ರಾಯಚೂರು: ಮಹಾತ್ಮಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ನಿಮಿತ್ತ ಅವರ ಸಂದೇಶಗಳನ್ನು ಇಡೀ ರಾಜ್ಯಾದ್ಯಂತ ಪಸರಿಸುವ ನಿಟ್ಟಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಏರ್ಪಡಿಸಿರುವ ಗಾಂಧೀಜಿ ಅಭಿಯಾನದ ಸ್ತಬ್ಧಚಿತ್ರ ರಥಯಾತ್ರೆ ಶನಿವಾರ ಜಿಲ್ಲೆಯ ಸಿಂಧನೂರು ನಗರಕ್ಕೆ ಪ್ರವೇಶಿಸಿದಾಗ ಅದ್ಧೂರಿಯಾಗಿ
ಸ್ವಾಗತಿಸಲಾಯಿತು.
ಗಾಂಧೀಜಿ ಅಭಿಯಾನದ ಸ್ತಬ್ಧಚಿತ್ರ ರಥಯಾತ್ರೆ ಸಿಂಧನೂರು ನಗರಕ್ಕೆ ಪ್ರವೇಶಿಸುತ್ತಲೇ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ಮಹಾತ್ಮ ಗಾಂಧಿಧೀಜಿ ಅವರಿಗೆ ಪ್ರಿಯವಾದ ರಘುಪತಿ ರಾಘವ ರಾಜಾರಾಮ, ವೈಷ್ಣವಿ ಜನತೋ…
ಸೇರಿದಂತೆ ವಿವಿಧ ಭಜನೆಗಳನ್ನು ಹಾಡಲಾಯಿತು. ಗಾಂಧಿಧೀಜಿ ಪರ ಜೈಘೋಷ ಕೂಗಲಾಯಿತು.
ತಹಶೀಲ್ದಾರ್ ಶಿವಾನಂದ ಸಾಗರ, ನಗರಸಭೆ ಪೌರಾಯುಕ್ತ ವಿರೂಪಾಕ್ಷ ಮೂರ್ತಿ ಅವರು ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಚಾಲನೆ ನೀಡಿದರು.
ಸಿಂಧನೂರು ತಹಶೀಲ್ದಾರ್ ಶಿವಾನಂದ ಸಾಗರ ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ಹೊತ್ತಿನಲ್ಲಿ ಅವರ ವಿಚಾರಧಾರೆಗಳು ಮತ್ತು ಸಂದೇಶಗಳನ್ನು ಇಡೀ ನಾಡಿನ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಎರಡು ಮಾರ್ಗಗಳಲ್ಲಿ ಈ ರಥಯಾತ್ರೆಗಳು ರಾಜ್ಯಾದ್ಯಂತ ಸಂಚರಿಸುತ್ತಿವೆ. ಶಾಂತಿ ಮಾರ್ಗ ಎನ್ನುವ ಸ್ತಬ್ಧಚಿತ್ರ ರಥಯಾತ್ರೆಯು ಬಳ್ಳಾರಿ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಸಂಚರಿಸಿ ಸಿಂಧನೂರಿಗೆ ಆಗಮಿಸಿದೆ ಎಂದರು.
ಮಹಾತ್ಮರ ವಿಚಾರಧಾರೆಗಳು ಮತ್ತು ಅವರ ಸಂದೇಶಗಳನ್ನು ಸಾರ್ವಜನಿಕರು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಬಳಿಕ ಸ್ತಬ್ಧಚಿತ್ರ ರಥ ಯಾತ್ರೆಯು ಸಿಂಧನೂರು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಜಿಪಂ ಸದಸ್ಯರಾದ ಅಮರೇಗೌಡ ವಿರುಪಾಪುರ, ಬಸವರಾಜ ನಾಡಗೌಡ, ತಾಪಂ ಕಾ.ನಿ. ಅಧಿಕಾರಿ ಬಾಬು ರಾಠೊಡ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.