Advertisement

ತೆರೆಮರೆಯ ವಿನಾಯಕನ ಆಲಯಗಳು..!

10:28 PM Aug 29, 2019 | Sriram |

ಕುಂದಾಪುರ: ಬೈಂದೂರು – ಕುಂದಾಪುರ ತಾಲೂಕುಗಳು ಐತಿಹ್ಯವಾದ ದೇವಸ್ಥಾನಗಳಿಗೆ ಹೆಸರುವಾಸಿ. ಅದರಲ್ಲೂ ವಿಘ್ನ ನಿವಾರಕ ವಿನಾಯಕನ ದೇಗುಲಗಳಲ್ಲಿ ಆನೆಗುಡ್ಡೆ, ಹಟ್ಟಿಯಂಗಡಿ, ಗುಡ್ಡಟ್ಟು ಮುಂಚೂಣಿಯಲ್ಲಿದೆ. ಇವುಗಳೊಂದಿಗೆ ಪುರಾಣ ಪ್ರಸಿದ್ಧ, ಕಾರಣಿಕದ ಆದರೆ ಅಷ್ಟೇನು ಪ್ರಚಾರ ಪಡೆಯದ ಇನ್ನೂ ಅನೇಕ ಗಣಪನ ಆಲಯಗಳು ಉಭಯ ತಾಲೂಕುಗಳಲ್ಲಿದೆ. ಅವುಗಳಲ್ಲಿ ಕೆಲವು ಆರಾಧನಾ ಕೇಂದ್ರಗಳ ಮಾಹಿತಿ ಇಲ್ಲಿದೆ.

Advertisement

ಮೆಟ್ಕಲ್‌ಗ‌ುಡ್ಡ : ಸಾವಿರಾರು
ಅಡಿ ಎತ್ತರದಲ್ಲಿ ದೇಗುಲ
ಹೊಸಂಗಡಿಯಿಂದ ಸುಮಾರು 3 ಕಿ.ಮೀ. ದೂರದ ಸಾವಿರಾರು ಅಡಿ (ಅಂದಾಜು 2 ಸಾವಿರ ಅಡಿ) ಎತ್ತರದಲ್ಲಿರುವ ಮೆಟ್ಕಲ್‌ಗ‌ುಡ್ಡದಲ್ಲಿ ಈ ಮಹಾ ಗಣಪತಿಯ ದೇವಸ್ಥಾನವಿದೆ.


ಈ ದೇವಸ್ಥಾನ ಕೆಳದಿಯ ರಾವವಂಶಸ್ಥ ಶಿವಪ್ಪ ನಾಯಕನ ಕಾಲದಿಂದ ಪೂಜಿಸಲ್ಪಡುತ್ತಿದ್ದು, ಆತನ ಕೋಟೆಯೂ ಈ ದೇಗುವಲವಿರುವ ಗುಡ್ಡದಲ್ಲಿಯೇ ಇತ್ತು ಎನ್ನುವ ಮಾಹಿತಿಯಿದೆ. ಇಲ್ಲೊಂದು ಕೆರೆಯಿದ್ದು, ಇದರಲ್ಲಿ ಎಂದಿಗೂ ನೀರು ಬತ್ತುವುದಿಲ್ಲ. ಇಲ್ಲಿ ನಿಂತು ನೋಡಿದರೆ ಸುತ್ತ ಆವರಿಸುವ ಪಶ್ಚಿಮ ಘಟ್ಟ, ವಾರಾಹಿ ನದಿಯಂತಹ ನಿಸರ್ಗ ರಮಣೀಯವಾದ ಸೌಂದರ್ಯವನ್ನು ಆಸ್ವಾದಿಸಬಹುದು. ಪ್ರತಿ ಮಂಗಳವಾರ ಪೂಜೆ ಇರುತ್ತದೆ. ಚೌತಿ, ಸಂಕಷ್ಟಿ ದಿನಗಳಲ್ಲಿ ವಿಶೇಷ ಪೂಜೆಯಿರುತ್ತದೆ.

ಪಡುಮುಂಡು : ಕಲ್ಲುಗಣಪತಿ
ಸಾೖಬ್ರಕಟ್ಟೆ ಯಿಂದ ಉಡುಪಿಗೆ ಹೋಗುವ ರಸ್ತೆಯ ಪಡು ಮುಂಡುವಿನಲ್ಲಿ ಕಲ್ಲು ಬಂಡೆಗಳ ಗುಹೆಯೊಳಗೆ ಈ ಶ್ರೀ ಉಮಾ ಮಹೇಶ್ವರೀ ಕಲ್ಲು ಗಣಪತಿ ದೇವಸ್ಥಾನವಿದೆ.


ಇಲ್ಲಿ ಶಿವ ಹಾಗೂ ಪಾರ್ವತಿ ಉದ್ಭವ ಮೂರ್ತಿಗಳಾಗಿದ್ದರೆ, ಕಲ್ಲು ಗಣಪತಿಯು ಪ್ರತಿಷ್ಠಾಪಿಸಲ್ಪಟ್ಟಿದೆ.ಬಾಕೂìರು ರಾಜಮನೆತನದವರು ಈ ದೇವಸ್ಥಾನವನ್ನು ಅಭಿವೃದ್ಧಿಪಡಿಸಿದ್ದಾರೆ.

