Advertisement

ಸರ್ವ ಧರ್ಮ ಸಮನ್ವಯ ಸಾರುವ ಗಣೇಶ

09:22 PM Aug 29, 2019 | Sriram |

ಮಲ್ಪೆ: ಮುಸ್ಲಿಂ ಯುವಕನಿಂದ ಆರಂಭಗೊಂಡು ಅನೇಕ ಮಂದಿಯ ಮುಂದಾಳತ್ವದಲ್ಲಿ ಮುನ್ನಡೆದು ಸರ್ವ ಧರ್ಮ ಸಮನ್ವಯವನ್ನು ಸಾರುವ ಸಂಕೇತವಾಗಿ ಮಲ್ಪೆಯ ಸಾರ್ವಜನಿಕ ಗಣೇಶೋತ್ಸವ ಈ ಬಾರಿ 49ನೇ ವರ್ಷದ ಉತ್ಸವವನ್ನು ಆಚರಿಸುತ್ತಿದೆ.

Advertisement

1971ರಲ್ಲಿ ಮಲ್ಪೆಯ ಮಹಮ್ಮದ್‌ ಇಕ್ಬಾಲ್‌ ತನ್ನ ಬಾಲ್ಯದ ಸೇ°ಹಿತ ಶ್ಯಾಮ ಅಮೀನ್‌ ಅವ‌ರ ಜತೆಯಲ್ಲಿ ಸೇರಿಕೊಂಡು ತನ್ನದೇ ಪರಿಕಲ್ಪನೆ¿ಲ್ಲಿ ಸ್ವತಃ ಮೂರ್ತಿ ನಿರ್ಮಿಸಿ ಪೂಜೆ ಮಾಡುತ್ತಿದ್ದ ಮಲ್ಪೆಯ ಗಣೇಶ ಇದೀಗ 50ರ ಸಂಭ್ರಮದ ಹೊಸ್ತಿಲಲ್ಲಿದ್ದಾನೆ.

ಮಲ್ಪೆಯ ಹಂಚಿನ ಕಾರ್ಖನೆಯಿಂದ ಆವೆಮಣ್ಣು ತಂದು ವಿಗ್ರಹ ನಿರ್ಮಿಸಿ ಎಂ. ಕೆ. ಮಂಜಪ್ಪ ಅವರ ಮನೆಯಂಗಳದಲ್ಲಿ ಕುರ್ಚಿಯ ಮೇಲಿಟ್ಟು ಪೂಜೆ ಮಾಡಿ, ಸಂಜೆ ವಿಸರ್ಜನಾ ಸಮಯದಲ್ಲಿ ಸುಂದರ ಅವರು ಗಣಪತಿಯ ಮೂರ್ತಿಯನ್ನು ತಲೆಯ ಮೇಲೆ ಹೊತ್ತುಕೊಂಡು ಹಾಯಿ ಹಡಗಿನ ಪ್ಯಾಸೆಂಜರ್‌ ದಕ್ಕೆಯಲ್ಲಿ ವಿಸರ್ಜನೆ ಮಾಡಿದರು. ಅದು ಮಲ್ಪೆ ಗಣೇಶನ ಹುಟ್ಟಿಗೆ ನಾಂದಿಯಾಯಿತು.

ಗಣಪತಿಯಲ್ಲಿ ಪ್ರಾರ್ಥನೆ
ವಿಸರ್ಜನೆಯ ವೇಳೆ ಸೇರಿಕೊಂಡ ಕೆಲವೊಂದು ಸಮಾನ ಮನಸ್ಕರು ಮುಂದಿನ ವರ್ಷದಲ್ಲಿ ಇನ್ನಷ್ಟು ಉತ್ತಮವಾಗಿ ಕಾರ್ಯಕ್ರಮವನ್ನು ನಡೆಸಲು ಮುಂದಾದರು. ಆದರಂತೆ 1972ರಲ್ಲಿ ಉಡುಪಿಯ ಪ್ರೇಮಾ ಆರ್ಟ್ಸ್ನಲ್ಲಿ ಮೂರ್ತಿಯನ್ನು ರಚಿಸಿ ಇಕ್ಬಾಲ್‌ ಮತ್ತು ಶ್ಯಾಮ ಅಮೀನ್‌ ಅವರ ಬಾಡಿಗೆ ಕೋಣೆಯಲ್ಲಿ ಇಟ್ಟು ಪೂಜಿಸಿದರು. ಸಾರ್ವಜನಿಕರೆಲ್ಲರು ಅಲ್ಲಿಗೆ ಬಂದು ಪೂಜೆ ಪುನಸ್ಕಾರವನ್ನು ಸಲ್ಲಿಸುತ್ತಿದ್ದರು.

