Advertisement

ಗಾಂಧಿನಗರದ ಸಸ್ಪೆನ್ಸ್‌ ಥ್ರಿಲ್ಲರ್‌ ಡೈರಿ

12:30 AM Mar 22, 2019 | Team Udayavani |

ಸಸ್ಪೆನ್ಸ್‌ ಚಿತ್ರಗಳಿಗೆ ಹೆಚ್ಚು ಬಜೆಟ್‌ನ  ಅವಶ್ಯಕತೆ ಇರಲ್ಲ. ಕತ್ತಲು ಬೆಳಕಿನಾಟದ ಜೊತೆಗೆ, ಒಂದು ಮನೆ ಇಲ್ಲವೇ  ಹೋಮ್‌ಸ್ಟೇ ಇತರೆ ಕಡೆ ಸ್ವಲ್ಪ ಕುತೂಹಲ ಕೆರಳಿಸುವ ದೃಶ್ಯಗಳನ್ನು ಇಟ್ಟು, ಹಿನ್ನೆಲೆ ಸಂಗೀತಕ್ಕೆ ಹೆಚ್ಚು  ಗಮನಕೊಟ್ಟರೆ ಹೊಸ ಥ್ರಿಲ್‌ನೊಂದಿಗೆ ಒಂದು ಒಳ್ಳೆಯ ಚಿತ್ರ ಕೊಡ ಬಹುದು.

Advertisement

“ಹೊಸಬರ ಕಂಟೆಂಟ್‌ ಚಿತ್ರಗಳ ಮುಂದೆ ಸ್ಟಾರ್‌ಡಮ್‌ ಅಲ್ಲಾಡುತ್ತಿದೆ…’

 - ಹೀಗಂತ ನಟ ಸುದೀಪ್‌ ಹಿಂದೊಮ್ಮೆ ಹೇಳಿದ್ದರು. ಅವರ ಈ ಮಾತಿಗೆ ಕಾರಣ, ಕನ್ನಡದಲ್ಲಿ ಜೋರು ಸುದ್ದಿ ಮಾಡಿದ ಮತ್ತು ಮಾಡುತ್ತಿರುವ ಕಂಟೆಂಟ್‌ ಚಿತ್ರಗಳು. ಈಗಂತೂ ಕಂಟೆಂಟ್‌ ಚಿತ್ರಗಳದ್ದೇ ಮಾತು. ಎಲ್ಲರೂ ಕಂಟೆಂಟ್‌ ಚಿತ್ರಗಳ ಹಿಂದೆ ಬರುತ್ತಿರುವುದು ಹೊಸ ಬೆಳವಣಿಗೆ. ಇಲ್ಲೀಗ ಕಂಟೆಂಟ್‌ ಸಿನಿಮಾಗಳಷ್ಟೇ ಅಲ್ಲ, ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರಗಳ ಸಂಖ್ಯೆಯೂ ಹೆಚ್ಚಾಗಿದೆ. ಆ ಮೂಲಕ ನೋಡುಗರಲ್ಲಿ ಹೊಸಬಗೆಯ ಥ್ರಿಲ್‌ ಸೃಷ್ಟಿ ಮಾಡುತ್ತಿರುವುದು ವಿಶೇಷ. ಈ ಹಿಂದೆ ಗಾಂಧಿನಗರದ ಕೆಲ ಮಂದಿಯನ್ನು ದೆವ್ವಗಳು ಕಾಪಾಡಿದ್ದು ಗೊತ್ತೇ ಇದೆ. ಅಂದರೆ, ಹಾರರ್‌ ಚಿತ್ರಗಳ ಹಾವಳಿ ಹೆಚ್ಚಾಗಿ ಹೊಸದೊಂದು ಟ್ರೆಂಡ್‌ ಹುಟ್ಟು ಹಾಕಿದ್ದು ನಿಜ. ಸದ್ಯಕ್ಕೆ ಗಾಂಧಿನಗರದಲ್ಲಿ ದೆವ್ವಗಳ ಕಾಟ ಕಡಿಮೆಯಾಗಿದೆ. ಅಲ್ಲೊಂದು ಇಲ್ಲೊಂದು ಹಾರರ್‌ ಚಿತ್ರಗಳು ಬರುತ್ತಿರುವುದು ಬಿಟ್ಟರೆ, ಈಗ ಎಲ್ಲರೂ ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆಗಳಿಗೆ ಮೊರೆ ಹೋಗಿದ್ದಾರೆ. ಹಾಗೆ ನೋಡಿದರೆ, ಈ ಮೂರು ತಿಂಗಳಲ್ಲಿ 40 ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿದ್ದು, ಆ ಪೈಕಿ ಸುಮಾರು 15 ಕ್ಕೂ ಹೆಚ್ಚು ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರಗಳೇ ಸೇರಿಕೊಂಡಿವೆ ಎಂಬುದು ಗಮನಿಸಬೇಕಾದ ಅಂಶ. ಬದಲಾದ ಕಾಲದಲ್ಲಿ ಈಗ ಸಸ್ಪೆನ್ಸ್‌ ಕ್ರೈಮ್‌ ಥ್ರಿಲ್ಲರ್‌ ಚಿತ್ರಗಳು ಗಾಂಧಿನಗರಿಗರ ಪಾಲಿಗೆ ಹೊಸ ಉತ್ಸಾಹ ತುಂಬುತ್ತಿವೆ ಎಂಬುದಂತೂ ಸತ್ಯ.

