Advertisement

ಗಣೇಶೋತ್ಸವಕ್ಕೆ ರಾಜಕೀಯ ಕಪ್ಪ ಯಾಕೆ?

12:51 PM Sep 13, 2018 | Sharanya Alva |

ಮತ್ತೊಂದು ಗಣೇಶನ ಹಬ್ಬ ಬಂದಿದೆ. ಲೋಕಮಾನ್ಯ ಬಾಲಗಂಗಾಧರ ತಿಲಕರು 1893ರಲ್ಲಿ ಮೊದಲ ಬಾರಿಗೆ ಸಾರ್ವಜನಿಕ ಗಣೇಶೋತ್ಸವವನ್ನು ಪ್ರಾರಂಭಿಸಿದಾಗ ಲಕ್ಷಾಂತರ ಭಾರತೀಯರ ಕಂಗಳಲ್ಲಿ ಸ್ವಾತಂತ್ರ್ಯದ ಕನಸಿತ್ತು. ಸಾವಿರಾರು ದೇಶಭಕ್ತರ ಅಂತರಂಗದ ಸ್ವಾತಂತ್ರ್ಯದ ತುಡಿತಕ್ಕೆ ಗಣೇಶೋತ್ಸವ ಒಂದು ಅಭಿವ್ಯಕ್ತ ವೇದಿಕೆಯಾಗಿತ್ತು. ಗಣೇಶೋತ್ಸವ ವೇದಿಕೆಗಳಿಂದ ಹೊರಹೊಮ್ಮಿದ ವಿಚಾರಧಾರೆಗಳು, ಕ್ರಾಂತಿಯ ಭಾಷಣಗಳು ಲಕ್ಷಾಂತರ ಭಾರತೀಯ ಯುವ ಮನಸ್ಸುಗಳಲ್ಲಿ ಗುಪ್ತಗಾಮಿನಿಯಾಗಿದ್ದ ಸ್ವಾತಂತ್ರ್ಯದ ಕೆಚ್ಚನ್ನು ಉದ್ದೀಪನಗೊಳಿಸಿ ಬಡಿದೆಬ್ಬಿಸಿತ್ತು. ಪೂನಾದಲ್ಲಿ ಮೊದಲ ಗಣೇಶೋತ್ಸವ ಏರ್ಪಡಿಸಿದ್ದ ತಿಲಕರು ತಮ್ಮ ಪತ್ರಿಕೆ “ಕೇಸರಿ’ ಮತ್ತು ತಮ್ಮ ಪ್ರಭಾವಶಾಲಿ ಭಾಷಣಗಳ ಮೂಲಕ ಗಣೇಶೋತ್ಸವವನ್ನು ಮಹಾರಾಷ್ಟ್ರದಾದ್ಯಂತ ಜನಪ್ರಿಯಗೊಳಿಸಿದ್ದರು. ಈ ವೇದಿಕೆಗಳು ಕೇವಲ ಭಾಷಣಕ್ಕಷ್ಟೇ ಸೀಮಿತವಾಗದೆ ಮಲ್ಲಕಂಭ, ಕುಸ್ತಿ ಮೊದಲಾದ ದೇಸೀ ಕ್ರೀಡೆಗಳಿಗೆ, ದೇಶಭಕ್ತಿ ಗೀತೆ, ಜಯ ಘೋಷಣೆಗೂ ನಾಂದಿಯಾಗಿತ್ತು. ಗಣಪತಿ ಬಪ್ಪ ಮೊರಯಾ ಘೋಷಣೆಯೊಂದಿಗೇ ಸಂವಾದಿಯಾಗಿ ” ಸ್ವಾತಂತ್ರ್ಯ ಲಕ್ಷ್ಮೀ ಕೀ ಜೈ’ ಘೋಷಣೆಯೂ ಲಕ್ಷಾಂತರ ಜನರ ನಾಡಿ ಮಿಡಿತಕ್ಕೆ ಸಾಕ್ಷಿಯಾಗಿ ರೋಮಾಂಚನಗೊಳಿಸಿತ್ತು.

