Advertisement

ರಾಜಕೀಯ, ಸಾಮಾಜಿಕ ಕ್ಷೇತ್ರಕ್ಕೆ ಗಾಂಧಿ ತತ್ವಾದರ್ಶ ಅವಶ್ಯ

09:06 PM Nov 02, 2019 | Lakshmi GovindaRaju |

ಚಿಕ್ಕಬಳ್ಳಾಪುರ: ದೇಶದ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ವಿಚಾರಗಳಲ್ಲಿ ಹಿಂದೆಂದಿಗಿಂತಲೂ ಮಹಾತ್ಮ ಗಾಂಧೀಜಿ ರವರ ಚಿಂತನೆ, ವಿಚಾರಧಾರೆಗಳು ಇಂದು ಹೆಚ್ಚು ಪ್ರಸ್ತುತವಾಗಿದೆ. ಗಾಂಧಿ ಹೇಳಿದಂತೆ ಪ್ರತಿಯೊಬ್ಬ ವ್ಯಕ್ತಿ ಶ್ರೇಷ್ಠನಾಗಬೇಕು. ಆದರೆ ಇವತ್ತು ಕೆಲವೇ ವ್ಯಕ್ತಿಗಳು ಮಾತ್ರ ಶ್ರೇಷ್ಠರಾಗುತ್ತಿದ್ದಾರೆ ಎಂದು ಖ್ಯಾತ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್‌ ಹೇಳಿದರು.

Advertisement

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಶನಿವಾರ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೆಂಪೇಗೌಡ ಕಾನೂನು ಮಹಾ ವಿದ್ಯಾಲಯ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವತಿಯಿಂದ ಬಾ-ಬಾಪು: 150ನೇ ವರ್ಷಾಚರಣೆ ಅಂಗವಾಗಿ ಗಾಂಧಿ ವ್ಯಕ್ತಿಯ ವಿಚಾರಗಳ ಪ್ರಸ್ತುತತೆ ಕುರಿತು ವಿಚಾರ ಸಂಕಿರಣದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ಗಾಂಧಿ ಚಿಂತನೆ ಪಾಲಿಸಿ: ಕೊಳ್ಳಬಾಕು ಸಂಸ್ಕೃತಿ ಇಂದು ದೇಶದ ಸಮಗ್ರತೆ, ಸಾರ್ವಭೌಮತ್ವವನ್ನು ನಾಶಪಡಿಸಲು ಹೊರಟಿದೆ. ಇಂದಿಗೂ ಅಸಮಾನತೆ, ಅಸ್ಪೃಶ್ಯತೆ ಹೆಚ್ಚಾಗಿದೆ. ಗಾಂಧಿ ಚಿಂತನೆಗಳನ್ನು ನಾವು ರೂಢಿಸಿಕೊಳ್ಳದೇ ಮಾನವೀಯ ಹಾಗೂ ನೈತಿಕವಾದ ಸಮಾಜವನ್ನು ನಿರ್ಮಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

90 ಲಕ್ಷ ಉದ್ಯೋಗ ನಷ್ಟ: ಕಳೆದ ಆರೇಳು ವರ್ಷದಲ್ಲಿ 90 ಲಕ್ಷ ಉದ್ಯೋಗಗಳು ದೇಶದಲ್ಲಿ ನಷ್ಟವಾಗಿವೆ. ಉದ್ಯೋಗ ಸೃಷ್ಟಿ ಆಗುವುದರ ಬದಲು ನಾಶವಾಗುತ್ತಿರುವುದು ಯಾವುದರ ಸಂಕೇತ ಎಂದ ಅವರು, ದೇಶದಲ್ಲಿ ಯಾವುದೇ ಉದ್ಯೋಗದಲ್ಲಿ ತೊಡಗಿಸಿಕೊಳ್ಳದ 10 ಕೋಟಿ ಜನ ನಮ್ಮ ದೇಶದಲ್ಲಿದ್ದಾರೆ. ವಿಪರ್ಯಾಸ ಅಂದರೆ ಉದ್ಯೋಗ ಸೃಷ್ಟಿಸುವ ಹಾಗೂ ಜೀವನೋಪಾಯ ಹಾಗೂ ಆರೋಗ್ಯ ನೀಡುವ ಕಾರ್ಖಾನೆ, ಆಸ್ಪತ್ರೆಗಳಿಗಿಂತ ದೇವಾಸ್ಥಾನಗಳ ಸಂಖ್ಯೆ ಹೆಚ್ಚಾಗಿದೆ ಎಂದರು.