ಸಸ್ಪೆನ್ಸ್‌ ಕ್ರೈಮ್‌ ಥ್ರಿಲ್ಲರ್‌ ಕಥಾ ಹಂದರ ಹೊಂದಿರುವ ಚಿತ್ರಗಳಲ್ಲಿ ಬಹುತೇಕ ಹೊಸಬರೇ ಕಾಣಸಿಗುತ್ತಾರೆ. ಇಂತಹ ಚಿತ್ರಗಳಿಗೆ ಸ್ಟಾರ್‌ ನಟರು ಬೇಕಿಲ್ಲ. ಬಜೆಟ್‌ ಕೂಡ ದೊಡ್ಡದಾಗಿರಲ್ಲ. ಇಲ್ಲಿ ಕಥೆ ಮುಖ್ಯವಾಗುತ್ತೆ ಹೊರತು, ತೆರೆ ಮೇಲೆ ಯಾರೆಲ್ಲಾ ಇದ್ದಾರೆ ಎಂಬುದು ಮುಖ್ಯವಾಗಲ್ಲ. ಹೊಸಬರ ಹೊಸ ಆಲೋಚನೆಗಳ ಚಿತ್ರಗಳು ಹೆಚ್ಚಾಗುತ್ತಿರುವುದನ್ನು ಅಲ್ಲಗಳೆಯುವಂತಿಲ್ಲ. 

ಸದ್ದಿಲ್ಲದೆಯೇ ಬರುವ ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರಗಳು ಸುದ್ದಿಯಾಗುತ್ತಿರುವುದರಿಂದ ಸ್ಟಾರ್‌ ಚಿತ್ರಗಳಿಗೂ ಪೈಪೋಟಿ ಕೊಡುವಷ್ಟರ ಮಟ್ಟಿಗೆ ಹೊಸತನ ಕಟ್ಟಿಕೊಂಡು ಬರುತ್ತಿವೆ ಎಂಬ ಮಾತು ಅಷ್ಟೇ ನಿಜ. ಈಗಾಗಲೇ ಈ ಮಾತಿಗೆ ಪೂರಕ ಎಂಬಂತೆ ಹೊಸಬರ ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರಗಳು ನೋಡುಗರಿಗೆ ತಕ್ಕಷ್ಟು “ಥ್ರಿಲ್‌’ ರುಚಿಯನ್ನು ಉಣಬಡಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿವೆ.