Advertisement

ಕಾಂಗ್ರೆಸ್‌ ಪಕ್ಷ ಅಧಿಕೃತವಾಗಿ ಅಲ್ಲಿಯವರೆಗೆ ಮಾಡದ ಒಂದು ಸಾರ್ವಜನಿಕ ಕಾರ್ಯಸೂಚಿಯನ್ನು ತಿಲಕರು ರೂಪಿಸಿದ್ದರು. ಸಾರ್ವಜನಿಕ ಧಾರ್ಮಿಕ ಉತ್ಸವವೊಂದು ಜನಾಂದೋಲನವಾಗಿ ರೂಪುಗೊಂಡದ್ದು ಕೂಡ ಭಾರತದ ಇತಿಹಾಸದ ಒಂದು ಅಪೂರ್ವ ಮೈಲಿಗಲ್ಲೇ ಸರಿ! ಒಟ್ಟಾರೆ ತಿಲಕರು ಈ ಗಣೇಶೋತ್ಸವದ ಮೂಲಕ ಸ್ವಾಭಿಮಾನ, ಸ್ವಾತಂತ್ರ್ಯ ಹಾಗೂ ನಮ್ಮತನದ ಕಿಚ್ಚು ಹೊತ್ತಿಸಿದ್ದರು. ಆದರೆ ಇಂದು ಏನಾಗಿದೆ? ಮನೆಯಿಂದ ಬೀದಿಗೆ ಬಂದ ಗಣೇಶ ಉತ್ಸವ ಮುಗಿಸಿ ಒಂದು ರೌಂಡ್‌ ಹೊಡೆದು ವಾಪಸ್‌ ತನ್ನ ಮನೆಗೆ ಹೋಗಿ ಕೂತಂತಾಗಿದೆ. ಹಾಗಾಗಿಯೇ ಊರಿಗೆ ಒಂದಿದ್ದ ಗಣೇಶ ನೂರಾಗಿ ಸಾವಿರವಾಗಿ ಗಲ್ಲಿ, ಗಲ್ಲಿಗಳಲ್ಲಿ, ಕೇರಿಕೇರಿಗಳಲ್ಲಿ ವಿರಾಜಮಾನನಾಗಿದ್ದಾನೆ. ಐಕ್ಯತೆ,
ಒಂದುಗೂಡಿಸುವ ಶಕ್ತಿ ಇದ್ದ ಗಣೇಶ ತಾನೇ ನೂರು ಸಾವಿರವಾಗಿ ಪ್ರತ್ಯೇಕಗೊಂಡಿದ್ದಾನೆ.

ಗಣೇಶನ ಹೆಸರಲ್ಲಿ ಒಂದಾಗಬೇಕಿದ್ದ ಯುವಶಕ್ತಿ ಅದೇ ಗಣೇಶನ ಹೆಸರಲ್ಲಿ ನೂರೆಂಟು ಸಂಘ ಕಟ್ಟಿಕೊಂಡು ಬೇರೆ ಬೇರೆಯಾಗಿದೆ. ಭೌಗೋಳಿಕ ವಿಸ್ತಾರತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ದೃಷ್ಟಿಯಿಂದ ಇದು ಸರಿಯೇ ಎಂದು ಒಪ್ಪೋಣ. ಆದರೆ ಎಲ್ಲರಿಗೂ ತಮ್ಮ ಗಣೇಶನನ್ನು ವೈಭವದಿಂದ ಮೆರೆಸುವ ತವಕ. ಅದಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುವ ಉಮೇದು! ಪೆಂಡಾಲ್‌ ನಲ್ಲಿ ಝಗಮಗಿಸುವ ಕಣ್‌ ಕೋರೈಸುವ ಲೇಸರ್‌ ದೀಪಗಳಲ್ಲಿ, ಆಡಂಬರದ ಆರ್ಕೆಸ್ಟ್ರಾಗಳಲ್ಲಿ, ರಾಕ್‌ ಡಾನ್ಸ್‌ಗಳಲ್ಲಿ ತಿಲಕರ ಗಣೇಶ ಕಳೆದುಹೋಗಿದ್ದಾನೆ ಎಂಬುದೇ ದುರಂತ. ಕಿವಿ ತೂತಾಗುವ ಡಿಜೆಗಳಲ್ಲಿ, ಪರಿಸರ ಕೆಡಿಸುವ ಮದ್ದುಗುಂಡುಗಳ ಸಿಡಿಸುವ ಪೈಪೋಟಿಯಲ್ಲಿ ಗಣೇಶೋತ್ಸವದ ಔಚಿತ್ಯವನ್ನೇ ನಾವೆಲ್ಲಾ ಮರೆತುಬಿಟ್ಟಿದ್ದೇವೆ.

