ಉಡುಪಿ: ಮಹಿಳೆಯರು ಸಾಮಾಜಿಕವಾಗಿ, ಆರ್ಥಿಕವಾಗಿ, ಭೌತಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಶಕ್ತಿಯನ್ನು ಹೊಂದಿ ಉತ್ತಮ ಸ್ಥಾನ ಹೊಂದುವುದಾದರೆ, ಅದು ನಿಜವಾದ ಮಹಿಳಾ ಸಬಲೀಕರಣ. ಇಂತಹ ಬದಲಾವಣೆ ತರುವಲ್ಲಿ ಸ್ವಸಹಾಯ ಗುಂಪುಗಳ ಮಹತ್ವ ಮುಖ್ಯವಾಗಿದೆ. ಗ್ರಾಮಗಳ ಉದ್ಧಾರವೇ ದೇಶದ ಉದ್ದಾರ ಎಂದು ಹೇಳಿದ ಗಾಂಧೀಜಿಯ ಕನಸನ್ನು ಸ್ತ್ರೀಯರು ಸ್ವಸಹಾಯ ಗುಂಪುಗಳಿಂದ ನನಸನ್ನಾಗಿ ಮಾಡಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ| ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಮಥುರ ಕಲಾಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭ ಉಡುಪಿ ಜಿಲ್ಲಾ ಮಟ್ಟದ ಸುಗಮ್ಯ ಮಹಿಳಾ ಒಕ್ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉಡುಪಿ ವಲಯ ಪ್ರಧಾನ ಅ| ವಂ| ವಾಲೇರಿಯನ್ ಮೆಂಡೊನ್ಸಾ ಆಶೀರ್ವಚನ ನೆರವೇರಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಜಿಲ್ಲೆ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್, ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ಮುಂದಿದ್ದಾರೆ, ಇನ್ನೂ ಕೂಡ ಅಭಿವೃದ್ಧಿ ಸಬಲೀಕರಣ ಆಗಬೇಕೆಂದರು.
ಮಹಿಳಾ ಸಶಕ್ತೀಕರಣ ಯೋಜನೆ ಕ್ರೋಸ್ ಬೆಂಗಳೂರಿನ ರಾಜ್ಯ ಸಂಯೋಜಕಿ ಸಿ| ಭಗಿನಿ ಜೀಟಾ ಡಿಸೋಜಾ, ಅನುಪಮಾ ಮಹಿಳಾ ಮಾಸಿಕ ಪ್ರಧಾನ ಸಂಪಾದಕಿ ಶಹನಾಜ್ ಎಮ್. ಮಾತನಾಡಿದರು.
ಉಡುಪಿ ಜಿಲ್ಲಾ ಕೇಂದ್ರ ಸ್ತ್ರೀ ಸಂಘಟನೆಯ ಮಾಜಿ ಅಧ್ಯಕ್ಷೆಯರಾದ ಲೀನಾ ರೋಚ್ ಬ್ರಹ್ಮಾವರ, ವೈಲೆಟ್ ಕಾಸ್ತೆಲೀನೊ ಪಾಂಬೂರು, ಜೆನಿಫರ್ ಮಿನೇಜೆಸ್ ಬ್ರಹ್ಮಾವರ, ಸ್ಮಿತಾ ರೇಂಜರ್ ಮಿಯಾರ್, ಐರಿನ್ ಪಿರೇರಾ ಉದ್ಯಾವರ, ಜೂಡಿತ್ ಫೆರ್ನಾಂಡಿಸ್ ಉದ್ಯಾವರ, ತಾಲೂಕು ಒಕ್ಕೂಟಗಳ ಅಧ್ಯಕ್ಷೆಯರಾದ ವಲೇರಿಯಾ ಕುಟಿನ್ಹಾ, ಕಾರ್ಕಳದ ಅರ್ಪಣ ಒಕ್ಕೂಟ, ಪ್ರಮೀಳಾ ಡೆಸಾ ಕುಂದಾಪುರ-ಬೈಂದೂರಿನ ಭಾವನ ಒಕ್ಕೂಟ, ಜ್ಯೋತಿ ಲುವಿಸ್ ಬ್ರಹ್ಮಾವರದ ಉಜ್ವಲಾ ಒಕ್ಕೂಟ, ಟ್ರೀಜಾ ಮಚಾದೊ ಕಾಪುವಿನ ಇಂಚರ ಒಕ್ಕೂಟ ಹಾಗೂ ಹೆಜೆಲ್ ಡಿಲೀಮಾ ಉಡುಪಿಯ ಶರಧಿ ಒಕ್ಕೂಟ ಇವರನ್ನು ಸಮ್ಮಾನಿಸಲಾಯಿತು.
ಈ ಒಕ್ಕೂಟಗಳನ್ನು ರಚಿಸಲು ಶ್ರಮಿಸಿದ ಸಂಪದ ಉಡುಪಿ ಇದರ ಆಡಳಿತ ನಿರ್ದೇಶಕ ಫಾ| ರೆಜಿನಾಲ್ಡ್ ಪಿಂಟೊ ತಾಲೂಕು ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಒಕ್ಕೂಟ ರಚಿಸಲು ಹೊಣೆ ಕೊಟ್ಟ ಬಿಶಪ್ ಜೆರಾಲ್ಡ್ ಐಸಾಕ್ ಲೋಬೊರವರಿಗೆ ಸಹಕಾರಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಜಿಲ್ಲಾ ಮಟ್ಟದ ಸ್ತ್ರೀ ಆಯೋಗದ ನಿರ್ದೇಶಕಿ ಸಿ|ಭಗಿನಿ ಜಾನೆಟ್ ಫೆರ್ನಾಂಡಿಸ್ ಪ್ರಸ್ತಾವಿಸಿದರು. ಕೇಂದ್ರಿಯ ಸ್ತ್ರೀ ಸಂಘಟನೆ ಅಧ್ಯಕ್ಷೆ ಜೆನೆಟ್ ಬಾಬೊìಜಾ ಸ್ವಾಗತಿಸಿದರು, ಕಾರ್ಯದರ್ಶಿ ಕ್ಲೋಟಿಲ್ಡಾ ಡಿ’ಸೋಜಾ ವಂದಿಸಿದರು. ವಿನಯಾ ಡಿ’ಕೋಸ್ತಾ ಕುಂದಾಪುರ ಮತ್ತು ಸ್ಟ್ಯಾನ್ಲಿ ಫೆರ್ನಾಂಡಿಸ್‌ಕಾರ್ಯಕ್ರಮ ನಡೆಸಿಕೊಟ್ಟರು.