Advertisement

ಮತದಾರರಿಗೆ ಆಮಿಷ ಒಡ್ಡಲು ಗಾಂಧಿಗಿರಿ

11:53 AM May 30, 2018 | |

ಬೆಂಗಳೂರು: ಚುನಾವಣಾ ಆಯೋಗವು ಅಕ್ರಮಗಳನ್ನು ತಡೆಯಲು ವಿಫ‌ಲವಾಗಿದೆ ಎಂದು ಆರೋಪಿಸಿರುವ ಜಯನಗರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾರೆಡ್ಡಿ, ಕ್ಷೇತ್ರದಲ್ಲಿ ಆಮಿಷ ಬಯಸುವ ಮತದಾರರಿಗೆ 2,888 ರೂ. ನಗದು, ಕುಕ್ಕರ್‌, ನಿಕ್ಕರ್‌, ಸೀರೆ ಹಂಚಲು ಅನುಮತಿ ಕೋರಿ ಆಯೋಗಕ್ಕೆ ಮನವಿ ಮಾಡುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

Advertisement

ಆಯೋಗವು ಚುನಾವಣೆಯನ್ನು ಶಾಂತಿಯುತವಾಗಿ ನಡೆಸಿರುವುದು ಅಭಿನಂದನೀಯ. ಆದರೆ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಿದೆಯೇ ಎಂದು ಪ್ರಶ್ನಿಸಿರುವ ಅವರು ಆಯೋಗವು ಜೂ. 1ರೊಳಗೆ ಸ್ಪಂದಿಸದಿದ್ದರೆ ಆಯೋಗದ ಮೌನವನ್ನೇ ಸಮ್ಮತಿ ಎಂದು ಪರಿಗಣಿಸಿ ಜೂ. 2ರಂದು ಆಮಿಷ ಬಯಸುವ ಮತದಾರರಿಗೆ ಉಡುಗೊರೆ ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ.

ಜಯನಗರ 4ನೇ ಬ್ಲಾಕ್‌ನಲ್ಲಿರುವ ತಮ್ಮ ಕಚೇರಿ ಬಳಿಯ ರಸ್ತೆಯಲ್ಲೇ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಬಿಟಿಎಂ ಲೇಔಟ್‌ ಕ್ಷೇತ್ರದಲ್ಲೂ ದೇವಸ್ಥಾನ, ಮನೆ ಪೂಜೆಗೆಂದು ಮಹಿಳೆಯರನ್ನು ಕರೆಸಿ ಮೂಗುತಿ ಹಂಚಿದ್ದಾರೆ. ಮತದಾನ ದಿನ ಸೇರಿದಂತೆ ಚುನಾವಣೆ ಘೋಷಣೆಯಾದ ದಿನದಿಂದ ಮತದಾರರಿಗೆ ನಿಕ್ಕರ್‌, ಕುಕ್ಕರ್‌, ಸೀರೆ, ಮಾಂಸ, ಮೂಗುತಿ ಇತರೆ ಉಡುಗೊರೆ ಹಂಚಿದ್ದಾರೆ ಎಂದು ಆರೋಪ ಮಾಡಿದರು.

