Advertisement

ಗಾಂಧಿ ವಿಚಾರಧಾರೆ ಕಾರ್ಯರೂಪಕ್ಕೆ: ನಳಿನ್‌ ಕುಮಾರ್‌

11:06 PM Nov 20, 2019 | Team Udayavani |

ಪುತ್ತೂರು: ಸ್ವಾತಂತ್ರ್ಯದ ಕಿಚ್ಚನ್ನು ಉದ್ದೀಪನಗೊಳಿಸಿ ರಾಮ ರಾಜ್ಯದ ಪರಿಕಲ್ಪನೆಯನ್ನು ಬಿತ್ತಿದ ಮಹಾತ್ಮಾ ಗಾಂಧೀಜಿಯವರ ವಿಚಾರಧಾರೆ ನಮ್ಮೆಲ್ಲರ ಮನಸ್ಸಿನಲ್ಲಿ ಅಚಲವಾಗಿ ಉಳಿದು ಕಾರ್ಯರೂಪದಲ್ಲಿ ಕಾಣಿಸಿಕೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ, ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆಯ ಅಂಗವಾಗಿ ಅ. 22ರಿಂದ ಆರಂಭಗೊಂಡಿರುವ ಗಾಂಧಿ ಸಂಕಲ್ಪ ಯಾತ್ರೆಯು ಪುತ್ತೂರು ಮಂಡಲದ ವಿವಿಧ ಗ್ರಾಮಗಳಲ್ಲಿ ನಡೆದು ಬುಧವಾರ ಸಮಾರೋಪದ ಹಿನ್ನೆಲೆಯಲ್ಲಿ ಸಮಾಪನ ನಡಿಗೆಯನ್ನು ಮರೀಲ್‌ ಕ್ಯಾಂಪ್ಕೋ ಚಾಕಲೆಟ್‌ ಫ್ಯಾಕ್ಟರಿ ಬಳಿ ಕಾರ್ಯಕ್ರಮ ಉದ್ಘಾಟಿಸಿದರು.

ಭಜನೆ, ಉಪವಾಸ ಸತ್ಯಾಗ್ರಹ, ಪಾದಯಾತ್ರೆಯಂತಹ ಸಾತ್ವಿಕ ಹೋರಾಟದ ಮಾರ್ಗದಲ್ಲಿ ಸ್ವಾತಂತ್ರ್ಯಕ್ಕಾಗಿ ಸಮಾಜವನ್ನು ಒಟ್ಟುಗೂಡಿಸಿದ ಮಹಾತ್ಮಾ ಗಾಂಧೀಜಿಯವರು ಭಾರತ ರಾಮ ರಾಜ್ಯ ಆಗಬೇಕೆಂದು ಕೆಲವೊಂದು ಯೋಜನೆಗಳ ಪರಿಕಲ್ಪನೆ ಮಾಡಿದರು. ಈ ನಿಟ್ಟಿನಲ್ಲಿ ಗಾಂಧಿ ಇಂದಿಗೂ ಅತ್ಯಂತ ಪ್ರಸ್ತುತ ಎಂದರು.

ಗಾಂಧಿ ಕನಸಿನ ಭಾರತಕ್ಕಾಗಿ
ಗಾಂಧಿಯಿಂದ ಓಟು ಪಡೆದವರು, ಅಧಿಕಾರ, ರಾಜಕೀಯ ಮಾಡಿದವರು ಗಾಂಧಿಯನ್ನು ಮರೆತು ಅವರ ಪರಿಕಲ್ಪನೆಯನ್ನು ಬದಿಗಿಟ್ಟರು. ಗಾಂಧಿ ಹೆಸರಿನಲ್ಲಿ ದೇಶಕ್ಕೆ ಟೋಪಿ ಹಾಕಿದವರು ರಾಷ್ಟ್ರ ಮುನ್ನಡೆಸುವ ಕಾರ್ಯದಲ್ಲಿ ಗಾಂಧಿ ವಿಚಾರಧಾರೆಯನ್ನು ಸ್ಪಷ್ಟಪಡಿಸಿಲ್ಲ. ಆದರೆ ನರೇಂದ್ರ ಮೋದಿಯವರು ಗಾಂಧಿ ಹೆಸರಿನಲ್ಲಿ ಅಧಿಕಾರ ಮಾಡಿದರೆ ಸಾಲದು, ಗಾಂಧಿ ಕನಸಿನ ಭಾರತ ನಿರ್ಮಾಣ ಆಗಬೇಕೆಂದು ಚಿಂತನೆಯನ್ನು ಸಮಾಜಕ್ಕೆ ತೋರಿಸಿಕೊಟ್ಟರು ಎಂದರು.

