ಅಳ್ನಾವರ: ಪ್ರತಿಶತ 80 ಕರ ವಸೂಲಿ ಮತ್ತು ಪ್ರತಿ ಕುಟುಂಬಕ್ಕೆ ಶೌಚಾಲಯ ನಿರ್ಮಿಸಿದ ಸಾಧನೆಗೈದ ಬೆಣಚಿ ಗ್ರಾಮವು “ಗಾಂಧಿ ಗ್ರಾಮ’ ಪುರಸ್ಕಾರಕ್ಕೆ ಆಯ್ಕೆಗೊಂಡಿದೆ.
ಧಾರವಾಡದಿಂದ 30 ಕಿ.ಮೀ. ಅಂತದಲ್ಲಿರುವ ಬೆಣಚಿ ಗ್ರಾಪಂ ಈ ಹಿಂದೆ ಅರವಟಗಿ ಮಂಡಳ ಪಂಚಾಯತಿ ವ್ಯಾಪ್ತಿಗೆ ಒಳಪಟ್ಟಿತ್ತು. 1994ರಲ್ಲಿ ಸ್ವತಂತ್ರ ಗ್ರಾಪಂ ಆಗಿ ಅಸ್ತಿತ್ವಕ್ಕೆ ಬಂದಿದೆ. ಬೆಣಚಿ ಗ್ರಾಪಂ ಎರಡು ಕಂದಾಯ ಗ್ರಾಮಗಳು ಹಾಗೂ ಎರಡು ಬೆಚರಾಕ ಗ್ರಾಮಗಳನ್ನು ಒಳಗೊಂಡಿದ್ದು, 2011ರ ಜನಗಣತಿ ಪ್ರಕಾರ 3,509 ಜನಸಂಖ್ಯೆ ಹೊಂದಿದೆ.
ಈ ಗ್ರಾಮದಲ್ಲಿ ಸುಮಾರು 690 ಕುಟುಂಬಗಳು ವಾಸಿಸುತ್ತಿದ್ದು, ಹೆಚ್ಚು ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಪ್ರಾಥಮಿಕ ಹಂತದಿಂದ ಹತ್ತನೇಯ ತರಗತಿವರೆಗೆ ಶೈಕ್ಷಣಿಕ ಸೌಲಭ್ಯ ಒಳಗೊಂಡಿದ್ದು, ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಹೊಂದಿದೆ. ತೆರಿಗೆ ವಸೂಲಿಯಲ್ಲಿ ಮುಂಚೂಣಿಯಲ್ಲಿರುವ ಬೆಣಚಿ ಗ್ರಾಪಂ ಶೇ.80ಕ್ಕೂ ಅಧಿಕ ಪ್ರಮಾಣದಲ್ಲಿ ತೆರಿಗೆ ಸಂಗ್ರಹಣೆ ಮಾಡಿದ್ದು, ಪ್ರತಿ ಕುಟುಂಬ ಶೌಚಾಲಯ ಹೊಂದಿದೆ. ಬಯಲು ಶೌಚ ಮುಕ್ತ ಗ್ರಾಮವಾಗಿದ್ದು ವಿಶೇಷ. ಗ್ರಾಪಂ ಅಭಿವೃದ್ಧಿ ಅಧಿಕಾರಿ ಆನಂದ ಕೆಂಚಣ್ಣವರ, ಗ್ರಾಪಂ ಅಧ್ಯಕ್ಷೆ ಅಮೀನಾಬೇಗಂ ನದಾಫ್ ಅವರ ಮುಂದಾಳತ್ವದಲ್ಲಿ ಉಪಾಧ್ಯಕ್ಷ ಪ್ರಕಾಶ ಕುಣಕಿಕೊಪ್ಪ, ಸದಸ್ಯರಾದ , ಮಹಾದೇವ ಗೋದಗೇರಿಕರ, ರುಕ್ಮವ್ವ ದುಬ್ಬನಮರಡಿ, ರಹಿಮಾನಸಾಬ ದೊಡಮನಿ, ಸುವರ್ಣಾ ಬೈಲೂರ, ರೇಖಾ ಹರಿಜನ, ಜಗದೀಶ ಜಗತಾಪ ಮತ್ತು ಇತರೆ ಸಿಬ್ಬಂದಿಗಳ ಸಹಕಾರದಲ್ಲಿ ಗ್ರಾಮದ ಅಭಿವೃದ್ಧಿ ಸಾಧಿಸಿದ್ದಾರೆ.
ಇಂದು ಪ್ರಶಸ್ತಿ ಪ್ರದಾನ: ಉತ್ತಮ ಆಡಳಿತ, ಗ್ರಾಮಸ್ಥರ ಪಾಲ್ಗೊಳ್ಳುವಿಕೆ, ಮೂಲ ಸೌಕರ್ಯಗಳನ್ನು ಒದಗಿಸುವಿಕೆ, ಸರ್ಕಾರಿ ಯೋಜನೆಗಳ ಸದ್ಬಳಕೆ, ಆರ್ಥಿಕ ಸುಧಾರಣೆ ಎಲ್ಲವನ್ನು ಗಮನಿಸಿ ನೀಡಲಾಗುತ್ತಿರುವ “ಗಾಂಧಿ ಗ್ರಾಮ’ ಪುರಸ್ಕಾರಕ್ಕೆ ಬೆಣಚಿ ಗ್ರಾಪಂ ಪಾತ್ರವಾಗಿದೆ. ಅ.2ರಂದು ಬೆಂಗಳೂರಿನ ವಿಧಾನಸೌಧದಲ್ಲಿ ಬಾಂಕ್ವೆಟ್ ಹಾಲ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿ ವಿತರಿಸಲಾಗುತ್ತದೆ. ಗ್ರಾಮ ಪಿಡಿಒ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಸದಸ್ಯರು ಮತ್ತು ಸಿಬ್ಬಂದಿಯವರ ಸಹಕಾರದಲ್ಲಿ ಸ್ವತ್ಛತೆ ನೈರ್ಮಲೀಕರಣ ಜೊತೆಗೆ ಕರ ವಸೂಲಿಯಲ್ಲಿ ಉತ್ತಮ ಪ್ರಗತಿಸಾಧಿಸಲು ಸಾಧ್ಯವಾಗಿದೆ. ಗಾಂಧಿಗ್ರಾಮ ಪುರಸ್ಕಾರ ಪಡೆಯುವುದು ಹೆಮ್ಮೆಯ ಸಂಗತಿ.
–ಆನಂದ ಕೆಂಚನ್ನವರ, ಬೆಣಚಿ ಪಿಡಿಒ