ತಿಲಕರ ಗಣೇಶೋತ್ಸವದ ಮೂಲ ಉದ್ದೇಶವೇ ಸ್ವಾತಂತ್ರ್ಯದ ಪ್ರೇರಣೆ, ಸ್ವಾಭಿಮಾನದ ಉದ್ದೀಪನ ಹಾಗೂ ದೇಶೀ ಸಂಸ್ಕೃತಿಯ ಅನಾವರಣವಾಗಿತ್ತು. ಆದರೆ ಇವತ್ತು ಅವು ಯಾವುವೂ ಗಣೇಶೋತ್ಸವದ ಹಿಂದಿನ ಕಾರಣ ಹಾಗೂ ಪ್ರೇರಣೆಗಳಾಗಿ ಉಳಿದಿಲ್ಲ. ಅಂದು ಪರಕೀಯರಿಂದ ಸ್ವಾತಂತ್ರ್ಯ ಪಡೆಯಲು ಹೋರಾಡಬೇಕಿತ್ತು..ಇಂದು ಆಳುವ ನಮ್ಮವರಿಂದಲೇ ನಾವು ಆಂತರಿಕ ತ್ರ್ಯ ಪಡೆಯಲು ಒದ್ದಾಡಬೇಕಿದೆ. ನಮಗೆ ಭಯಮುಕ್ತ ವಾತಾವರಣವಿಲ್ಲ, ನಮಗೆ ಅನಿಸಿದ್ದನ್ನು ಹೇಳುವ ಸ್ವಾತಂತ್ರ್ಯವಿಲ್ಲ. ಉಗ್ರವಾದಿಗಳ ಮೇಲಿನ ಭಯದಂತೆಯೇ ನಮಗೆ ಪ್ರಭಾವಶಾಲಿ ಭ್ರಷ್ಟರ ಭಯ, ಉಳ್ಳ ಶ್ರೀಮಂತರ, ರೌಡಿಗಳ ಭಯವೂ ಇದೆ. ಅವರ ವಿರುದ್ಧ ಮಾತನಾಡಲಾರೆವು, ಧ್ವನಿ ಎತ್ತಲಾರೆವು. ಭ್ರಷ್ಟತೆಯೇ ಶಿಷ್ಟತೆಯಾಗಿ ವ್ಯವಸ್ಥೆ ಎಷ್ಟು ಕೆಟ್ಟರೂ ಸರಿ ಎಂದು ಸಹಿಸಿಕೊಂಡು ಸ್ವಾತಂತ್ರ್ಯದ ಹಂಬಲವೇ ಇಲ್ಲದೆ ಸುಮ್ಮನಿದ್ದೇವೆ. ಇಂತಹ ಒಂದು ಆಂತರಿಕ ಸ್ವಾತಂತ್ರ್ಯಕ್ಕಾಗಿ,  ವ್ಯವಸ್ಥೆಯನ್ನು ಸರಿಪಡಿಸಲಿಕ್ಕಾಗಿ, ಭ್ರಷ್ಟತೆಯ ದಮನಕ್ಕಾಗಿ ಯಾವ ಗಣೇಶೋತ್ಸವವವೂ ಬದ್ಧವಾಗಿಲ್ಲ. ಇಂತಹ ಸ್ವಾತಂತ್ರ್ಯವನ್ನು ಈ ಗಣೇಶೋತ್ಸವ ಕೊಡಿಸುತ್ತದಾ? ಗಣೇಶನ ನೆಪದಲ್ಲಿ ಇಂಥದ್ದೊಂದು ಜನಾಂದೋಲನ ನಡೆಯುವುದುಂಟಾ? ಸದ್ಯದ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ ಎನಿಸುತ್ತದೆ.