ಅಸ್ಪೃಶ್ಯತೆ ಘೋರ ಸ್ವರೂಪ: ಗಾಂಧಿ ಹೇಳುವ ರೀತಿ ಪ್ರತಿಯೊಬ್ಬ ಮನುಷ್ಯ ಕೂಡ ಶ್ರೇಷ್ಠನಾಗಬೇಕು. ಆದರೆ ನಮ್ಮ ಸಮಾಜದಲ್ಲಿ ಜಾತಿ, ಧರ್ಮದ ತಾರತಮ್ಯ ಹಿಂದೆಗಿಂತಲೂ ಈಗ ಹೆಚ್ಚಾಗಿದೆ. ಜಾತಿ, ದಬ್ಟಾಳಿಕೆ ತಾರಕಕ್ಕೇರಿದೆ. ಅಸಮಾನತೆ, ಅಸ್ಪೃಶ್ಯತೆ ಘೋರ ಸ್ವರೂಪದಲ್ಲಿದೆ ಎಂದರು.

Advertisement

ಮಹಾತ್ಮನನ್ನು ಮರೆತಿದ್ದಕ್ಕೆ ಈ ಪರಿಸ್ಥಿತಿ: ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಎಸ್‌.ಹೆಚ್‌.ಕೋರಡ್ಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಾತ್ಮನನ್ನು ಟೀಕಿಸುವ ಮನಸ್ಸುಗಳು ಹೆಚ್ಚಾಗುತ್ತಿರುವುದು ಬೇಸರದ ಸಂಗತಿ. ಜಗತ್ತು ಇಂದು ಮಹಾತ್ಮ ಗಾಂಧಿ ಚಿಂತನೆಗಳನ್ನು ಅಳವಡಿಸಿಕೊಳ್ಳುತ್ತಿದೆ. ಆದರೆ ನಾವು ಗಾಂಧಿ ಚಿಂತನೆಗಳನ್ನು ಮರೆಯುತ್ತಿರುವ ಪರಿಣಾಮವೇ ದೇಶದ ಇಂದಿನ ವಿದ್ಯಮಾನಗಳಿಗೆ ಕಾರಣವಾಗಿದೆ ಎಂದರು.

ಗಾಂಧಿ ತಲುಪಿಸುವುದು ಅಗತ್ಯ: ಸಮಾಜದಲ್ಲಿಂದು ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಸತ್ಯ, ನಿಷ್ಠೆ, ಧರ್ಮ, ನ್ಯಾಯಕ್ಕಿಂತ ಸ್ವಾರ್ಥಪರ ಚಿಂತನೆಗಳು ತುಂಬಿವೆ. ಇದಕ್ಕೆ ಕಾರಣ ಗಾಂಧಿ ಚಿಂತನೆಗಳು ಅಳವಡಿಸಿಕೊಳ್ಳದ ಪರಿಣಾಮ ಎಂದರು. ಗಾಂಧಿ ವಿಚಾರಧಾರೆಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯಕ್ರಮಗಳು ಸಾಂಕೇತಿಕವಾಗಿ ನಡೆಯದೇ ಅವರ ಚಿಂತನೆಗಳನ್ನು ವಿದ್ಯಾರ್ಥಿ, ಯುವ ಸಮುದಾಯಕ್ಕೆ ಮುಟ್ಟಿಸುವ ಕೆಲಸ ಹಿಂದೆಗಿಂತಲೂ ಈಗ ಪರಿಣಾಮಕಾರಿಯಾಗಿ ನಡೆಯಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ, ಉಪಾಧ್ಯಕ್ಷ ವಿ.ಎನ್‌.ತಿಪ್ಪನಗೌಡ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಕೆ.ಎಚ್‌.ತಮ್ಮೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್‌ ಕುಮಾರ್‌, ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಟಿ.ನಾಗರಾಜಯ್ಯ, ಕೆಂಪೇಗೌಡ ಕಾನೂನು ಮಹಾ ವಿದ್ಯಾಲಯದ ಪ್ರಾಂಶುಪಾಲೆ ಶೋಭಾ, ಚಿಕ್ಕಬಳ್ಳಾಪುರದ ಗಾಂಧಿ ಅಧ್ಯಯನ ಕೇಂದ್ರದ ಸಂಚಾಲಕ ಪ್ರೊ.ಬಿ.ಆರ್‌.ನರಸಿಂಹಮೂರ್ತಿ ಸೇರಿದಂತೆ ಮಹಿಳಾ ಪ್ರಥಮ ದರ್ಜೆ ಹಾಗೂ ಕೆಂಪೇಗೌಡ ಕಾನೂನು ಮಹಾ ವಿದ್ಯಾಲಯದ ನೂರಾರು ವಿದ್ಯಾರ್ಥಿಗಳು ಗಾಂಧಿ ಕುರಿತಾದ ವಿಚಾರ ಸಂಕಿರಣದಲ್ಲಿ ಉಪಸ್ಥಿತರಿದ್ದರು.

