ಮೈಸೂರು: ಈ ಬಾರಿಯ ಗೌರಿ-ಗಣೇಶ ಹಬ್ಬಕ್ಕೆ ವಿಘ್ನ ವಿನಾಯಕ ಮೂರ್ತಿಗಳು ಮಾರುಕಟ್ಟೆ ಪ್ರವೇಶಿಸಲು ಅಣಿಯಾಗಿದ್ದು, ಮೈಸೂರಿನ ವಿವಿಧ ಭಾಗಗಳಲ್ಲಿ ಬಗೆ ಬಗೆಯ ಮೂರ್ತಿಗಳು ಕಲಾವಿದರ ಕೈಯಲ್ಲಿ ಸುಂದರವಾಗಿ ಅರಳಿ ನಿಂತಿವೆ.
ವಿಘ್ನನಿವಾರಕನ ಆಗಮನಕ್ಕೆ ಕೇವಲ 13 ದಿನ ಬಾಕಿ ಇದ್ದು, ನಗರದ ವಿವಿಧ ಭಾಗಗಳಲ್ಲಿ 30ಕ್ಕೂ ಹೆಚ್ಚು ಕುಟುಂಬ 50 ಸಾವಿರದಷ್ಟು ಗಣಪತಿ-ಗೌರಿ ಮೂರ್ತಿ ಸಿದ್ಧಪಡಿಸಿದ್ದು, ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಜತೆಗೆ ಆರೆ ಸ್ಸೆಸ್ ಗಣಪ ಪ್ರಮುಖ ಆಕರ್ಷಣೆಯಾಗಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಮ ವಸ್ತ್ರ ಧರಿ ಸಿ ರುವ ಗಣಪ, ಕೇಸರ ಬಾವುಟ ಹಿಡಿದು ನಿಂತಿರುವುದು ಮತ್ತೂಂದು ವಿಶೇಷ.
8-10 ತಿಂಗಳಿಂದ ತಯಾರಿಕೆ: ನಗರದ ವಿವಿಧ ಭಾಗದ ಗಣೇಶ ಮೂರ್ತಿ ತಯಾರಕರು ಕಳೆದ 8-10ತಿಂಗಳಿನಿಂದ ಸಾವಿರಾರು ಮೂರ್ತಿ ಸಿದ್ಧಪಡಿಸಿದ್ದಾರೆ. ವಿವಿಧ ಮಣ್ಣ, ಆಕೃತಿ ಹಾಗೂ ವಿಶಿಷ್ಟ ಮಾದರಿ ಮೂರ್ತಿ ತಯಾರಿಸಲಾಗಿದೆ. ಬಾಲ ಗಣಪ, ಹಂಸದೊಂದಿಗೆ ಗಣೇಶ, ಬಂದೂಕು ದಾರಿ ಗಣೇಶ ಹಾಗೂ ಗೌರಿ ತೊಡೆ ಮೇಲೆ ಕುಳಿತಿರುವ ಗಣಪ ಸೇರಿ ವಿವಿಧ ಸ್ವರೂಪದ ಮೂರ್ತಿಗಳು ಸೆಳೆಯುತ್ತಿದೆ. ಮನೆ, ವಟಾರ, ಬಡಾವಣೆ, ದೇಗುಲ, ಸಂಘ-ಸಂಸ್ಥೆ, ಕಚೇರಿ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನನ್ನು ಇಡಲು ಅರ್ಧ ಅಡಿಯಿಂದ ಹಿಡಿದು 6 ಅಡಿ ಎತ್ತರದ ಪರಿಸರ ಸ್ನೇಹಿ ಗಣೇಶ ವಿಗ್ರಹ ಮಾರುಕಟ್ಟೆಗೆ ಈಗಾಗಲೇ ಅಡಿಯಿಟ್ಟಿವೆ.
ಪರಿಸರ ಸ್ನೇಹಿ ಗಣೇಶನಿಗೆ ಡಿಮ್ಯಾಂಡ್: ಇತ್ತೀಚೆಗೆ ಜನರಲ್ಲಿ ಪರಿಸರ ಕಾಳಜಿ ಹೆಚ್ಚುತ್ತಿದ್ದು ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಒತ್ತು ನೀಡಲಾಗುತ್ತಿದೆ. ಈ ಹಿನ್ನೆಲೆ ನೈಸರ್ಗಿಕ ಬಣ್ಣ ಲೇಪನದೊಂದಿಗೆ ಮಣ್ಣಿನಿಂದ ತಯಾರಿಸಿದ ಮೂರ್ತಿಗಳ ಖರೀದಿಗೆ ಜನ ಉತ್ಸುಕರಾಗಿದ್ದಾರೆ. ಅಲ್ಲದೇ, ಸಾವಿರಾರು ಮೂರ್ತಿಗಳಿಗೆ ಮುಂಗಡ ಹಣ ನೀಡಿದ್ದಾರೆ. ಜತೆಗೆ ತಯಾರಕರು ಅರ್ಧ ಅಡಿಯಿಂದ ಹಿಡಿದು 6 ಅಡಿ ಎತ್ತರದವರೆಗಿನ ಪರಿಸರ ಸ್ನೇಹಿ ಗಣೇಶ ಮೂರ್ತಿ ಸಿದ್ಧಪಡಿಸಿದ್ದು, ಒಂದೊಂದು ಮೂರ್ತಿಯೂ ವಿಭಿನ್ನ ಶೈಲಿ, ಬಣ್ಣ, ಭಂಗಿಯೊಂದಿಗೆ ತಯಾರಿಸಲಾಗಿದೆ.
