭೂಮಿಯ ಸಂಸ್ಕೃತಿ, ಸಂಪ್ರದಾಯ ಮುಂದುವರಿಸಲು ಅಣುವು ಮಾಡಿದೆ. ಲಂಡನ್ನಿನಲ್ಲಿ ಬಹಳಷ್ಟು ದೇವಸ್ಥಾನಗಳಿದ್ದು ನನಗೆ ನಮ್ಮ ದಕ್ಷಿಣ ಭಾರತದ ಗುಡಿಯನ್ನು ನೆನಪಿಸುವ ಗುಡಿಯಂದರೆ ವೆಮºಲಿಯಲ್ಲಿರುವ ಈಶ್ವರ ಆಲಯ ಹಾಗೂ ವಿಂಬಲ್ಡನ್ ಇರುವ ಗಣಪತಿ ದೇವಸ್ಥಾನ. ಇವರೆಡು ಬಹಳ ಸುಂದರ ಗುಡಿಗಳು ಭಕ್ತಿ ಹಾಗೂ ಶ್ರದ್ಧೆಯನ್ನು ಮೂಡಿಸುತ್ತದೆ.
-ರಾಧಿಕಾ ಜೋಶಿ,
ಲಂಡನ್