ಎರಡನೆಯದು ಸ್ವಾಭಿಮಾನ. ನಮ್ಮ ಗಣೇಶೋತ್ಸವವು ರಾಜಕೀಯ ಪ್ರೇರಿತ ಜಾಥಾಗಳ್ಳೋ, ಸಮಾವೇಶಗಳ್ಳೋ ಆಗಿ ಪರಿವರ್ತನೆಗೊಳ್ಳುತ್ತಿರುವುದಂತೂ ತೀರಾ ದುರಂತದ ಸಂಗತಿ, ಬಹುತೇಕ ಎಲ್ಲಾ ಯುವಕ ಸಂಘಗಳಿಗೆ ರಾಜಕೀಯ ವ್ಯಕ್ತಿಗಳು ಮತ್ತು ಪಕ್ಷಗಳು ಅನಿವಾರ್ಯವಾಗಿವೆ. ನಮ್ಮ ವೈಭವದ ಗಣೇಶೋತ್ಸವಗಳಿಗೆ ಸಾರ್ವಜನಿಕರಿಂದ ದುಡ್ಡು ಸಂಗ್ರಹಿಸುವುದು ಅಷ್ಟು ಸುಲಭವಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಮನೆ ಮನೆಗೆ ಹೋಗಿ ಗಣೇಶೋತ್ಸವದ ಸಾಂಸ್ಕೃತಿಕ ಹಿನ್ನೆಲೆ, ಮಹತ್ವ ಹೇಳಿ ದುಡ್ಡು ಸಂಗ್ರಹಿಸುವ ಇಚ್ಛಾಶಕ್ತಿ, ಸಮಯ ಯಾರಿಗೂ ಇಲ್ಲ. ಅಂತಹ ಒಂದು ಆಚರಣೆಯಲ್ಲಿ ಉದಾತ್ತ, ವಿಭಿನ್ನ ಧ್ಯೇಯ ಇದೆ ಎಂದು ಜನರೂ ನಂಬುವುದಿಲ್ಲ, ಗಣಪತಿ ಸಂಘಗಳಿಗೆ
ಜನರನ್ನು ನಂಬಿಸುವ ಅಥವಾ ಅವರ ಭಾವನೆಗಳಿಗೆ ಸ್ಪಂದಿಸುವ ಅಗತ್ಯವೂ ಇಲ್ಲ, ಅದು ಅನಿವಾರ್ಯವೂ ಅಲ್ಲ. ಯಾಕೆಂದರೆ ಸುಲಭವಾಗಿ ಹಣ ಸಿಗುವಾಗ ಚಿಲ್ಲರೆ ಕಾಸಿಗಾಗಿ ಗಾಳಿಗೆ ಗುದ್ದಿ ಮೈ ನೋವು ಮಾಡಿಕೊಳ್ಳುವ ಪ್ರಮೇಯ ಯಾರಿಗೂ ಬೇಡ. 