ಮನಸ್ಸೂ ಸ್ವಚ್ಛವಾಗಬೇಕಿದೆ
ಕ್ಯಾಂಪ್ಕೋ ಅಧ್ಯಕ್ಷ ಎಸ್‌.ಆರ್‌. ಸತೀಶ್ಚಂದ್ರ ಮಾತನಾಡಿ, ಗಾಂಧೀಜಿಯ 150ನೇ ಜನ್ಮದಿನಾಚರಣೆಯ ಸಂದರ್ಭ ನಾವೆಲ್ಲ ಮತ್ತೆ ಭಾರತವನ್ನು ಜಗತ್ತಿನಲ್ಲಿ ಸ್ವತ್ಛ ಭಾರತವನ್ನಾಗಿ ಮಾಡುವ ಸಂಕಲ್ಪ ಕೈಗೊಂಡಿದ್ದೇವೆ. ಇಲ್ಲಿ ಕೇವಲ ಬಾಹ್ಯ ಸ್ವತ್ಛ ಭಾರತ ಮಾತ್ರವಲ್ಲ, 130 ಕೋಟಿ ಜನರ ಮನಸ್ಸು ಕೂಡ ಸ್ವತ್ಛವಾಗಿರಬೇಕೆನ್ನುವುದು ಈ ದೇಶದ ಪ್ರಧಾನ ಮಂತ್ರಿಗಳ ಕನಸಾಗಿದೆ ಎಂದರು.

Advertisement

ಮಾಜಿ ಸೈನಿಕರಿಗೆ ಸಮ್ಮಾನ
ಕಾರ್ಯಕ್ರಮದಲ್ಲಿ ಮೂವರು ಮಾಜಿ ಸೈನಿಕರನ್ನು ಸಮ್ಮಾನಿಸಲಾಯಿತು. ಮಾಜಿ ಸೈನಿಕರಾದ ಸುಬ್ರಹ್ಮಣ್ಯ ಕೆಮ್ಮಿಂಜೆ, ನಾರಾಯಣ ಗೌಡ, ಬಿ.ಜೆ. ರಂಗನಾಥ್‌ ಅವರನ್ನು ಗೌರವಿಸಲಾಯಿತು.

ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಲೂಕು ಪಂಚಾಯತ್‌ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌, ಬಿಜೆಪಿ ಮಂಗಳೂರು ವಿಭಾಗ ಸಹಪ್ರಭಾರ ಗೋಪಾಲಕೃಷ್ಣ ಹೇರಳೆ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಜೀವಂಧರ್‌ ಜೈನ್‌, ನಿಯೋಜಿತ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಿಯೋಜಿತ ನಗರ ಮಂಡಲದ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್‌, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್‌, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಶಂಭು ಭಟ್‌, ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಗೌರಿ ಬನ್ನೂರು, ರಾಮದಾಸ್‌ ಹಾರಾಡಿ, ಬಿಜೆಪಿ ಜಿಲ್ಲಾ ಪ್ರಶಿಕ್ಷಣ ಪ್ರಕೋಷ್ಠದ ಸಹಸಂಚಾಲಕ ಅಪ್ಪಯ್ಯ ಮಣಿಯಾಣಿ ಎಸ್‌. ಮುಂತಾದವರು ಉಪಸ್ಥಿತರಿದ್ದರು.

ಗ್ರಾಮಾಂತರ ಮಂಡಲದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಸ್ವಾಗತಿಸಿ, ಮಾಜಿ ಪುರಸಭಾಧ್ಯಕ್ಷ ರಾಜೇಶ್‌ ಬನ್ನೂರು ಕಾರ್ಯಕ್ರಮ ನಿರ್ವಹಿಸಿದರು.

