“ಫಸ್ಟ್ ರ್‍ಯಾಂಕ್ ರಾಜು’ ಚಿತ್ರದಲ್ಲಿ ಗುರುನಂದನ್ ಜೊತೆಗೆ ಗುರುತಿಸಿಕೊಂಡ ಇನ್ನೊಬ್ಬರೆಂದರೆ, ಆ ಚಿತ್ರದ ಸೆಕೆಂಡ್ ಹೀಗೋ ಚಂದ್ರಶೇಖರ್. ಈಗ ಚಂದ್ರಶೇಖರ್, ಚಕ್ರಿ ಎಂಬ ಹೆಸರಿನಲ್ಲಿ ಫಸ್ಟ್ ಹೀರೋ ಆಗುವುದಕ್ಕೆ ಹೊರಟಿದ್ದಾರೆ. ಬರಹಗಾರ ಕಮಲ್ ಸಾರಥಿ ಅವರ ಮೊದಲ ಚಿತ್ರ “ಗಾಂಧಿ ಕ್ಲಾಸ್’ನಲ್ಲಿ ಮೊದಲ ಬಾರಿಗೆ ಪೂರ್ಣಪ್ರಮಾಣದ ಹೀರೋ ಆಗುವುದಕ್ಕೆ ಹೊರಟಿದ್ದಾರೆ.
ಈ ಚಿತ್ರದ ಮುಹೂರ್ತ ಇತ್ತೀಚೆಗೆ ನಡೆಯಿತು. ಬಸವನಗುಡಿ ರಸ್ತೆಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆಯಿತು. ಚಿತ್ರತಂಡದವರು ಫಸ್ಟ್ ಶಾಟ್ ತೆಗೆದು, ಗಣೇಶನಿಗೆ ನಮಸ್ಕಾರ ಹಾಕಿ, ಬಂದವರನ್ನು ಮಾತಾಡಿಸಿ, ಲೈಟ್ ಆಗಿ ಟಿಫನ್ ಮಾಡಿ ಬರುವ ಹೊತ್ತಿಗೆ ಪತ್ರಿಕಾಗೋಷ್ಠಿಗೆ ವೇದಿಕೆ ಸಿದ್ಧವಾಗಿತ್ತು. ಅಲ್ಲಿದ್ದವರಲ್ಲಿ ಪರಿಚಯವಿದ್ದ ಮುಖವೆಂದರೆ, ಅದು ಚಕ್ರಿ ಮತ್ತು ದಿನಕರ್ ತೂಗುದೀಪ ಅವರದ್ದು. ಇಲ್ಲಿ ಚಕ್ರಿ ಹೀರೋ ಆದರೆ, ದಿನಕರ್ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ತಮ್ಮ ಚಿತ್ರತಂಡದವರನ್ನು ಪರಿಚಯಿಸಿಕೊಡುತ್ತಾ ಮಾತಿಗೆ ನಿಂತರು ಕಮಲ್. “ನಾನು ಕೆಲವು ಚಿತ್ರಗಳಿಗೆ ಸಂಭಾಷಣೆಕಾರನಾಗಿ ಕೆಲಸ ಮಾಡಿದ್ದೆ. ಒಂದೊಳ್ಳೆಯ ಕಥೆ ಮಾಡಿಟ್ಟುಕೊಂಡು, ಸಿನಿಮಾ ಮಾಡುವುದಕ್ಕೆ ಕಾಯುತ್ತಿದ್ದೆ. ಈಗ ಕಾಲ ಕೂಡಿ ಬಂದಿದೆ. “ಗಾಂಧಿ ಕ್ಲಾಸ್’ ಎನ್ನುವುದು ಚಿತ್ರಮಂದಿರಗಳಲ್ಲಿ ಆರ್ಥಿಕವಾಗಿ ಕಡಿಮೆ ಬೆಲೆಯ ಚಿತ್ರ ವೀಕ್ಷಣೆಯ ವ್ಯವಸ್ಥೆಯಾದರೂ, ಇಲ್ಲಿ ಬೇರೆ ರೀತಿ ವ್ಯಾಖ್ಯಾನಿಸುವುದಕ್ಕೆ ಪ್ರಯತ್ನಿಸಿದ್ದೇವೆ. ಗಾಂಧಿ ಅವರ ದೃಷ್ಟಿಕೋನ ಇರುವವರೆಲ್ಲರೂ ಒಂದು ಕ್ಲಾಸ್ ಎಂದು ಹೇಳುವುದಕ್ಕೆ ಹೊರಟಿದ್ದೇವೆ. ಅನೇಕ ಪಾತ್ರಗಳ ಮೂಲಕ ಇಲ್ಲಿ ಕಥೆ ನಡೆಯಲಿದೆ. ಇಲ್ಲಿ ಯಾವುದೇ ಸಿದ್ಧಸೂತ್ರಗಳಿಲ್ಲ. ಕಾರಣಾಂತರಗಳಿಂದ ಹೀರೋ, ವಿಲನ್ ಆಗುತ್ತಾನೆ ಮತ್ತು ವಿಲನ್ ಹೀರೋ ಆಗುತ್ತಾನೆ. ಸುಮಾರು 45 ದಿನಗಳ ಕಾಲ ಚಿತ್ರೀಕರಣ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ನಡೆಯಲಿದೆ’ ಎಂಬಂತಹ ವಿವರಗಳನ್ನು ಕೊಟ್ಟರು.
