ಪುರಭವನ : ಮಹಾತ್ಮಾ ಗಾಂಧೀಜಿಯವರ ಚಿಂತನೆ ಹಾಗೂ ಆದರ್ಶಗಳ ಪಾಲನೆಯಿಂದ ಶಾಂತಿ, ಸಾಮರಸ್ಯದಿಂದೊಡಗೂಡಿದ ಸುಖೀ ಸಮಾಜದ ನಿರ್ಮಾಣ ಸಾಧ್ಯ ಎಂದು ಶಾಸಕ ಜೆ.ಆರ್. ಲೋಬೋ ಅವರು ಹೇಳಿದರು.
ಜಿಲ್ಲಾಡಳಿತ ಹಾಗೂ ಭಾರತ ಸೇವಾದಳ ಆಶ್ರಯದಲ್ಲಿ ಪುರಭವನದ ಬಳಿಯ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಸೋಮವಾರ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಮಹಾತ್ಮಾ ಗಾಂಧೀಜಿಯವರ ಚಿಂತನೆಗಳು, ಆದರ್ಶಗಳು ಸರ್ವಮಾನ್ಯ ಮತ್ತು ಸಾರ್ವಕಾಲಿಕ ಪ್ರಸ್ತುತತೆಯನ್ನು ಪಡೆದಿದೆ. ತ್ಯಾಗ, ನಿಸ್ವಾರ್ಥ ಹೋರಾಟ ಮತ್ತು ಅಹಿಂಸೆಯ ಮೂಲಕ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟಿರುವ ರಾಷ್ಟ್ರಪಿತ ಗಾಂಧೀಜಿಯವರು ಸದಾ ವಂದ್ಯರು ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸ್ವಾಗತಿಸಿ, ಗಾಂಧೀಜಿಯವರ ಸ್ವಚ್ಚ ಭಾರತ, ಸ್ವಚ್ಚ ಮನಸ್ಸು ಹಾಗೂ ಶ್ರಮ ಜೀವನದ ಪರಿಕಲ್ಪನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕಾಗಿದೆ ಎಂದರು. ಜಿಲ್ಲಾಡಳಿತದೊಂದಿಗೆ ಸೇರಿ ಭಾರತ ಸೇವಾ ದಳವು ಪ್ರತಿ ವರ್ಷ ಗಾಂಧಿ ಜಯಂತಿಯನ್ನು ಆಚರಿಸುತ್ತಿದೆ ಹಾಗೂ ರಾಷ್ಟ್ರಭಕ್ತಿಯನ್ನು ಉದ್ದೀಪನಗೊಳಿಸುತ್ತದೆ ಎಂದರು. ಪೌರಕಾರ್ಮಿಕರಾಗಿ ನಿವೃತ್ತರಾದ ರುದ್ರಪ್ಪ ಅವರನ್ನು ಸಮ್ಮಾನಿಸಲಾಯಿತು.
ಅಪರ ಜಿಲ್ಲಾಧಿಕಾರಿ ಕುಮಾರ್, ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್, ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಬಶೀರ್ ಬೈಕಂಪಾಡಿ, ಕೇಂದ್ರ ಸಮಿತಿ ಸದಸ್ಯ ಫ್ರಾನ್ಸಿಸ್, ತಾಲೂಕು ಅಧ್ಯಕ್ಷ ಪ್ರಭಾಕರ ಶ್ರೀಯಾನ್, ಮಂಜೇಗೌಡ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖಾಧಿಕಾರಿ ಖಾದರ್ ಷಾ ಮತ್ತಿತರರು ಉಪಸ್ಥಿತರಿದ್ದರು.
ಗಾಂಧಿ ಜಯಂತಿ ಪ್ರಯುಕ್ತ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹೊರತಂದ ‘ಜನಪದ’ ವಿಶೇಷಾಂಕವನ್ನು ಶಾಸಕ ಲೋಬೋ ಬಿಡುಗಡೆಗೊಳಿಸಿದರು.
ಗಾಂಧಿಜಯಂತಿ ಅಂಗವಾಗಿ ಪುರಭವನದಲ್ಲಿ ಭಜನೆ ಹಾಗೂ ಗಾಂಧೀಜಿಯವರಿಗೆ ಪ್ರಿಯವಾದ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.