ಕಲ್ಲೇಗದಲ್ಲಿ ಸಮಾರೋಪ
ಕಲ್ಲೇಗ ದೈವಸ್ಥಾನದ ವಠಾರದಲ್ಲಿರುವ ಭಾರತ್‌ ಮಾತಾ ಸಮುದಾಯ ಭವನದಲ್ಲಿ ಗಾಂಧಿ ಸಂಕಲ್ಪ ಯಾತ್ರೆಯ ಸಮಾರೋಪ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಸಮಾಜಕ್ಕಾಗಿ ಬದುಕು ಕೊಡುವುದೇ ಗಾಂಧಿ ಸಂಕಲ್ಪ ಯಾತ್ರೆಯ ಗುರಿ. ಅವರ ತಣ್ತೀ, ಚಿಂತನೆಗಳು ಇವತ್ತಿನ ಸಮಾಜಕ್ಕೆ ಆವಶ್ಯಕತೆ ಇದೆ ಎಂದು ನಮ್ಮ ಪ್ರಧಾನಿಯವರು ಮನಗಂಡು ಗಾಂಧಿ ಸಂಕಲ್ಪ ಯಾತ್ರೆ ಕೈಗೊಂಡಿದ್ದಾರೆ ಎಂದರು.

ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ| ಎಚ್‌. ಮಾಧವ ಭಟ್‌ ದಿಕ್ಸೂಚಿ ಭಾಷಣ ಮಾಡಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದರೂ ಗಾಂಧೀಜಿ ತಣ್ತೀಕ್ಕೆ ಸಿಗಬೇಕಾದ ಸ್ಥಾನಮಾನಕ್ಕೆ 70 ವರ್ಷ ಕಾಯಬೇಕಾಯಿತು. ಮೋಕ್ಷಕ್ಕೆ ಆಧ್ಯಾತ್ಮ ಮಾರ್ಗವಲ್ಲ, ಜನ ಸೇವೆಯೇ ಮೋಕ್ಷಕ್ಕೆ ಮಾರ್ಗ ಎಂದು ಗಾಂಧಿ ಮಾರ್ಗದರ್ಶನ ಮಾಡಿದರು. ತಣ್ತೀ ಇಲ್ಲದ ರಾಜಕೀಯ, ನೀತಿ ರಹಿತ ವ್ಯವಹಾರ, ಪ್ರಜ್ಞೆ ಇಲ್ಲದ ಭೋಗ, ಶೀಲವಿಲ್ಲದ ಶಿಕ್ಷಣಗಳಿಂದ ದೂರ ಇರಬೇಕು ಎಂದು ಗಾಂಧೀಜಿ ವಿಚಾರಧಾರೆಯಲ್ಲಿದೆ ಎಂದರು.
ಈ ನಿಟ್ಟಿನಲ್ಲಿ ಗಾಂಧೀಜಿ ಇವತ್ತಿಗೂ ಪ್ರಸ್ತುತ ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪಾಡಿಗುತ್ತು ಶುಭಹಾರೈಸಿದರು.

ಮೋದಿ ಆಶಯ
ಪ್ರಧಾನ ಮಂತ್ರಿ ಮೋದಿ ಆಶಯದಂತೆ ನಡೆಸುತ್ತಿರುವ ಗಾಂಧಿ 150ನೇ ವರ್ಷಾಚರಣೆ ಹಬ್ಬ ಅಥವಾ ಉತ್ಸವ ಅಲ್ಲ. ಜನರ ಮನಸ್ಸಿನಲ್ಲಿ ಗಾಂಧಿ ವಿಚಾರಧಾರೆಯನ್ನು ಬಿತ್ತುವ ಕಾರ್ಯಕ್ರಮ. ಆ ಮೂಲಕ ಗಾಂಧಿ ಭಾರತ ನಿರ್ಮಾಣದ ಚಿಂತನೆಗೆ ಪೂರಕ ಕೆಲಸ ಮಾಡಲಾಗುತ್ತಿದೆ ಎಂದು ನಳಿನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next