Advertisement
ಕಡಬದ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಮೃಣ್ಮಯ ಗಣೇಶನ ವಿಗ್ರಹವನ್ನು ರಚಿಸಿಕೊಡುತ್ತಿದ್ದವರು ನಿವೃತ್ತ ಶಿಕ್ಷಕ ದಿ| ಅನಂತ ರಾವ್ ಅವರು. ಅನಂತ ರಾವ್ ಅವರ ಜತೆ ಗಣೇಶನ ವಿಗ್ರಹ ರಚನೆಯಲ್ಲಿ ಸಹಕರಿಸುತ್ತಿದ್ದ ಶಶಿರಾಜ್ ಅವರು ಅನಂತ ರಾವ್ ಅವರ ಕಾಲಾನಂತರ ಕಳೆದ 11 ವರ್ಷಗಳಿಂದ ತಾನೇ ಪರಿಸರದ ಗಣೇಶೋತ್ಸವಗಳಿಗೆ ಗಣಪನ ವಿಗ್ರಹ ರಚಿಸಿಕೊಡುತ್ತಿದ್ದಾರೆ.
ಶಶಿರಾಜ್ ಅವರ ಗಣಪತಿ ವಿಗ್ರಹ ರಚನೆಯ ಕಾರ್ಯದಲ್ಲಿ ಅವರ ಪತ್ನಿ ಮಾಲತಿ, ಪುತ್ರಿಯರಾದ ನವ್ಯಶ್ರೀ ಹಾಗೂ ಶ್ವೇತಶ್ರೀ ಅವರು ಸಹಕಾರ ಉಲ್ಲೇಖನೀಯ. ಪ್ರಸ್ತುತ ಕಡಬ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಹಿತ ಪರಿಸರದ ಆಲಂಕಾರು, ಶರವೂರು, ಐತ್ತೂರು, ಕಲ್ಲಾಜೆ, ಬೆತ್ತೂàಡಿ, ಕೊಕ್ಕಡ, ನೆಲ್ಯಾಡಿ, ಕಡಬದ ಹಳೆಸ್ಟೇಶನ್, ಹೊಸ್ಮಠ, ಮರ್ದಾಳ, ಕಳಾರ ಮುಂತಾದೆಡೆ ಪೂಜೆಗೊಳ್ಳುವ ಒಟ್ಟು 14 ಗಣೇಶನ ವಿಗ್ರಹಗಳನ್ನು ಶಶಿರಾಜ್ ರಚಿಸಿ ಕೊಡುತ್ತಿದ್ದಾರೆ. ಬಹುಮುಖ ಪ್ರತಿಭೆ
ಪ್ರಸ್ತುತ ಕುಟ್ರಾಪ್ಪಾಡಿ ಗ್ರಾಮದ ನಾಲೂರು ಶ್ರೀ ಶಂಕರನಾರಾಯಣ ದೇವಸ್ಥಾನದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಶಶಿರಾಜ್ ಅವರು ಬಹುಮುಖ ಪ್ರತಿಭೆಯ ಕಲಾವಿದ. ಶಶಿ ಗಿರಿವನ ಎನ್ನುವ ಹೆಸರಿನಲ್ಲಿ ಅವರು ರಚಿಸುತ್ತಿದ್ದ ವ್ಯಂಗ್ಯ ಚಿತ್ರಗಳು ತರಂಗ, ಸುಧಾ, ಮಂಗಳ ಮುಂತಾದ ವಾರ ಪತ್ರಿಕೆಗಳಲ್ಲಿ, ಉದಯವಾಣಿ, ಕರ್ಮವೀರ, ವಿಜಯಕರ್ನಾಟಕ ಮುಂತಾದ ದೈನಿಕಗಳಲ್ಲಿಯೂ ನಿರಂತರವಾಗಿ ಪ್ರಕಟವಾಗುತ್ತಿದ್ದವು. ಅತ್ಯುತ್ತಮ ಚಿತ್ರ ಕಲಾವಿದರಾಗಿರುವ ಅವರು ಭಕ್ತಿಗೀತೆ ರಚನೆ ಸಹಿತ ಹಲವು ಧ್ವನಿಸುರುಳಿಗಳಿಗೆ ಸಾಹಿತ್ಯ ನೀಡಿದ್ದಾರೆ. ಗಿರಿವನ ವಾಯ್ಸ ರೆಕಾರ್ಡಿಂಗ್ ಸ್ಟುಡಿಯೋ ನಡೆಸುತ್ತಿರುವ ಅವರು ಇದುವರೆಗೆ 12 ಆಡಿಯೋ ಆಲ್ಬಂಗಳಿಗೆ ಸಾಹಿತ್ಯ ರಚನೆ, ರಾಗ ಸಂಯೋಜನೆ ಮಾಡಿ ಹೊರತಂದಿದ್ದಾರೆ.
Related Articles
ಶಶಿರಾಜ್ ಗಿರಿವನ ಅವರ ನೇತೃತ್ವದ ಗಿರಿವನ ನವರಸ ಗಾನಸಿರಿ ತಂಡವು 5 ವರ್ಷಗಳಲ್ಲಿ ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ 150ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದೆ. ದೇವಸ್ಥಾನಗಳ ಕಾರ್ಯಕ್ರಮ ಹಾಗೂ ಸಾಮಾಜಿಕ ಸಂಘಟನೆಗಳ ಪ್ರಚಾರ ಧ್ವನಿಮುದ್ರಿಕೆಯನ್ನು ಉಚಿತವಾಗಿ ತನ್ನ ವಾಯ್ಸ ರೆಕಾರ್ಡಿಂಗ್ ಸ್ಟುಡಿಯೋ ಮೂಲಕ ಸ್ಥಳೀಯ ಗ್ರಾಮೀಣ ಗಾಯಕರನ್ನು ಬೆಳಕಿಗೆ ತಂದ ಕಲಾ ಪೋಷಕ.
Advertisement
ವರ್ಣಿಸಲು ಅಸಾಧ್ಯಕಲೆ ಎನ್ನುವುದು ನಮ್ಮ ಹಿರಿಯರಿಂದ ನಮಗೆ ರಕ್ತಗತವಾಗಿ ಬಂದಿದೆ. ಇದು ಆರ್ಥಿಕ ಗಳಿಕೆಯ ಉದ್ದೇಶದಿಂದ ಮಾಡುತ್ತಿರುವ ಕೆಲಸವಲ್ಲ. ಈ ಕಾರ್ಯದಲ್ಲಿ ಸಿಗುವ ಮಾನಸಿಕ ಖುಷಿಯನ್ನು ವರ್ಣಿಸಲು ಅಸಾಧ್ಯ. ಅವಕಾಶ ಲಭಿಸಿದಾಗ ಮಾತ್ರ ಯಾವುದೇ ಪ್ರತಿಭೆ ಬೆಳಕಿಗೆ ಬರಲು ಸಾಧ್ಯ. ಆದರೆ ನಮ್ಮ ಯುವ ಪೀಳಿಗೆ ಕಲೆಯಿಂದ ದೂರವಾಗುತ್ತಿರುವುದು ವಿಷಾದದ ಸಂಗತಿ. ಮಕ್ಕಳಲ್ಲಿ ಸುಪ್ತವಾಗಿ ಹುದುಗಿರುವ ಪ್ರತಿಭೆಗಳು ಹೊರಬರಲು ಹೆತ್ತವರು ಅವಕಾಶ ಮಾಡಿಕೊಡಬೇಕು.
– ಶಶಿರಾಜ್ ಗಿರಿವನ ಕಡಬ – ನಾಗರಾಜ್ ಎನ್.ಕೆ.