ಆಮಿಷ ಬಯಸುವವರಿಗೆ ಉಡುಗೊರೆ: ನಾನಾ ಪಕ್ಷಗಳು ಮತದಾರರಿಗೆ ಆಮಿಷ ಒಡ್ಡುತ್ತಿವೆ. ಕ್ಷೇತ್ರದಲ್ಲಿ ಆಮಿಷ ಬಯಸುವವರಿಗೆ ನಾವು ಹಣ, ಉಡುಗೊರೆ ನೀಡಲು ಅವಕಾಶಕ್ಕೆ ಆಯೋಗಕ್ಕೆ ಮನವಿ ಮಾಡಲಾಗಿದೆ. ದೇಶದಲ್ಲಿ ಚಲಾವಣೆಯಲ್ಲಿರುವ ಎಲ್ಲ ನೋಟು, ನಾಣ್ಯಗಳನ್ನು ಒಟ್ಟುಗೂಡಿಸಿದರೆ 2,888 ರೂ. ಆಗಲಿದ್ದು, ಅಷ್ಟು ನಗದು ನೀಡುವುದು. ಜತೆಗೆ ಕುಕ್ಕರ್‌, ನಿಕ್ಕರ್‌, ಸೀರೆ ನೀಡಲು ನಿರ್ಧರಿಸಲಾಗಿದೆ. ಇದಕ್ಕೆ ಅನುಮತಿ ಕೋರಿ ಕೇಂದ್ರ ಚುನಾವಣಾ ಆಯುಕ್ತರು, ರಾಜ್ಯ ಮುಖ್ಯ ಚುನಾವಣಾಧಿಕಾರಿ ಹಾಗೂ ಜಯನಗರ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಜೂ. 1ರ ಸಂಜೆವರೆಗೂ ಆಯೋಗದ ಪ್ರತಿಕ್ರಿಯೆ ನಿರೀಕ್ಷಿಸಲಾಗುವುದು. ಆಯೋಗ ಸ್ಪಂದಿಸದಿದ್ದರೆ ಜೂ. 2ರಂದು ಜಯನಗರ 4ನೇ ಬ್ಲಾಕ್‌ನಲ್ಲೇ ಆಮಿಷ ಬಯಸುವವರಿಗೆ ನಗದು, ಉಡುಗೊರೆ ನೀಡಲಾಗುವುದು. ಆಮಿಷ ಬಯಸದ ಪ್ರಜ್ಞಾವಂತ, ಬುದ್ದಿವಂತ ಮತದಾರರು ಚುನಾವಣಾ ಗುರುತಾಗಿರುವ ಸೀಟಿ ಊದಿ ಬೆಂಬಲಿಸಲಿ ಎಂದು ಮನವಿ ಮಾಡಿದರು.

Advertisement

ಗಣ್ಯರಿರುವ ಕ್ಷೇತ್ರ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಪಿ.ಜಿ.ಆರ್‌.ಸಿಂಧ್ಯಾ, ರಾಜ್ಯಸಭಾ ಮಾಜಿ ಉಪಸಭಾಪತಿ ಕೆ.ರೆಹಮಾನ್‌ ಖಾನ್‌, ಮಾಜಿ ಸಚಿವರಾದ ಅಂಬರೀಷ್‌, ಎನ್‌.ಚೆಲುವರಾಯಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಇತರರು ಕ್ಷೇತ್ರದಲ್ಲಿದ್ದಾರೆ.

ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮುಖ್ಯಮಂತ್ರಿಗಳು ಕ್ಷೇತ್ರದಲ್ಲಿ ಸಂಚರಿಸುವಾಗ ಸರ್ಕಾರಿ ವಾಹನ ಬಳಸಬಾರದು. ಹಾಗೆಯೇ ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಬೆಂಗಾವಲು ಪಡೆಯೊಂದಿಗೆ ಪ್ರಚಾರ ನಡೆಸುತ್ತಿದ್ದಾರೆ. ಕೆಲವೆಡೆ ರೌಡಿಗಳು ಒತ್ತಡ ಹೇರುತ್ತಿದ್ದು, ಮತದಾರರಲ್ಲಿ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ ಎಂದು ಹೇಳಿದರು.

ಸ್ವಯಂಸೇವಕರಿಂದ ಗಸ್ತು: ಚುನಾವಣಾ ಅಕ್ರಮ ತಡೆಗಟ್ಟಲು ಗಸ್ತು ತಿರುಗಲು 50 ಸ್ವಯಂ ಸೇವಕರನ್ನು ನೇಮಿಸಿಕೊಳ್ಳಲಾಗುವುದು. ಅವರು ಮತದಾನ ದಿನದ ಹಿಂದಿನ ಎರಡು ರಾತ್ರಿ ಹಾಗೂ ಒಂದು ದಿನ ಹಗಲು ಹೊತ್ತಿನಲ್ಲಿ ಗಸ್ತು ತಿರುಗಿ ಮತದಾರರಿಗೆ ಆಮಿಷ ಒಡ್ಡದಂತೆ ನಿಗಾ ವಹಿಸಲಿದ್ದಾರೆ. ನಾನು ಸಹ ಗಸ್ತು ತಿರುಗಲು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇನೆ ಎಂದು ರವಿಕೃಷ್ಣಾರೆಡ್ಡಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next