Advertisement

ಇದನ್ನೇ ನಮ್ಮ ರಾಜಕೀಯ ವ್ಯಕ್ತಿಗಳು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದಾರೆ. ರಾಜಕೀಯ ವ್ಯಕ್ತಿಗಳು, ಪಕ್ಷಗಳು ಗಣಪತಿ ಎಂದು ಹೋದವರನ್ನು ಬರಿಗೈಲಿ ಕಳಿಸುವುದು ಕಡಿಮೆ. ಅದು ತನ್ನ ಕ್ಷೇತ್ರಕ್ಕೆ ಸಂಬಂಧಿಸಲಿ, ಸಂಬಂಧಿಸದಿರಲಿ ತಮ್ಮ ಬೇಳೆ ಬೇಯಿಸಿಕೊಳ್ಳುವುದಂತೂ ಖಂಡಿತಾ! ಚುನಾವಣೋತ್ಸವ ಮುಂದಿರುವ ಹಿನ್ನೆಲೆಯಲ್ಲಿ ಈ ವರ್ಷವಂತೂ ಗಣೇಶೋತ್ಸವಗಳು ಭಾರೀ ಕಳೆಗಟ್ಟಲಿವೆ. ಹಾಲಿ, ಮಾಜಿಗಳು, ಮಂತ್ರಿ, ಶಾಸಕರಿಂದ ಪಂಚಾಯ್ತಿ ಸದಸ್ಯರವರೆಗೆ, ಜೊತೆಗೆ ಎಲ್ಲ ಪಕ್ಷಗಳ ಮುಂದಿನ ಸಂಭವನೀಯ ಅಭ್ಯರ್ಥಿಗಳು ಗಣೇಶೋತ್ಸವಕ್ಕೆ ಉದಾರವಾಗಿ ದೇಣಿಗೆ ಕೊಡುತ್ತಿದ್ದಾರೆ.

(ಕೆಲವರು ಒಳ್ಳೇ ಉದ್ದೇಶಗಳಿಗೂ ಕೊಡುತ್ತಾರೆ. ಆದರೆ ಇದು ತೀರಾ ನಗಣ್ಯ) ಒಬ್ಬ ತಾಲೂಕು ಮಟ್ಟದ ರಾಜಕೀಯ ವ್ಯಕ್ತಿ
ಒಂದು ಸಾವಿರ ಗಣಪತಿಗಳಿಗೆ ಕನಿಷ್ಟ ರೂ.1000 ದೇಣಿಗೆ ಕೊಡುತ್ತಾರೆ ಎಂದರೂ 10 ಲಕ್ಷ ಆಯಿತು. ಒಂದು ತಾಲೂಕಿನಲ್ಲಿ ಕನಿಷ್ಟ ಐವರು ಮುಖಂಡರು ಈ ರೀತಿ ದೇಣಿಗೆ ಕೊಟ್ಟರೆ 50 ಲಕ್ಷ ಆಗುತ್ತದೆ. ಇನ್ನು ಪಂಚಾಯ್ತಿ ಹಂತದಿಂದ ಇತರೆ 300 ಚುನಾಯಿತ ಪ್ರತಿನಿಧಿಗಳ ದೇಣಿಗೆ ಲೆಕ್ಕವೇ ಬೇರೆ! ಗಣಪತಿಗಳಿಗೆ ಎಂತಹ ಯೋಗ ಬಂದಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಇಂತಹ ದೇಣಿಗೆ ಪಡೆಯಲು ನಮ್ಮ ಯುವಕರು ಕೆಲಸ, ಕಾರ್ಯ, ಸ್ವಾಭಿಮಾನ ಬಿಟ್ಟು ರಾಜಕೀಯ ವ್ಯಕ್ತಿಗಳ ಹಿಂದೆ ಅಲೆದಾಡುವುದನ್ನು ನೋಡಿದಾಗ ಮನಸ್ಸು ಕಲಕಿದಂತಾಗುತ್ತದೆ. ಇನ್ನು ಕೊನೆಯದು, ಗಣಪತಿಯ ಹೆಸರಿನಲ್ಲಿ ದೇಶೀ ಸಂಸ್ಕೃತಿಯ ಅನಾವರಣ! ನಾವು ನಮ್ಮ ಗಣೇಶನನ್ನು ರಾಜಕೀಯ ವ್ಯಕ್ತಿಗಳಿಗೆ ಅಡ ಇಟ್ಟ ಮೇಲೆ ಈ ದೇಶೀ ಸಂಸ್ಕೃತಿ ನೀರಿನ ಮೇಲಿನ ಗುಳ್ಳೆ ಇದ್ದಂತೆ! ಹಾಗೇ ನಮ್ಮ ಸ್ವಾತಂತ್ರ್ಯವನ್ನು ಮರೆತು ಬಿಡುವುದೇ ಒಳ್ಳೆಯದು. ಸಾವಿರ ಸಾವಿರ ದುಡ್ಡು ಕೊಟ್ಟವರು ಸುಮ್ಮನಿರುತ್ತಾರಾ? ಅವರು ತಮ್ಮ ವರ್ಚಸ್ಸು, ಪ್ರಭಾವ ಬೀರಿ ತಮ್ಮದೇ ಒಂದು ಅಜೆಂಡಾ ನೀಡುತ್ತಾರೆ. ಆ ಅಜೆಂಡಾ ಅವರು ಜನಸೇರಿಸಲು ಮಾಡುವ ಚುನಾವಣಾ ಅಜೆಂಡಾದ ಪ್ರತಿರೂಪವೇ ಆಗಿರಬೇಕು. ಅದು
ಅರ್ಕೆಸ್ಟ್ರಾ, ರಾಕ್‌ ಡ್ಯಾನ್ಸ್‌, ಹಾಡು, ಕುಣಿತ ಈ ಮಾದರಿಯ ಕಾರ್ಯಕ್ರಮಗಳೇ ಆಗಿರುತ್ತವೆ.