Advertisement

ಸಸ್ಪೆನ್ಸ್‌ ಕ್ರೈಮ್‌ ಥ್ರಿಲ್ಲರ್‌ ಕನ್ನಡಕ್ಕೆ ಹೊಸದೇನಲ್ಲ. ಆದರೆ, ಈಗಿನ ಹೊಸಬರ ಆಲೋಚನೆ ಹೊಸತು ಎಂಬುದನ್ನು ನಂಬಲೇಬೇಕು. ಈ ವರ್ಷದ ಆರಂಭದಿಂದ ಸೂಕ್ಷ್ಮವಾಗಿ ಗಮನಿಸಿದರೆ ಸಸ್ಪೆನ್ಸ್‌ ಕ್ರೈಮ್‌ ಥ್ರಿಲ್ಲರ್‌ ಚಿತ್ರಗಳು ಒಂದಷ್ಟು ಭರವಸೆ ಮೂಡಿಸಿದ್ದು ಸುಳ್ಳಲ್ಲ. “ಅನುಕ್ತ’ ಇದೊಂದು ಹೊಸ ಬಗೆಯ ಸಸ್ಪೆನ್ಸ್‌ ಅಂಶಗಳೊಂದಿಗೆ ಬಂದ ಚಿತ್ರವಾಗಿ ಗಮನಸೆಳೆಯಿತು. ತೆರೆ ಮೇಲೆ ಅನುಭವಿ ಕಲಾವಿದರಿದ್ದರೂ, ತೆರೆ ಹಿಂದೆ ಇದ್ದವರು ಸಂಪೂರ್ಣ ಹೊಸಬರು ಎಂಬುದು ವಿಶೇಷ. “ಸ್ಟ್ರೈಕರ್‌’ ಕೂಡ ಸಸ್ಪೆನ್ಸ್‌ ಥ್ರಿಲ್ಲರ್‌ನೊಂದಿಗೆ ಹೊಸದೇನನ್ನೋ ಹೇಳಿಕೊಂಡಿತು. ಇಲ್ಲೂ ತೆರೆ ಹಿಂದೆ ಇದ್ದವರು ಹೊಸಬರೇ. “ಅರಬ್ಬೀ ಕಡಲ ತೀರದಲ್ಲಿ’ ಚಿತ್ರ ಕೂಡ ಅದೇ ಸಾಲಿಗೆ ಸೇರಿದ ಚಿತ್ರವಾಯಿತು. “ಬೀರ್‌ಬಲ್‌’ ಕೂಡ ಬೆಸ್ಟ್‌ ಥ್ರಿಲ್ಲರ್‌ ಚಿತ್ರ ಎಂಬ ಪಟ್ಟ ಕಟ್ಟಿಕೊಂಡಿತು. ಹೊಸಬರೇ ಸೇರಿ ಮಾಡಿದ “ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು’ ಚಿತ್ರ ಕೂಡ ಕ್ರೈಮ್‌ ಥ್ರಿಲ್ಲರ್‌ ಮೂಲಕ ಮೆಚ್ಚುಗೆ ಪಡೆದುಕೊಂಡಿತು.

