Advertisement

ಕೆಡವಿದ ಗಾಂಧಿಕಟ್ಟೆ ಮರು ನಿರ್ಮಾಣಕ್ಕೆ ಎದುರಾಯಿತು ವಿಘ್ನ!

01:01 AM Jun 12, 2019 | mahesh |

ನಗರ: ಪುತ್ತೂರಿನ ಐತಿಹಾಸಿಕ ಗಾಂಧಿ ಕಟ್ಟೆಯನ್ನು ಪುನರ್‌ ನಿರ್ಮಿಸಿ ಅಭಿವೃದ್ಧಿಗೊಳಿಸುವ ನಗರಸಭೆಯ ಯೋಜನೆಗೆ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ತಡೆಯಾಜ್ಞೆ ತಡೆಯಾಗಿ ಪರಿಣಮಿಸಿದೆ.

Advertisement

ನಗರದ ಹೃದಯಭಾಗದ ಬಸ್‌ ನಿಲ್ದಾಣದ ಬಳಿ ಇರುವ ಗಾಂಧಿ ಕಟ್ಟೆ ಹಾಗೂ ಗಾಂಧೀಜಿಯವರ ಪ್ರತಿಮೆಯನ್ನು ಮಾ. 17ರಂದು ತಾತ್ಕಾಲಿಕವಾಗಿ ತೆರವುಗೊಳಿಸಲಾಗಿತ್ತು. ರಸ್ತೆಗೆ ಸಮಾನಾಂತರವಾಗಿ ಕೆಳ ಭಾಗದಲ್ಲಿ ಮರು ನಿರ್ಮಿಸುವ ಉದ್ದೇಶದಿಂದ ಸ್ಥಳೀಯಾ ಡಳಿತ ನಗರಸಭೆ ಈ ಕ್ರಮ ಕೈಗೊಂಡಿತ್ತು.

ಈ ಜಾಗದ ಅಭಿವೃದ್ಧಿಯ ದೃಷ್ಟಿಯಿಂದ ನಗರಸಭೆಯಿಂದ 8 ಲಕ್ಷ ರೂ. ವೆಚ್ಚದ ಯೋಜನೆಯನ್ನು ಹಾಕಿಕೊಂಡಿತ್ತು. ಗಾಂಧಿಕಟ್ಟೆಯನ್ನು ರಸ್ತೆಗೆ ಸಮಾನಾಂತರವಾಗಿ ಕೆಳಭಾಗಕ್ಕೆ ಮರು ನಿರ್ಮಿಸುವುದು ಮತ್ತು ಅಶ್ವತ್ಥ ಮರಕ್ಕೆ ಸುತ್ತಲೂ ಭದ್ರವಾದ ಕಟ್ಟೆ ಕಟ್ಟುವ ಯೋಜನೆಯನ್ನು ನಗರಸಭೆ ಕೈಗೆತ್ತಿಕೊಂಡಿತ್ತು. ಅಶ್ವತ್ಥ ಮರಕ್ಕೆ ಹಾನಿಯಾಗದಂತೆ ಪೂರಕ ವ್ಯವಸ್ಥೆಗಳನ್ನು ಕೈಗೊಳ್ಳುವ ಅಂದಾಜನ್ನು ನಗರಸಭೆ ರೂಪಿಸಿತ್ತು. ಅಬ್ದುಲ್‌ ರಝಾಕ್‌ ಎನ್ನುವವರು ಗುತ್ತಿಗೆ ವಹಿಸಿಕೊಂಡಿದ್ದರು.

ತಡೆಯಾಜ್ಞೆ
ಬನ್ನೂರು ನಿವಾಸಿ ಚಂದ್ರಶೇಖರ ಪಾಟಾಳಿ ಅವರು ಈ ಕಾಮಗಾರಿಯ ವಿರುದ್ಧ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಸಾರ್ವಜನಿಕ ಕಾಮಗಾರಿಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ತೀರ್ಪೊಂದನ್ನು ಆಧಾರವಾಗಿಟ್ಟುಕೊಂಡು ರಸ್ತೆ ಬದಿ ಗಾಂಧಿಕಟ್ಟೆ ನಿರ್ಮಾಣ ಮತ್ತು ಅಶ್ವತ್ಥ ಕಟ್ಟೆ ಅಭಿವೃದ್ಧಿ ಕಾಮಗಾರಿಗೆ ತಡೆಯಾಜ್ಞೆ ತರಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಗರಸಭಾ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿಯನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ.

