ಹೊಸದಿಲ್ಲಿ: ಛತ್ತೀಸ್‌ಗಡದ ರಾಯ್ಪುರದಲ್ಲಿ ಇಂದು ನಡೆಯುವ ಕಾಂಗ್ರೆಸ್ ನ ಹಾಥ್ ಸೇ ಹಾಥ್ ಜೋಡೋ ಅಧಿವೇಶನದ ಪ್ರಮುಖ ಸಭೆಗೆ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಗ ರಾಹುಲ್ ಗಾಂಧಿ ಮತ್ತು ಮಗಳು ಪ್ರಿಯಾಂಕಾ ಗಾಂಧಿ ಗೈರಾಗಲಿದ್ದಾರೆ ಎಂದು ವರದಿಯಾಗಿದೆ.
ಕಾಂಗ್ರೆಸ್ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಂಪೂರ್ಣ ಸ್ವಾತಂತ್ಯ ನೀಡುವ ಉದ್ದೇಶದಿಂದ ಗಾಂಧಿ ಕುಟುಂಬ ಈ ನಿರ್ಧಾರ ಮಾಡಿದೆ ಎನ್ನಲಾಗಿದೆ. ಆದಾಗ್ಯೂ ಸಮಾವೇಶದ ಉಳಿದ ಭಾಗಕ್ಕೆ ಹಾಜರಾಗುತ್ತಾರೆ. ಇದರಲ್ಲಿ ಮುಂದಿನ ವರ್ಷದ ಚುನಾವಣೆಗೆ ತಯಾರಿಯ ಬಗ್ಗೆ ಚರ್ಚೆ ಮಾಡಲಾಗುತ್ತದೆ.
ರಾಯ್ಪುರದಲ್ಲಿ ನಡೆಯಲಿರುವ ಸಭೆಯು ಕಾಂಗ್ರೆಸ್ ನ 85ನೇ ಸಂಪುಟ ಸಭೆಯಾಗಿದೆ. ಮೂರು ದಿನಗಳ ಅಧಿವೇಶನದಲ್ಲಿ ಪಕ್ಷವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. 2024 ರ ಲೋಕಸಭೆ ಚುನಾವಣೆಗೆ ಮಾರ್ಗಸೂಚಿಯನ್ನು ರೂಪಿಸುವ ಜೊತೆಗೆ ಬಿಜೆಪಿಯನ್ನು ಎದುರಿಸಲು ಇತರ ವಿರೋಧ ಪಕ್ಷಗಳೊಂದಿಗೆ ಚುನಾವಣಾ ಸಂಬಂಧಕ್ಕಾಗಿ ಕಾರ್ಯತಂತ್ರದ ಕುರಿತು ಅಂತಿಮ ನಿರ್ಧಾರ ಮಾಡಲಾಗುತ್ತದೆ.
ಇದನ್ನೂ ಓದಿ:ನನ್ನ ಕಣ್ಣೀರನ್ನು ದೇಶ ನೋಡುವುದು ಬೇಡ..; ಸೋತ ಬೇಸರದಲ್ಲಿ ಭಾವುಕರಾದ ಹರ್ಮನ್ ಪ್ರೀತ್
ಒಟ್ಟಾರೆ 15 ಸಾವಿರ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾದ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ. 2024ರಲ್ಲಿ ಬಿಜೆಪಿ ವಿರುದ್ಧ ವಿಪಕ್ಷಗಳ ಒಕ್ಕೂಟವನ್ನು ರಚಿಸಿ ತಾನೇ ಮುನ್ನಡೆಸುವ ಬಗ್ಗೆ ಕೂಲಂಕಷವಾಗಿ ಚರ್ಚೆ ನಡೆಸಲಿದೆ ಎನ್ನಲಾಗಿದೆ.