ಚಿತ್ರತಂಡದವರ ಹಿಂದೆ ದೊಡ್ಡದೊಂದು ಬ್ಯಾನರ್ ಇತ್ತು. ಅಲ್ಲಿ ನಾಯಕ ಮೂವರ ಜೊತೆಗೆ ಹಗ್ಗಜಗ್ಗಾಟ ಮಾಡುವ ದೃಶ್ಯವಿತ್ತು. ಅದೇನು ಎಂದು ಕೇಳುತ್ತಿದ್ದಂತೆಯೇ, “ಒಬ್ಬರು ಒಳ್ಳೇದು ಮಾಡೋಕೆ ಹೊರಟರೆ, ಹೇಗೆ ಅವರ ಕಾಲೆಳೆಯುವುದಕ್ಕೆ ಇರುತ್ತಾರೋ, ಅದೇ ರೀತಿ ಇಲ್ಲಿ ನಾಯಕನನ್ನು ತಡೆಯುವುದಕ್ಕೆ ವ್ಯವಸ್ಥೆ, ಹಣಬಲ ಮತ್ತು ಗ್ಲಾಮರ್ ಜೊತೆಯಾಗುತ್ತದೆ. ನಾಯಕ ಅವರನ್ನೆಲ್ಲಾ ಹೇಗೆ ಎದುರಿಸುತ್ತಾನೆ ಎನ್ನುವುದು ಕಥೆ. ಸುಧಾರಾಣಿ ಅವರು ಇದುವರೆಗೂ ಮಾಡದ ಒಂದು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ’ ಅಂತ ಕಮಲ್ ಹೇಳಿದರು. ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನೂ ಅವರೇ ಹೊತ್ತಿದ್ದಾರೆ.
ಇಲ್ಲಿ ಚಕ್ರಿ ಹುಬ್ಬಳ್ಳಿ ಹುಡುಗನ ಪಾತ್ರ ಮಾಡಿದರೆ, ದಿನಕರ್ ತೂಗುದೀಪ ಭ್ರಷ್ಟ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಇಬ್ಬರೂ ತಮ್ಮ ಪಾತ್ರಗಳು ಚೆನ್ನಾಗಿವೆ ಎಂದು ಹೇಳಿಕೊಂಡರು. ಈ ಚಿತ್ರವನ್ನು ನಿರ್ಮಿಸುತ್ತಿರುವುದು ವಿಜಯ್‌ಕುಮಾರ್. ನಿರ್ಮಾಣದ ಜೊತೆಗೆ ಒಂದು ಪಾತ್ರವನ್ನೂ ಕೊಟ್ಟಿದ್ದಾರಂತೆ ನಿರ್ದೇಶಕರು. ಚಕ್ರಿಗೆ ನಾಯಕಿಯಾಗಿ ಮೇಘಶ್ರೀ ನಟಿಸುತ್ತಿದ್ದಾರೆ. ಮೋಹನ್ ಅವರ ಛಾಯಾಗ್ರಹಣ ಮತ್ತು ರಾಕ್ ರವಿ ಅವರ ಸಂಗೀತ ಈ ಚಿತ್ರಕ್ಕಿದೆ.