ಚಿಂತಾಮಣಿ: ದೇಶದಲ್ಲಿ ಸ್ವಾತಂತ್ರ್ಯ ಚಳುವಳಿಯ ನೇತೃತ್ವ ವಹಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿರವರು 1936 ರಲ್ಲಿ ಚಿಂತಾಮಣಿ ನಗರಕ್ಕೆ ಆಗಮಿಸಿ ಸ್ಥಳೀಯ ಸ್ವಾತಂತ್ರ್ಯ ಸೇನಾನಿ ಗಳನ್ನು ಉದ್ದೇಶಿಸಿ ಭಾಷಣ ಮಾಡಿದ ಸವಿನೆನಪಿಗಾಗಿಯೆ ಮಹಾತ್ಮ ಗಾಂಧೀಜಿ ಹೆಸರನಲ್ಲಿ ಸರ್ಕಾರಿ ಶಾಲೆಯೊಂದು ಸ್ಥಾಪನೆ ಯಾಗಿ ಕಾರ್ಯನಿರ್ವಹಿಸುತ್ತಿದೆ.
ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬಂದಿದ್ದ ವೇಳೆ ಆನಾರೋಗ್ಯಕ್ಕೆ ತುತ್ತಾಗಿದ್ದ ಗಾಂಧೀಜಿರನ್ನು ವಿಶ್ರಾಂತಿಗಾಗಿ ನಂದಿಗಿರಿಧಾಮಕ್ಕೆ ಕರೆ ತರಲಾಗಿತ್ತು. ಆದರೆ ಗಾಂಧಿ ತಮ್ಮ ಆನಾರೋಗ್ಯವನ್ನು ಲೆಕ್ಕಿಸದೇ ಚಿಂತಾಮಣಿ ನಗರಕ್ಕೆ 1936 ರಲ್ಲಿ ಆಗಮಿಸಿ ಸ್ವಾತಂತ್ರ್ಯ ಹೋರಾಟದ ಕಹಳೆ ಮೊಳಗಿಸಿದ್ದರು. ಆಗ ಕೋಲಾರ, ಪಕ್ಕದ ಶ್ರೀನಿವಾಸಪುರ, ಬಾಗೇಪಲ್ಲಿ, ಚೇಳೂರು, ಶಿಡ್ಲಘಟ್ಟದಿಂದಲೂ ಆಗ ಸ್ವಾತಂತ್ರ್ಯ ಹೋರಾಟಗಾರರು ಚಿಂತಾಮಣಿಗೆ ಆಗಮಿಸಿ ಗಾಂಧೀಜಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ ದೇಶವ್ಯಾಪಿ ಹರಿಜನ ನಿಧಿ ಸಂಗ್ರಹಣೆಗೆ ಪಾದಯಾತ್ರೆ ನಡೆಸಿದ ಗಾಂಧೀಜಿ ಚಿಂತಾಮಣಿ ನಗರದಲ್ಲಿರುವ ಬಾಲಕರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಒಂದು ದಿನ ರಾತ್ರಿ ತಂಗಿದ್ದರು. ಆದ್ದರಿಂದ ಆ ಶಾಲೆಗೆ ಸರ್ಕಾರ ಮಹಾತ್ಮ ಗಾಂಧಿ ಸರ್ಕಾರಿ ಪ್ರೌಢ ಶಾಲೆಯೆಂದು ನಾಮಾಂಕಿತಗೊಂಡಿದೆ. ಅಂದಿನಿಂದ ಇಂದಿನವರೆಗೂ ಕೂಡ ನಗರದಲ್ಲಿ ಮಹಾತ್ಮಗಾಂಧೀಜಿ ಹೆಸರಲ್ಲಿ ಸರ್ಕಾರಿ ಬಾಲಕರ ಪ್ರೌಢ ಶಾಲೆಯೆಂದು ಹೆಚ್ಚು ಪ್ರಸಿದ್ಧಿ ಪಡೆದಿದೆ.
ಇಂದಿಗೂ ಗಾಂಧಿ ಭೇಟಿ ಕೊಟ್ಟಿದ್ದ ಶಾಲೆಯ ಕಟ್ಟಡವನ್ನು ಪಾರಂಪರಿಕ ಕಟ್ಟಡವಾಗಿ ಉಳಿಸಿಕೊಳ್ಳಲಾಗಿದೆ. ನೂರಾರು ಬಡ ಮಕ್ಕಳು ಇಲ್ಲಿ ಓದುತ್ತಿದ್ದಾರೆ. ಇಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜ್ ಸಹ ನಡೆಸಲಾಗುತ್ತಿದೆ.
ಶಾಲೆಯಲ್ಲಿ ಆಕರ್ಷಕ ಗಾಂಧಿ ಪುತ್ಥಳಿ: ಸರ್ಕಾರಿ ಪ್ರೌಢ ಶಾಲೆಗೆ ಮಹಾತ್ಮಗಾಂಧೀಜಿ ಬೇಟಿ ನೀಡಿದ್ದ ಭಾಗವಾಗಿಯೆ ಶಾಲೆಯ ಆವರಣದಲ್ಲಿ ಮಹಾತ್ಮನ ಆಕರ್ಷಕವಾದ ಪುತ್ಥಳಿಯನ್ನು ಆನಾವರಣಗೊಳಿಸಲಾಗಿದೆ. 1936 ರಲ್ಲಿ ಶಾಲೆಗೆ ಗಾಂಧೀಜಿ ಭೇಟಿ ನೀಡಿದ್ದ ಸವಿನೆನಪಿಗಾಗಿ ಶಾಲೆಯ ಆಗಿನ ಉಪಾಧ್ಯಾಯರಾಗಿದ್ದ ಬಿ.ಮಾಧವರಾಯರು ತಮ್ಮ ಕೊಡುಗೆಯಾಗಿ ಶಾಲೆಗೆ ಗಾಂಧಿ ಪುತ್ಥಳಿಯನ್ನು ನೀಡಿದ್ದು ಅದನ್ನು 2000ನೇ ವರ್ಷದ ಜನವರಿ 30 ರಂದು ಶಾಲೆಯಲ್ಲಿ ಆನಾವರಣಗೊಳಿಸಲಾಗಿದೆ. ಖ್ಯಾತ ಶಿಲ್ಪಿ ಸುರಾಲು ವಿ.ಭಟ್ ಗಾಂಧಿ ಪುತ್ಥಳಿಯನ್ನು ಕತ್ತೆನೆ ಮಾಡಿದ್ದಾರೆ.
–ಎಂಡಿ.ತಿಪ್ಪಣ್ಣ