ನುಕ್ಯಾಡಿ : ಉದ್ಭವ ಮಹಾಗಣಪತಿ
ಅಂಪಾರು ಗ್ರಾಮದಲ್ಲಿರುವ ನುಕ್ಯಾಡಿಯ ಸುಮಾರು 100 ಅಡಿ ಎತ್ತರದಲ್ಲಿರುವ ಈ ದೇವಸ್ಥಾನದಲ್ಲಿ ಗಣಪ ಉದ್ಭವವಾಗಿ ನೆಲೆ ನಿಂತಿದ್ದಾನೆ. ಇದು ನುಕ್ಯಾಡಿ ಆನೆಗುಡ್ಡೆ ಮಹಾಗಣಪತಿ ದೇಗುಲವೆಂದೇ ಹೆಸರುವಾಸಿಯಾಗಿದೆ. ಕ್ರೋಢಬೈಲೂ ರಿಗೂ ಹತ್ತಿರವಾಗಿದ್ದು, ಅಂಪಾರಿನಿಂದ ಸುಮಾರು 3 ಕಿ.ಮೀ. ದೂರದಲ್ಲಿದೆ.

ಕೊಳನಕಲ್ಲು : ಕಲ್ಲಿನ ಮೇಲೆ ಉದ್ಭವಿಸಿದ ಮಹಾಗಣಪತಿ
ಹಾರ್ದಳ್ಳಿ- ಮಂಡಳ್ಳಿ ಗ್ರಾಮದ ಶ್ರೀ ಮಹಾಗಣಪತಿ ದೇವಸ್ಥಾನ ಕೊಳನಕಲ್ಲು ದೇವಸ್ಥಾನದಲ್ಲಿ ಆರಾಧಿಸಲ್ಪಡುವ ವಿನಾಯಕನು ಬೃಹದಾಕಾರದ ಕಲ್ಲಿನ ಮೇಲೆ ಉದ್ಭವಿಸಿದ್ದಾನೆ.


ಬಾರಕೂರಿನ ಭೈರವ ಗಣಪತಿ ದೇವಸ್ಥಾನವಿರುವ ಚೌಳಿ ಕೆರೆಯಿಂದ ಹಾರಿ ಬಂದ ವಿನಾಯಕನು ಇಲ್ಲಿ ನೆಲೆ ನಿಂತಿದ್ದಾನೆ. ಹಾಗಾಗಿ ಈ ಊರಿಗೆ ಹಾರ್ದಳ್ಳಿ – ಮಂಡಳ್ಳಿ ಎನ್ನುವ ಹೆಸರು ಬಂತು ಎನ್ನುವ ಐತಿಹ್ಯವಿದೆ. ದೇವರ ಪಾದದಡಿ, ಕಲ್ಲಿನ ಮೇಲಿರುವ ಕೊಳದಲ್ಲಿ ಬೇಸಗೆ ಸೇರಿದಂತೆ ವರ್ಷದ ಎಲ್ಲ ದಿನಗಳಲ್ಲೂ ನೀರು ಬತ್ತಿ ಹೋಗದೇ ಇರುವುದು ವಿಶೇಷ.

Advertisement

ಗುಡ್ಡಟ್ಟು : ಕಲ್ಲು ಬಂಡೆಯ ಮಧ್ಯೆ ಉದ್ಭವಿಸಿದ ವಿನಾಯಕ
ಯಡಾಡಿ – ಮತ್ಯಾಡಿ ಗ್ರಾಮದ ಗುಡ್ಡಟ್ಟುವಿನಲ್ಲಿ ಒಂದು ಕಲ್ಲು ಬಂಡೆಯ ಚಿಕ್ಕ ಗುಹೆಯಲ್ಲಿ ಸ್ವಾಭಾವಿಕವಾಗಿ ಉದ್ಭವಿಸಿದ ಸುಮಾರು 4 ಅಡಿ ಎತ್ತರದ ಗಣಪತಿ ವಿಗ್ರಹವಿರುವುದು ಶ್ರೀ ವಿನಾಯಕ ದೇವಸ್ಥಾನದ ವೈಶಿಷ್ಟ್ಯ.


ಉಡುಪಿಯಿಂದ ಬಾರಕೂರು, ಸಾೖಬ್ರಕಟ್ಟೆ ಮಾರ್ಗವಾಗಿ ಗುಡ್ಡಟ್ಟು ದೇವಸ್ಥಾನ ಸುಮಾರು 26 ಕಿ.ಮೀ. ದೂರವಿದೆ. ಕುಂದಾಪುರದಿಂದ 19 ಕಿ.ಮೀ. ಅಂತರವಿದೆ. ಆಯಿರ ಕೊಡ (ಸಾವಿರ ಕೊಡ) ಎನ್ನುವುದು ಇಲ್ಲಿ ನಡೆಯುವ ಒಂದು ವಿಶೇಷ ಆಚರಣೆ.

ಗೋಳಿಹೊಳೆ : ಬಿಳಿ ಶಿಲೆಗಣಪತಿ
ಗೋಳಿಹೊಳೆಯಲ್ಲಿ ಬಿಳಿ ಶಿಲೆಯನ್ನು ಹೊಂದಿರುವ ಗಣಪತಿಯ ವಿಗ್ರಹ ಹೊಂದಿದ್ದು, 36 ಇಂಚು ಎತ್ತರವಿದೆ. ಬಿಳಿ ಶಿಲೆಯ ವಿಗ್ರಹ ವಿರುವ ಅಪರೂಪದ ದೇವಸ್ಥಾನ ಇದಾಗಿದೆ.


ಈ ದೇವಸ್ಥಾನದ ಸಮೀಪವೇ ನಾಗ ಚೌಂಡೇಶ್ವರಿ ಪುಷ್ಕರಣಿಯಿದ್ದು, ಇಲ್ಲಿ ನೀರು ಕಡಿಮೆಯೇ ಆಗುವುದಿಲ್ಲ ಎನ್ನುವ ಮಾತಿದೆ.

Advertisement

Udayavani is now on Telegram. Click here to join our channel and stay updated with the latest news.

Next