ನಾನು ನಮ್ಮುಡ್ಗಿ ಖರ್ಚಿಗೊಂದ್‌ ಮಾಫಿಯಾ’ ಇದು ಕ್ರೈಮ್‌ ಥ್ರಿಲ್ಲರ್‌ ಆಗಿತ್ತು. ಉಳಿದಂತೆ “ಬೆಲ್‌ ಬಾಟಂ’ ಕಾಮಿಡಿ ಥ್ರಿಲ್ಲರ್‌ ಎನಿಸಿದರೆ, ಹೊಸಬರ “ಲಾಕ್‌’ ಚಿತ್ರ ಸಸ್ಪೆನ್ಸ್‌ ಥ್ರಿಲ್ಲರ್‌ ಆಗಿತ್ತು. “ಭೂತಕಾಲ’ ಸೇರಿದಂತೆ ಇನ್ನೂ ಅನೇಕ ಚಿತ್ರಗಳು ಹೊಸ ಥ್ರಿಲ್‌ ಕೊಟ್ಟಿದ್ದು ನಿಜ. ಇವೆಲ್ಲಾ ಬಿಡುಗಡೆಯಾದ ಚಿತ್ರಗಳು ಬಿಡುಗಡೆಗೆ ಕಾದು ನಿಂತಿರುವ ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರಗಳು ನಿರೀಕ್ಷೆಯನ್ನೂ ಹೆಚ್ಚಿಸಿವೆ. ಹಾಗೆ ಹೇಳುವುದಾದರೆ, ಸುನೀಲ್‌ಕುಮಾರ್‌ ದೇಸಾಯಿ ಅವರ “ಉದ್ಘರ್ಷ’ ಕೂಡ ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರ. ದೇಸಾಯಿ ಅವರು ಥ್ರಿಲ್‌ ಕೊಡುವಲ್ಲಿ ಸಿದ್ಧಹಸ್ತರು. ಆ ಜರ್ನಿ “ಉದ್ಭರ್ಷ’­ದಲ್ಲೂ ಮುಂದುವರೆದಿದೆ ಎಂಬುದನ್ನು ಮುಲಾಜಿಲ್ಲದೆ ಹೇಳಬಹುದು. “ಅಡಚಣೆಗಾಗಿ ಕ್ಷಮಿಸಿ’ ಚಿತ್ರ ಕೂಡ ಸಸ್ಪೆನ್ಸ್‌ ಥ್ರಿಲ್ಲರ್‌ ಅಂಶಗಳೊಂದಿಗೆ ಬರುತ್ತಿರುವ ಚಿತ್ರ. ಇಲ್ಲೂ ಹೊಸಬರಿದ್ದಾರೆ. ಈಗಾಗಲೇ ನಾರ್ವೆ ದೇಶದಲ್ಲಿ ಚಿತ್ರ ಪೂರ್ವಭಾವಿ ಪ್ರದರ್ಶನ ಕಂಡು ಮೆಚ್ಚುಗೆ ಪಡೆದುಕೊಂಡಿದೆ. “ಕಮರೊಟ್ಟು ಚೆಕ್‌ಪೋಸ್ಟ್‌’ ಚಿತ್ರ ಕೂಡ ಸಸ್ಪೆನ್ಸ್‌ ಇಟ್ಟುಕೊಂಡು ಬರುತ್ತಿರುವ ಚಿತ್ರ. ಆಪರೇಷನ್‌ ನಕ್ಷತ್ರ ಕೂಡ ಇದೇ ಹಾದಿಯಲ್ಲಿ ಸಾಗುವ ಚಿತ್ರ. ಇವುಗಳ ಸಾಲಿಗೆ ಇನ್ನೂ ಅನೇಕ ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರಗಳು ಪ್ರೇಕ್ಷಕರಿಗೆ ಥ್ರಿಲ್‌ ಕೊಡಲು ಸಜ್ಜಾಗುತ್ತಿವೆ.

ಸಸ್ಪೆನ್ಸ್‌ ಚಿತ್ರಗಳಲ್ಲಿ ವಿಶೇಷ ಲಕ್ಷಣಗಳಿರುತ್ತವೆ. ಅದು ಪೊಸ್ಟರ್‌ನಲ್ಲೇ ಅದನ್ನು ಸಾಬೀತುಪಡಿಸಿಬಿಡುತ್ತದೆ. ಕೆಲ ಚಿತ್ರಗಳ ಪೋಸ್ಟರ್‌ಗಳೇ ಇದು ಇಂತಹ ಕೆಟಗರಿಗೆ ಸೇರಿದ ಚಿತ್ರ ಎಂಬಷ್ಟರ ಮಟ್ಟಿಗೆ ಗಮನಸೆಳೆಯುತ್ತವೆ. ಎಷ್ಟೋ ಚಿತ್ರಗಳ ಪೋಸ್ಟರ್‌ಗಳು, ಸಿನಿಮಾ ನೋಡುವಷ್ಟರ ಮಟ್ಟಿಗೆ ಕುತೂಹಲ ಕೆರಳಿಸುತ್ತವೆ. ಹಾಗಾದರೆ, ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರಗಳು ಗೆದ್ದಿವೆಯಾ, ಜನರು ಹುಡುಕಿ ಬರುತ್ತಾರಾ ಎಂಬ ಪ್ರಶ್ನೆ ಎದುರಾಗುತ್ತದೆ. ಇಂತಹ ಚಿತ್ರಗಳಿಗೆ ಒಂದು ವರ್ಗ ಇದೆ. ಒಂದೊಂದು ಜಾನರ್‌ ಚಿತ್ರಗಳಿಗೆ ಇರುವಂತೆ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ ಪ್ರೀತಿಸುವ ಮಂದಿಯ ಸಂಖ್ಯೆ ತುಸು ಹೆಚ್ಚೇ ಎನ್ನಬಹುದು. ಸಾಮಾನ್ಯವಾಗಿ, ಇಂತಹ ಚಿತ್ರಗಳಲ್ಲಿ ಕಥೆ ಆಳವಾಗಿರುವುದಿಲ್ಲ ಎಂಬ ಆರೋಪವಿದೆ. ಇಲ್ಲಿ ಕಥೆಗಿಂತ, ಪ್ರೇಕ್ಷಕರನ್ನು ತಾಳ್ಮೆಯಿಂದ ನೋಡಿಸಿಕೊಂಡು ಹೋಗುವಂತಹ ತಾಕತ್ತು ಇರಬೇಕಷ್ಟೇ. ಇಲ್ಲಿ ಕಥೆ ಮತ್ತು ಪಾತ್ರಗಳ ಮಾತಿಗಿಂತ ದೃಶ್ಯಗಳಲ್ಲಿ ಸೈಲೆನ್ಸ್‌ ಅನ್ನು ಚೆನ್ನಾಗಿ ಕಟ್ಟಿಕೊಟ್ಟರೆ ಅದೇ ಗೆಲುವು ಇದ್ದಂತೆ. ಈ ಪ್ರಯೋಗ ಪರಭಾಷೆಯಲ್ಲೂ ಹೆಚ್ಚಾಗಿದೆ. ಈಗ ಕನ್ನಡದಲ್ಲಿ ಸಾಲುಗಟ್ಟಿ ನಿಂತಿದೆಯಷ್ಟೇ.