ಪೇಟೆ ಪರ್ಯಾಟನೆ ಮಾಡಿದ ಗಣಪ
ಮೂರು ವರ್ಷ ಶ್ಯಾಮ ಅವರ ಕಿರಣಿ ಅಂಗಡಿಯಲ್ಲಿ ಪೂಜೆಗೊಂಡ ಗಣಪತಿಯನ್ನು 1975ರಲ್ಲಿ ರಾಧಾಕೃಷ್ಣ ಕಾಮತ್‌ ಅಂಗಡಿಯಲ್ಲಿ, 1976ರಲ್ಲಿ ಶ್ಯಾಮ ಅಮೀನ್‌ ಅವರ ಕಿರಣಿ ಅಂಗಡಿಯಲ್ಲಿ, 1977ರಲ್ಲಿ ಅಬೂಬಕರ್‌ ಸಿದ್ದಿಕ್‌ ಜಾಮೀಯಾ ಮಸೀದಿಯ ಎದುರು ಬದಿಯ ಮಧ್ವರಾಜರ ಕಟ್ಟಡದಲ್ಲಿ, 1978ರಲ್ಲಿ ಹೊಟೇಲ್‌ ಮೀನಾಕ್ಷಿ ಭವನದ ಎದರುಗಡೆಯ ಮೈದಾನದಲ್ಲಿ, 1979ರಲ್ಲಿ ಉರ್ದು (ಹಿಂದೂಸ್ತಾನಿ) ಶಾಲೆಯಲ್ಲಿ, 1980ರಿಂದ 1995ರವರೆಗೆ ಫಿಶರೀಶ್‌ ಶಾಲಾ ಸಭಾಭವನದಲ್ಲಿ ಪೂಜೆಗೊಂಡಿತು. ಬೆಳ್ಳಿಹಬ್ಬ ಆಚರಣೆಯ ಸಂದರ್ಭದಲ್ಲಿ ಪಕ್ಕದ ಗದ್ದೆಯಲ್ಲಿ ಚಪ್ಪರ ಹಾಕಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. 1997ರಿಂದ ಮಲ್ಪೆ ಏಳೂರು ಮೊಗವೀರ ಮಹಾಜನ ಸಂಘದ ಸಹಕಾರ ದಲ್ಲಿ ಏಳೂರು ಭವನದಲ್ಲಿ ಪೂಜೆಗೊಳ್ಳುತ್ತಿದ್ದು ಇಲ್ಲಿಯ ವರೆಗೂ ಮುಂದುವರಿದುಕೊಂಡು ಬಂದಿದೆ. 47ನೇ ವರ್ಷದಿಂದ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಆರಂಭಿಸಲಾಗಿದೆ.

Advertisement

ಸೇವಾ ಚಟುವಟಿಕೆಗಳು
ಬೇಸಗೆಯಲ್ಲಿ ಮನೆ ಮನೆಗೆ ಕುಡಿಯುವ ನೀರಿನ ಪೂರೈಕೆ, ವೈದ್ಯಕೀಯ ಚಿಕಿತ್ಸೆಗೆ ನೆರವು, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಸ್ಫರ್ಧಾ ಕಾರ್ಯಕ್ರಮ, ಸಾಧಕರಿಗೆ ಸಮ್ಮಾನ, ಶಿಕ್ಷಣಕ್ಕೆ ಪ್ರೋತ್ಸಾಹವನ್ನು ನೀಡಲಾಗುತ್ತಿದೆ.

ಪ್ರಸ್ತುತ ಅಧ್ಯಕ್ಷ ಲಕ್ಷ್ಮಣ ಮೈಂದನ್‌, ಗೌರವಾಧ್ಯಕ್ಷ ಕಾಂತಪ್ಪ ಕರ್ಕೇರ, ಶ್ಯಾಮ ಅಮೀನ್‌, ಪ್ರಧಾನ ಕಾರ್ಯದರ್ಶಿ ಶಿವರಾಮ ಕಲ್ಮಾಡಿ, ಕೋಶಾಧಿಕಾರಿಯಾಗಿ ಸುರೇಶ್‌ ಕರ್ಕೇರ ಅವರುಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.

ಅರ್ಥಿಕ ನೆರವು
ಸ್ಥಾಪಕ ಮಹಮ್ಮದ್‌ ಇಕ್ಬಾಲ್‌ ಅವರು ಇಂದಿನವರೆಗೂ ಸಮಿತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದು, ಗಣಪತಿಗಾಗಿ ಪ್ರತಿವರ್ಷ ಆರ್ಥಿಕ ನೆರವನ್ನು ನೀಡುತ್ತಿದ್ದು ತನ್ನ ಧರ್ಮದೊಂದಿಗೆ ಪರಧರ್ಮ ಪ್ರೀತಿ ತೋರಿ ಸಮಾಜದ ಎಲ್ಲ ವರ್ಗದವರಿಗೂ ಮಾದರಿಯಾಗಿದ್ದಾರೆ.

ಮಧ್ವರಾಜರದ್ದು ವಿಗ್ರಹ ಸೇವೆ
ಮಲ್ಪೆ ಸಾರ್ವಜನಿಕ ಗಣೇಶೋತ್ಸವಕ್ಕೆ ಆರಂಭದ ಕೆಲವು ವರ್ಷಗಳು ಹೊರತುಪಡಿಸಿ ಬಹುತೇಕ ವರ್ಷ ಗಣಪತಿ ವಿಗ್ರಹದ ಸೇವೆಯನ್ನು ಮಲ್ಪೆ ಮಧ್ವರಾಜ್‌ ಅವರು ನೀಡುತ್ತಿದ್ದರು. ಮಧ್ವರಾಜ್‌ ಅವರ ನಿಧನದ ಬಳಿಕ ಅವರ ಪುತ್ರ ಪ್ರಮೋದ್‌ ಮಧ್ವರಾಜ್‌ ಅವರು ಮಧ್ವರಾಜ ಹೆಸರಿನಲ್ಲಿ ಈ ಸೇವೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next