ಮಾರುಕಟ್ಟೆಯಲ್ಲಿ ಪಿಒಪಿ ಗಣಪ : ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟರ್ ಆಫ್ ಪ್ಯಾರಿಸ್, ಪೇಪರ್ ಮೌಲ್ಡ್ ಗಣೇಶ ಮೂರ್ತಿಗಳ ಮಾರಾಟ ಮತ್ತು ತಯಾರಿಕೆಯನ್ನು ಸರ್ಕಾರ ನಿಷೇಧಿಸಿದ್ದರೂ ಕೆಲವೆಡೆ ಪಿಒಪಿ ಗಣೇಶ ಮೂರ್ತಿ ಮಾರುಕಟ್ಟೆ ಪ್ರವೇಶಿಸಿವೆ. ಇದರಿಂದ ಸಹಜವಾಗಿಯೇ ನೈಸರ್ಗಿಕ ಉತ್ಪನ್ನ ಬಳಕೆ ಮಾಡಿಕೊಂಡು ತಯಾರಿಸಲಾದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಬೇಡಿಕೆ ತಗ್ಗಲಿದೆ ಎಂಬುದು ಮೂರ್ತಿ ತಯಾರಕರ ಆತಂಕ.
ಮಣ್ಣಿನಿಂದ ತಯಾರಿಸಿದ ಮೂರ್ತಿಗಳು ಸಾಮಾನ್ಯವಾಗಿ 6 ಅಡಿ ಎತ್ತರ ಮಾತ್ರ ಇರಲಿವೆ. ಆದರೆ, 8ರಿಂದ 10 ಅಡಿ ಎತ್ತರದ ಮೂರ್ತಿ ಬೇಕಾದರೆ ಪಿಒಪಿ ಬಳಸಬೇಕು. ಕೆಲವರು ಎತ್ತರದ ಗಣೇಶನಿಗಾಗಿ ಪಿಒಪಿ ಮೂರ್ತಿಗಗಳ ಮೊರೆ ಹೋಗುವುದು ಸಾಮಾನ್ಯ. ಈಗಾ ಗಲೇ ಮೈಸೂರು ಮಹಾನಗರ ಪಾಲಿಕೆಯಿಂದ ನಗರದ ಕೆಲವೆಡೆ ದಾಳಿ ನಡೆಸಿ ಪಿಒಪಿ ಮೂರ್ತಿವಶಪಡಿಸಿಕೊಳ್ಳಲಾಗಿದೆ. ಜತೆಗೆ ಪಿಒಪಿ ಮತ್ತು ಪೇಪರ್ ಮೌಲ್ಡ್ ಮೂರ್ತಿ ಮಾರಾಟ ಮಾಡ ದಂತೆ ಎಚ್ಚರಿಕೆ ನೀಡಲಾಗಿದೆ.
ಚಂದ್ರನ ಅಧಿಪತಿಯಾದ ವಿನಾಯಕ: ನಗರದ ಹೆಬ್ಟಾಳದ ಸುಮಿತ್ರಾ-ನಂಜುಂಡ ದಂಪತಿ ಪುತ್ರ ಸುನೀಲ್ ಈ ಬಾರಿ ವಿಶಿಷ್ಟ ಮಾದ ರಿಯ ಮೂರ್ತಿ ಸಿದ್ಧಪಡಿಸಿದ್ದಾರೆ. ಇಸ್ರೋ ಕಡಿಮೆ ಬಜೆಟ್‌ನಲ್ಲಿ ಚಂದ್ರನಲ್ಲಿಗೆ ರಾಕೆಟ್ ಉಡಾವಣೆ ಮಾಡಿ ಯಶಸ್ವಿಯಾಗಿರುವ ಹಿನ್ನೆಲೆ ಈ ಬಾರಿಯ ಗಣೇಶ ಹಬ್ಬಕ್ಕೆ ಇಸ್ರೋ ಚಂದ್ರಯಾನ ಗೌರವಿಸುವ ಸಲುವಾಗಿ ಅರ್ಧ ಚಂದ್ರನ ಮೇಲೆ ಗಣೇಶ ಕುಳಿತಿರುವ ಮೂರ್ತಿ ತಯಾರಿಸಲಾಗಿದ್ದು ನೋಡುಗರನ್ನು ಆಕರ್ಷಿಸುತ್ತಿದೆ.
ಪಿಒಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಿದ್ದು, ಪರಿಸರ ಸ್ನೇಹಿ ಹಬ್ಬ ಆಚರಿಸಬೇಕು. ಪಿಒಪಿ ಬಳಕೆ ಮಾಡಿರುವ ಗಣಪತಿ ಮೂರ್ತಿಗಳ ತಯಾರಿಕೆ ಮತ್ತು ಮಾರಾಟ ಕಂಡುಬಂದರೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
– ಡಾ.ಕೆ.ವಿ.ರಾಜೇಂದ್ರ, ಜಿಲ್ಲಾಧಿಕಾರಿ
– ಸತೀಶ್ ದೇಪುರ