ಮೊದಲೇ ಹೇಳಿದಂತೆ ಸಸ್ಪೆನ್ಸ್‌ ಚಿತ್ರಗಳಿಗೆ ಹೆಚ್ಚು ಬಜೆಟ್‌ನ ಅವಶ್ಯಕತೆ ಇರಲ್ಲ. ಕತ್ತಲು ಬೆಳಕಿನಾಟದ ಜೊತೆಗೆ, ಒಂದು ಮನೆ ಇಲ್ಲವೇ ಹೋಮ್‌ಸ್ಟೇ ಇತರೆ ಕಡೆ ಸ್ವಲ್ಪ ಕುತೂಹಲ ಕೆರಳಿಸುವ ದೃಶ್ಯಗಳನ್ನು ಇಟ್ಟು, ಹಿನ್ನೆಲೆ ಸಂಗೀತಕ್ಕೆ ಹೆಚ್ಚು ಗಮನಕೊಟ್ಟರೆ ಹೊಸ ಥ್ರಿಲ್‌ ಕೊಡಬಹುದು. ವಿಶೇಷವಾಗಿ ಈ ಚಿತ್ರಗಳಿಗೆ ಸಿಂಗಲ್‌ ಥಿಯೇಟರ್‌ ಒಗ್ಗಲ್ಲ. ಮಲ್ಟಿಪ್ಲೆಕ್ಸ್‌ಗೆ ಸೀಮಿತ ಎಂಬ ಮಾತು ಕೇಳಿಬರುತ್ತಿದೆ. ಹಾಗೆ ನೋಡಿದರೆ, ಸಿಂಗಲ್‌ ಥಿಯೇಟರ್‌ ಕಾನ್ಸೆಪ್ಟ್ ಎಂಬುದು ಬಹಳ ಹಿಂದೆಯೇ ಮಾಯವಾಗಿದೆ. ಇಂತಹ ಕೆಟಗರಿ ಚಿತ್ರಗಳು ಬಿಡುಗಡೆ ಮುನ್ನ ಕೊಂಚ ಟ್ರೇಲರ್‌ನಲ್ಲೋ, ಟೀಸರ್‌ನಲ್ಲೋ ಅಥವಾ ಪೋಸ್ಟರ್‌ನಲ್ಲೋ ಸದ್ದು ಮಾಡಿದರೆ ಸಾಕು ಅವುಗಳನ್ನು ಹುಡುಕಿ ಸಿನಿಮಾ ಬಿಡುಗಡೆ ಮಾಡಲು ಮಂದಿ ಸಾಲುಗಟ್ಟುತ್ತಾರೆ. ಇಂತಹ ಪ್ರಯೋಗದ ಚಿತ್ರಗಳಲ್ಲಿ ಸ್ಟಾರ್‌ ಇರಲ್ಲ. ಕುತೂಹಲದ ಅಂಶಗಳೇ ಇಲ್ಲಿ ಹೀರೋ. ಹಾಗಾಗಿ, ಮೆಚ್ಚಿಕೊಳ್ಳುವ ಮಂದಿ ಫಿಫ್ಟಿ ಫಿಫ್ಟಿ ಮಾತ್ರ. ಒಳ್ಳೆಯ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ ಎಂಬ ಮಾತಿದ್ದರೂ, ಒಂದು ವಾರಕ್ಕಿಂತ ಹೆಚ್ಚು ಥಿಯೇಟರ್‌ನಲ್ಲಿ ಇರುವುದು ಕಷ್ಟ. 

