ನಟ ಗಣೇಶ್ ತಮ್ಮ ಅಭಿಮಾನಿಗಳಿಗೆ ಹೀಗೊಂದು ಮನವಿ ಮಾಡಿದ್ದಾರೆ. ವಿಷಯವಿಷ್ಟೇ, “ಈ ಸಲ ನಾನು ಹುಟ್ಟುಹಬ್ಬ ಆಚರಿಸುತ್ತಿಲ್ಲ’ ಹೀಗಂತ, ವಿನಂತಿ ಮಾಡಿಕೊಂಡಿದ್ದಾರೆ ಅವರು. ಹೌದು, ಜು.2 ಗಣೇಶ್ ಹುಟ್ಟುಹಬ್ಬ. ಪ್ರತಿ ವರ್ಷ ಅವರ ಹುಟ್ಟುಹಬ್ಬಕ್ಕೆ ರಾಜ್ಯದೆಲ್ಲೆಡೆಯಿಂದ ಅವರ ಅಭಿಮಾನಿಗಳು ಬರ್ತ್‌ಡೇ ಹಿಂದಿನ ರಾತ್ರಿಯೇ ಗಣೇಶ್ ಅವರ ಮನೆಯ ಎದುರು ಸಾಲುಗಟ್ಟಿ ನಿಂತುಕೊಂಡು ತಮ್ಮ ಪ್ರೀತಿಯ ನಾಯಕನ ಕೈಯಿಂದ ತಾವು ತಂದಿದ್ದ ಕೇಕ್ ಕತ್ತರಿಸಿ, ಸಂಭ್ರಮಿಸುತ್ತಿದ್ದರು.
ಆದರೆ, ಈ ವರ್ಷ ಗಣೇಶ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಅದಕ್ಕೆ ಕಾರಣವನ್ನೂ ಗಣೇಶ್ ಕೊಟ್ಟಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ “ಅಭಿಮಾನಿಗಳಲ್ಲಿ ವಿನಂತಿ’ ಅಡಿಬರಹದಲ್ಲೊಂದು ಪತ್ರ ಬರೆದಿದ್ದಾರೆ. ಆ ಪತ್ರದ ಸಾರಾಂಶ ಇಲ್ಲಿದೆ. “ನನ್ನ ಅಚ್ಚು ಮೆಚ್ಚಿನ ಪ್ರೀತಿಯ ಅಭಿಮಾನಿಗಳು, ಹಿತೈಷಿಗಳು, ಸ್ನೇಹಿತರಲ್ಲಿ ಒಂದು ಕಳಕಳಿಯ ವಿನಂತಿ. ಈ ಸಲ ನಾನು ಹುಟ್ಟು ಆಚರಿಸುತ್ತಿಲ್ಲ.
ಕಾರಣ, ಕೆಲವು ತಿಂಗಳ ಹಿಂದೆಯಷ್ಟೇ ನನ್ನ ತಂದೆಯವರನ್ನು ಕಳೆದುಕೊಂಡಿದ್ದೇನೆ. ಅಲ್ಲದೆ, ಈ ಸಂದರ್ಭದಲ್ಲಿ ಮನೆಯಲ್ಲಿ ನಾವ್ಯಾರೂ ಇರುವುದಿಲ್ಲ. ಆದ್ದರಿಂದ ದೂರದ ಊರುಗಳಿಂದ ಬಂದು ಕಾಯುವ ಪ್ರಯತ್ನ ಮಾಡಬೇಡಿ. ನನ್ನ ಹುಟ್ಟುಹಬ್ಬ ಆಚರಿಸಲು ದೂರದಿಂದ ಹಲವು ಸಿದ್ಧತೆಗಳೊಂದಿಗೆ ಬಂದು ಶುಭಕೋರಿ ಸಂಭ್ರಮಿಸುವ ನಿಮ್ಮ ಪ್ರೀತಿಗೆ ನಾನೆಂದೂ ಋಣಿ.
ಆದ್ದರಿಂದ ಅಭಿಮಾನಿಗಳು ದಯವಿಟ್ಟು, ಹಾರ, ಕೇಕ್, ಬ್ಯಾನರ್‌ಗಳಿಗಾಗಿ ಹಣ ಖರ್ಚು ಮಾಡದೇ ಹತ್ತಿರದ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಸಹಾಯವಾಗುವಂತಹ ಕೆಲಸ ಮಾಡಿದರೆ, ಅದೇ ನನಗೆ ನೀವು ಕೊಡುವ ಅತ್ಯುತ್ತಮ ಉಡುಗೊರೆ. ಇಷ್ಟು ಪ್ರೀತಿ, ಅಭಿಮಾನ ಹೊಂದಿರುವ ನೀವು ನನ್ನ ಕೋರಿಕೆಯನ್ನು ಅರ್ಥ ಮಾಡಿಕೊಂಡು, ಗಂಭೀರವಾಗಿ ಪರಿಗಣಿಸುವಿರಿ ಎಂಬ ಸಂಪೂರ್ಣ ವಿಶ್ವಾಸವಿದೆ. ದಯಮಾಡಿ ಸಹಕರಿಸಿ, ನಿಮ ಪ್ರೀತಿ ಸದಾ ಇರಲಿ. ಇಂತಿ ನಿಮ್ಮ ಪ್ರೀತಿಯ ಗಣೇಶ್’.
ಹೀಗೆ ಬರೆದು ಪೋಸ್ಟ್ ಮಾಡಿರುವ ಗಣೇಶ್, ಈ ಬಾರಿ ಹುಟ್ಟುಹಬ್ಬವನ್ನು ಆಚರಿಸದಿರಲು ನಿರ್ಧರಿಸಿದ್ದಾರೆ. ಈ ಹಿಂದೆ ನಟ ದರ್ಶನ್ ಅವರು ಸಹ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಅವರು ಕೂಡ ತಮ್ಮ ಅಭಿಮಾನಿಗಳಿಗೆ ಹುಟ್ಟುಹಬ್ಬಕ್ಕೆ ಖರ್ಚು ಮಾಡುವ ಹಣದಲ್ಲಿ ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಏನಾದರೂ ಸಹಾಯ ಮಾಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ದರ್ಶನ್ ಅವರ ಮನವಿಗೆ ಸ್ಪಂದಿಸಿದ್ದ ಅಭಿಮಾನಿಗಳು, ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.