Advertisement

ಗಾಂಧೀಜಿ ಜೀವನಾಧರಿತ “ಮೋಹನಾಯನಮ್‌’

06:50 PM Oct 01, 2019 | mahesh |

ಉಡುಪಿ: ಮಹಾತ್ಮಾ ಗಾಂಧೀಜಿಯವರ ಜೀವನ ಆಧಾರಿತ ಸಂಸ್ಕೃತ ಮಹಾಕಾವ್ಯ “ಮೋಹನಾಯನಮ್‌’ ಸ್ವಾತಂತ್ರ್ಯ ಸಿಕ್ಕಿದ ಕೆಲವೇ ವರ್ಷಗಳಲ್ಲಿ ಹೊರಬಂದಿದ್ದರೂ ರಾಷ್ಟ್ರ ಮಟ್ಟಕ್ಕೇರಲಿಲ್ಲ. ಈಗ ಉಡುಪಿಯ ಆಸಕ್ತರಿಗೆ ಅದನ್ನು ಆಲಿಸುವ ಅವಕಾಶ ದೊರಕಿದೆ.

Advertisement

ಈ ಮಹಾಕಾವ್ಯವನ್ನು ಬರೆದವರು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಬೊಮ್ಲಾಪುರದ ವಿ| ವೆಂಕಟರಾಮ ಭಟ್‌. ಸುಮಾರು 600-700 ಶ್ಲೋಕಗಳಿರುವ ಈ ಮಹಾ ಕಾವ್ಯವನ್ನು ಭಟ್‌ ಅವರು ಗಾಂಧೀಜಿ ಬದುಕಿದ್ದಾಗಲೇ ಆರಂಭಿಸಿದ್ದರೂ ಪೂರ್ಣ ಗೊಳ್ಳುವಾಗ 1955-56 ಆಗಿತ್ತು.

ಮೊದಲು ಬೀರೂರು ಪಾಠಶಾಲೆಯಲ್ಲಿ ಶಿಕ್ಷಕರಾಗಿದ್ದ ಭಟ್‌ ಅನಂತರ ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪ, ಸೊರಬ ಸರಕಾರಿ ಪ್ರೌಢಶಾಲೆಗಳಲ್ಲಿ ಸಂಸ್ಕೃತ ಶಿಕ್ಷಕರಾಗಿ 1973ರಲ್ಲಿ ನಿವೃತ್ತಿ ಹೊಂದಿದರು. ನಿವೃತ್ತಿಯ ಅನಂತರ ತುಮಕೂರು ಸಿದ್ಧಗಂಗಾ ಸಂಸ್ಕೃತ ಕಾಲೇಜಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.

ತುಮಕೂರಿನಲ್ಲಿರುವಾಗ ಸಂಸ್ಕೃತ ವಿ.ವಿ. ನಿವೃತ್ತ ಕುಲಪತಿ ಪ್ರೊ| ಮಲ್ಲೇಪುರಂ ವೆಂಕಟೇಶ್‌, ಸೊರಬದಲ್ಲಿರುವಾಗ ಪ್ರಸ್ತುತ ಆರೆಸ್ಸೆಸ್‌ ಸಹಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆಯವರ ಮನೆಯ ಎಲ್ಲ ಸದಸ್ಯರೂ ಭಟ್‌ ಅವರ ವಿದ್ಯಾರ್ಥಿಗಳಾಗಿದ್ದರು.

ಡಿವಿಜಿಯವರ ಮಂಕುತಿಮ್ಮನ ಕಗ್ಗ ಕೃತಿಯನ್ನು ಸಂಸ್ಕೃತಕ್ಕೆ ಅನುವಾದಿಸಿದ ಭಟ್‌, ಶ್ರೀಮದ್ಭಾಗವತದ ದಶಮ ಸ್ಕಂದವನ್ನು ಭಾಮಿನಿ ಷಟ³ದಿಯಲ್ಲಿ “ಭಾಮಿನಿ ಮಾಧವ’, “ಮಾಧವ ಬಾಲಲೀಲೆ’, “ಶಂಕರ ಚರಿತೆ’ ಹೀಗೆ ಅನೇಕ ಮಹಾಕಾವ್ಯಗಳಾಗಿ ರಚಿಸಿದರು. ಇವುಗಳಲ್ಲಿ ಬಹುತೇಕ ಸಂಸ್ಕೃತದಲ್ಲಿವೆ. ಅನೇಕ ಮಹಾಕಾವ್ಯಗಳನ್ನು ರಚಿಸಿದರೂ ಇವರ ಕೆಲಸದ ಮಹತ್ವದ ಅರಿವು ರಾಷ್ಟ್ರಮಟ್ಟದಲ್ಲಿ ಆಗಿಲ್ಲ.

Advertisement

“ನಾನು ಸಂಸ್ಕೃತದಲ್ಲಿ ಎಂ.ಎ. ಮಾಡಿದ್ದರೂ ಕನ್ನಡ ಶಿಕ್ಷಕಿಯಾದ ಕಾರಣ ಕಲಿತದ್ದು ಮರೆತು ಹೋಯಿತು. ಈಗ ಮತ್ತೆ ಸಂಸ್ಕೃತ ಅಧ್ಯಯನದಲ್ಲಿ ತೊಡಗಿದ್ದೇನೆ’ ಎನ್ನುತ್ತಾರೆ ವೆಂಕಟರಾಮ ಭಟ್ಟರ ಪುತ್ರಿ, ಬೆಂಗಳೂರಿನಲ್ಲಿರುವ ವಸುಮತಿಯವರು.

ಎಂಜಿಎಂನಲ್ಲಿ ಇಂದು ಗಾನ-ವ್ಯಾಖ್ಯಾನ
ಮಣಿಪಾಲ ಮಾಹೆಯ ಗಾಂಧಿಯನ್‌ ಸೆಂಟರ್‌ ಫಾರ್‌ ಫಿಲಾಸಫಿಕಲ್‌ ಆರ್ಟ್ಸ್ ಆ್ಯಂಡ್‌ ಸೈನ್ಸಸ್‌, ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿಯ ರಥಬೀದಿ ಗೆಳೆಯರ ಜಂಟಿ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಅ. 2ರ ಸಂಜೆ 4.30ಕ್ಕೆ ಎಂಜಿಎಂ ಕಾಲೇಜಿನ ಧ್ವನ್ಯಾ ಲೋಕದಲ್ಲಿ “ಮೋಹನಾಯನಮ್‌’ ಗಾನ ವ್ಯಾಖ್ಯಾನ ನಡೆಯಲಿದೆ. ಸಂಸ್ಕೃತ ಶಿಕ್ಷಕರಾದ ವಿ| ಶಂಭು ಭಟ್ಟರು ಗಾನವನ್ನು, ಡಾ| ರಾಘವೇಂದ್ರ ರಾವ್‌ ಕನ್ನಡ ವ್ಯಾಖ್ಯಾನವನ್ನು ನಡೆಸಿಕೊಡಲಿದ್ದಾರೆ. ವೆಂಕಟರಾಮ ಭಟ್ಟರ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next