ಗಾಂಧಿ ಚಿಂತನೆಗಳನ್ನು ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ರೂಢಿಸಿಕೊಳ್ಳಬೇಕಿದೆ. ಬದುಕಿನಲ್ಲಿ ಬದಲಾವಣೆ ಮಾಡಿಕೊಳ್ಳದಿದ್ದರೆ ಅಥವಾ ಪರಿವರ್ತನೆ ಮಾಡಿಕೊಳ್ಳದಿದ್ದರೆ ದೇಶಕ್ಕೆ ಭವಿಷ್ಯವಿಲ್ಲ. 11ನೇ ಶತಮಾನದಲ್ಲಿ ಬಸವಣ್ಣ ನಡೆಸಿದ ಸಾಮಾಜಿಕ ಕ್ರಾಂತಿಯ ನಂತರ ಬಂದ ಮಹಾತ್ಮಗಾಂಧೀಜಿ ಸತ್ಯ, ಆಹಿಂಸೆಯ ತತ್ವಗಳ ಮೂಲಕ ದೇಶದಲ್ಲಿ ದೊಡ್ಡ ಬದಲಾವಣೆ ತಂದರು. ಗಾಂಧಿ ಚಿಂತನೆಗಳು ಪ್ರಸ್ತುತ ಸಮಾಜಕ್ಕೆ ಅವಶ್ಯಕ.
-ಎಸ್‌.ಎಚ್‌.ಕೋರಡ್ಡಿ, ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ

ದೇಶದಲ್ಲಿ 5 ಸಾವಿರಕ್ಕೂ ಅಧಿಕ ಜಾತಿಗಳೀವೆ. ಆದರೆ ಎಲ್ಲಾ ಜಾತಿಗಳು ಅಕ್ಕಪಕ್ಕ ಕೂರುವುದರ ಬದಲು ಒಂದರ ಮೇಲೆ ಒಂದು ಕೂತಿವೆ. ಸಮಾಜದಲ್ಲಿ ಅಸಮಾನತೆ, ಅಸ್ಪೃಶ್ಯತೆ ತೊಲಗಬೇಕಾದರೆ, ಶಾಂತಿ ನೆಮ್ಮದಿಯ ಸಮಾಜ ಕಾಣ ಬೇಕಾದರೆ, ಸಾಮಾಜಿಕ ನ್ಯಾಯ ಎತ್ತಿ ಹಿಡಿಯಬೇಕಾದರೆ ಪ್ರತಿಯೊಬ್ಬರು ಗಾಂಧಿ ಚಿಂತನೆ ಹಾಗೂ ಅವರ ವಿಚಾರಧಾರೆಗಳಲ್ಲಿ ತಮ್ಮ ಬದುಕನ್ನು ಕಾಣಬೇಕು.
-ಪ್ರೊ.ರವಿವರ್ಮಕುಮಾರ್‌, ಖ್ಯಾತ ನ್ಯಾಯವಾದಿ

Advertisement

Udayavani is now on Telegram. Click here to join our channel and stay updated with the latest news.

Next