ಒಂದು ಗಣೇಶೋತ್ಸವಕ್ಕೆ ಮೂವರು ರಾಜಕೀಯ ವ್ಯಕ್ತಿಗಳು ದೇಣಿಗೆ ನೀಡಿದ್ದರೆ ಮೂವರಿಗೂ ಮೂರು ದಿವಸ ಪ್ರತ್ಯೇಕ ಸನ್ಮಾನ. ಅವರಿಗಿಷ್ಟವಾದ( ಗಣಪತಿಗೆ ಅಥವಾ ಜನಕ್ಕೆ ಅಲ್ಲ) ಜನಪ್ರಿಯ ಕಾರ್ಯಕ್ರಮ! ರಚನಾತ್ಮಕ ಯೋಚನೆಗಳನ್ನು, ಅಂದುಕೊಂಡದ್ದನ್ನು ಮಾಡಲೂ ನಮಗೆ ಸ್ವಾತಂತ್ರ್ಯವಿರುವುದಿಲ್ಲ. ಕಮಲಾಪುರದ ಗಜಾನನ ಸೇವಾ ಸಮಿತಿಯಂತೆ ಗಣೇಶೋತ್ಸವದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರ ಅಥವಾ ನಮ್ಮೂರಿನ ಯುವಕರಂತೆ ಪ್ರತಿಭಾ ಪುರಸ್ಕಾರದಂತಹ ರಚನಾತ್ಮಕ ಕಾರ್ಯಕ್ರಮ ಮಾಡುವ
ಅವಕಾಶ ನಮಗಿರುವುದಿಲ್ಲ. ನಮಗಿರುವ ಸ್ವಾತಂತ್ರ್ಯಒಂದೇ ಗಣಪತಿಯ ವಿಸರ್ಜನೆ..! ಹೀಗೆ ನಾವು ಪ್ರತಿವರ್ಷ ಗಣೇಶನನ್ನು ನೀರಲ್ಲಿ ವಿಸರ್ಜನೆ ಮಾಡಿದರೆ. ರಾಜಕೀಯದವರು ನಮ್ಮನ್ನು ಳುಗಿಸುತ್ತಿರುತ್ತಾರೆ..ಹೀಗಿದೆ ನಮ್ಮ ಗಣೇಶೋತ್ಸವ..!

Advertisement

Udayavani is now on Telegram. Click here to join our channel and stay updated with the latest news.

Next