ನ್ಯಾಯಾಲಯದಿಂದ ತಡೆಯಾಜ್ಞೆ ಯಾದ ಬಳಿಕ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಅನಂತರದಲ್ಲಿ ಹೈಕೋರ್ಟ್‌ಗೆ ಬೇಸಗೆ ರಜೆ ಇದ್ದ ಕಾರಣ ತಡೆಯಾಜ್ಞೆ ತೆರವಿಗೆ ವಿಳಂಬವಾಗಿದೆ. ಈಗ ರಜೆ ಮುಗಿದಿರುವ ಹಿನ್ನೆಲೆಯಲ್ಲಿ ನಗರಸಭೆಯ ಸ್ಥಳೀಯ ನ್ಯಾಯವಾದಿ ಯು.ಎಸ್‌. ನಾಗರಾಜ್‌ ನೇತೃತ್ವದಲ್ಲಿ ನಗರಸಭೆಯ ಕಡೆಯಿಂದ ನ್ಯಾಯಾಲಯಕ್ಕೆ ಅಗತ್ಯ ದಾಖಲೆಗಳನ್ನು ನೀಡಲಾಗಿದ್ದು, ಶೀಘ್ರ ತಡೆಯಾಜ್ಞೆ ತೆರವಿಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ನಗರಸಭಾ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಐತಿಹಾಸಿಕ ನೆನಪು
ಸ್ವಾತಂತ್ರ್ಯಪೂರ್ವ 1934ರಲ್ಲಿ ಮಹಾತ್ಮ ಗಾಂಧೀಜಿಯವರು ಪುತ್ತೂರಿಗೆ ಆಗಮಿಸಿದ ಮತ್ತು ಅಶ್ವತ್ಥ ಮರದ ಕೆಳಗೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ನೆನಪಿನಲ್ಲಿ ಈ ಗಾಂಧಿ ಕಟ್ಟೆಯನ್ನು ನಿರ್ಮಿಸಿ, ಗಾಂಧಿ ಪ್ರತಿಮೆ ಯನ್ನು ಪ್ರತಿಷ್ಠಾಪಿಸಲಾಗಿತ್ತು. ಇದೇ ಜಾಗದಲ್ಲಿ ಅಶ್ವತ್ಥ ಮರವೂ ಇದೆ. ಪುತ್ತೂರು ನೂತನ ಬಸ್‌ ನಿಲ್ದಾಣ ನಿರ್ಮಾಣ ಮಾಡಿದ ಸಂದರ್ಭದಲ್ಲೂ ಗಾಂಧಿಕಟ್ಟೆಯನ್ನು ಹಾಗೆಯೇ ಉಳಿಸಲಾಗಿತ್ತು.

ಪರ-ವಿರೋಧ ಅಭಿಪ್ರಾಯ
ಗಾಂಧಿಕಟ್ಟೆ ಹಾಗೂ ಅಶ್ವತ್ಥ ಮರದ ಮಹತ್ವ ಮತ್ತು ಪ್ರಸ್ತುತತೆ, ಜತೆಗೆ ಅವೆರಡನ್ನೂ ಯಥಾಸ್ಥಿತಿಯಲ್ಲಿ ಖಇ ಹಾಗೂ ಬದಲಾವಣೆ ಮಾಡಿಕೊಳ್ಳುವ ಕುರಿತು ಹಲವು ಬಾರಿ ಚರ್ಚೆ, ಗೊಂದಲಗಳು ನಡೆದಿದ್ದವು. ಕೆಲವರು ಗಾಂಧಿ ಕಟ್ಟೆ ಹಾಗೂ ಅಶ್ವತ್ಥ ಮರವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವ ಪರ ಮಾತನಾಡಿದರೆ, ಇನ್ನು ಕೆಲವರು ಪುತ್ತೂರಿನ ಅಭಿವೃದ್ಧಿಯ ದೃಷ್ಟಿಯಿಂದ ವ್ಯತ್ಯಾಸಗಳನ್ನು ಮಾಡಿಕೊಳ್ಳುವ ಪರ ನಿಂತು ನಿರಂತರ ವಾದ-ಪ್ರತಿವಾದಗಳು ನಡೆಯುತ್ತಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next