ಕಾರಣ, ಇಂತಹ ಚಿತ್ರಗಳ ಹಿಂದೆ ನಿಲ್ಲುವ ನಿರ್ದೇಶಕರು ಕಥೆಯಲ್ಲಿ ಪೂರ್ಣ ಪ್ರಮಾಣದ ಹಿಡಿತ ಇಟ್ಟುಕೊಂಡಿರುವುದಿಲ್ಲ. ಮೊದಲರ್ಧ ನೀರಸ ಕಥೆ, ನಿರೂಪಣೆಯಲ್ಲಿ ಸಾಗಿದರೆ, ದ್ವಿತಿಯಾರ್ಧದಲ್ಲಿ ಮಾತ್ರ ಹೊಸ ಥ್ರಿಲ್‌ ಅನುಭವ ಕಟ್ಟಿಕೊಟ್ಟಿರುತ್ತಾರೆ. ಇಡೀ ಸಿನಿಮಾ ಥ್ರಿಲ್ಲಿಂಗ್‌ ಎನಿಸಿದರೆ ಮಾತ್ರ ಪ್ರೇಕ್ಷಕ ಜೈಹೋ ಎನ್ನುತ್ತಾನೆ. ಇಲ್ಲವಾದರೆ, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾರ ಕಳೆದಂತೆ ಬದಲಾಗಬೇಕಾದ ಅನಿವಾರ್ಯ ಬಂದೊದಗುತ್ತದೆ. ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರಗಳ ಹಾವಳಿ ಹೆಚ್ಚಾಗಿದೆಯಾದರೂ, ಆರಂಭದಿಂದ ಅಂತ್ಯದವರೆಗೂ ಥ್ರಿಲ್ಲಿಂಗ್‌ ಅಂಶಗಳೊಂದಿಗೆ ಸಾಗುವಂತೆ ಮಾಡುವ ಚಿತ್ರಗಳಿಗೆ ಮಾತ್ರ ಇಲ್ಲಿ ನೆಲೆ ಮತ್ತು ಬೆಲೆ. ಸಸ್ಪೆನ್ಸ್‌ ಅಂತ ಎಲ್ಲವನ್ನೂ ಮಚ್ಚಿಟ್ಟು, ಕೊನೆಯಲ್ಲಿ ಹಿಡಿಯಷ್ಟು ಹೇಳಲು ಹೋಗಿ ಯಾಮಾರುವ ನಿರ್ದೇಶಕರೇ ಇಲ್ಲಿ ಹೆಚ್ಚು. ಅದನ್ನು ಹೇಳದೆಯೂ ಕೊನೆಯವರೆಗೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡು ಹೋಗುವ ಕಲೆ ಸಿದ್ದಿಸಿಕೊಂಡವರು ಮಾತ್ರ ಥ್ರಿಲ್‌ ಆಗಬಹುದು. ಇಂತಹ ಕೆಟಗರಿ ಚಿತ್ರಗಳಿಗೆ ವ್ಯಾಪಾರ ವಹಿವಾಟು ಆಗುತ್ತೋ ಇಲ್ಲವೋ, ಹಾಕಿದ ಬಂಡವಾಳ ಹಿಂದಿರುಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಇಂಡಸ್ಟ್ರಿಯಲ್ಲಿ ಕೊಂಚ ಸುದ್ದಿಯಂತೂ ಆಗುತ್ತದೆ. ಎಲ್ಲವನ್ನೂ ತುಂಬಾ ಪೂರ್ಣವಾಗಿ ಮಾಡಿದ್ದಲ್ಲಿ ಮಾತ್ರ ನಿರ್ಮಾಪಕ ಕೂಡ ಥ್ರಿಲ್‌ ಆಗುತ್ತಾನೆ ಎಂಬುದನ್ನು ಒಪ್ಪಲೇಬೇಕು.

– ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next