Advertisement

ಬೆಳುವಾಯಿ ಗ್ರಾಮ ಪಂಚಾಯತ್ ಗೆ ಎರಡನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ

07:12 PM Oct 01, 2020 | sudhir |

ಮೂಡುಬಿದಿರೆ: ತಾಲೂಕಿನ ಬೆಳುವಾಯಿ ಗ್ರಾ.ಪಂ. ಈ ಕಳೆದ 5 ವರ್ಷಗಳಲ್ಲಿ ಇದೀಗ 2ನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ. 843 ಹೆಕ್ಟೇರ್‌ ಅರಣ್ಯ ಪ್ರದೇಶ ಸಹಿತ 2569.53 ಹೆಕ್ಕೇರ್‌ ವಿಸ್ತೀರ್ಣ ಹೊಂದಿರುವ, ಕೃಷಿ ಪ್ರಧಾನವಾದ ಈ ಪಂ. ವ್ಯಾಪ್ತಿಯಲ್ಲಿ 10,220 (5042 ಪುರುಷರು, 1243 ಮಹಿಳೆಯರು) ಜನರು ವಾಸವಾಗಿದ್ದಾರೆ. 864 ಎಪಿಎಲ್‌, 1,668 ಬಿಪಿಎಲ್‌ ಕುಟುಂಬಗಳಿವೆ.

Advertisement

ವಿಶೇಷ ಸಾಧನೆಗಳು
2019-20ರ ಸಾಲಿನಲ್ಲಿ ಶೇ. 91ರಷ್ಟು ತೆರಿಗೆ ಸಂಗ್ರಹವಾಗಿದ್ದು ಹಳೆಯ ಬಾಕಿ ಎಲ್ಲವೂ ವಸೂಲಾಗಿದೆ. ಪ.ಜಾ./ಪ.ಪಂ., ಕ್ರೀಡೆ, ಅಂಗವಿಕಲರಿಗೆ ಸಂಬಂಧಿತ ಅನುದಾನ ಶೇ. 100 ವಿನಿಯೋಗವಾಗಿದೆ. ಕ್ರಿಯಾಯೋಜನೆಯ ಪೂರ್ಣ ಅಳವಡಿಕೆ, 14ನೇ ಹಣಕಾಸು ಯೋಜನೆಯಡಿ 100 ಶೇ. ನಿಧಿ ಬಳಕೆಯಾಗಿದೆ. ನರೇಗಾದಡಿ 12 ಕೃಷಿ ಬಾವಿಗಳ ನಿರ್ಮಾಣವಾಗಿವೆ. ಅಪೇಕ್ಷಿತರಿಗೆ 15ದಿನಗಳ ಒಳಗಾಗಿ ಉದ್ಯೋಗ ನೀಡಲಾಗಿದೆ.

ಮನೆಗಳಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆ ಆಗುತ್ತಿದೆ. ನೀರು ಪೂರೈಕೆಯ ಪಂಪ್‌ಗ್ಳಿಗೆ ಅಳವಡಿಸಲಾದ ಮೀಟರ್‌ಗಳನ್ನು ಪರಿಶೀಲಿಸುತ್ತ ಮೆಸ್ಕಾಂ ನೀಡುವ ಬಿಲ್‌ಗ‌ಳೊಂದಿಗೆ ಹೋಲಿಸಿ ನೋಡಿದಾಗ ಹೆಚ್ಚುವರಿಯಾಗಿ ಮೆಸ್ಕಾಂಗೆ ಪಾವತಿಸಲಾದ ಸುಮಾರು ರೂ. 6 ಲಕ್ಷವನ್ನು ವಾಪಾಸ್‌ ಪಡೆದು ಸಂಪನ್ಮೂಲ ಸೋರಿಕೆ ತಡೆಗಟ್ಟಲಾಗಿದೆ.

ಮಾದರಿಯಾಗಿ ಶ್ಮಶಾನ ಅಭಿವೃದ್ಧಿ, ಮಕ್ಕಳ ಪೋಷಣೆ ಅಭಿಯಾನ , ಬೀದಿ ದೀಪಗಳಿಗೆ ಸೋಲಾರ್‌ ಶಕ್ತಿಗೆ ಆದ್ಯತೆ, ಎಲ್‌ಇಡಿ ಬಲ್ಬ್ಗಳ ಬಳಕೆ, ಬಯಲು ಶೌಚಾಲಯ ಮುಕ್ತ ಗ್ರಾಮವಾಗಿ ಶೇ.100 ಸಾಧನೆ ತೋರಿದೆ.

Advertisement

ಸಕಾಲ ಸೇವೆ, ತಂತ್ರಾಂಶ ಬಳಕೆ
ಬಾಪೂಜಿ ಸೇವಾ ಕೇಂದ್ರದ ಮೂಲಕ 66 ಸಕಾಲ ಸೇವೆಗಳನ್ನು ನಿಗದಿತ ಕಾಲಮಿತಿಯಲ್ಲಿ ನಿರ್ವಹಿಸಲಾಗುತ್ತಿದೆ. “ಪ್ಲಾನ್‌ಪ್ಲಸ್‌ ತಂತ್ರಾಂಶ’ದಲ್ಲಿ ಎಲ್ಲ ಕ್ರಿಯಾಯೋಜನೆಗಳು, “ಗಾಂಧೀ ಸಾಕ್ಷಿ ಕಾಯಕ’ ತಂತ್ರಾಂಶದ ಮೂಲಕವೇ ಎಲ್ಲ ಪಾವತಿಗಳು, “ಪಂಚತಂತ್ರ ತಂತ್ರಾಂಶ’ದಲ್ಲಿ ಪಂ. ಆಸ್ತಿ, ಕಟ್ಟಡಗಳ ವಿವರ, ನಡೆಸಲಾಗಿರುವ 14 ವಾರ್ಡ್‌ ಸಭೆಗಳು, ವಾರ್ಷಿಕ 2 ಗ್ರಾಮ ಸಭೆಗಳ ವಿವರಗಳನ್ನು , ಪಂಚಾಯತ್‌ನ ಎಲ್ಲ ಹಣಕಾಸು ಸ್ವೀಕೃತಿ, ಪಾವತಿಗಳನ್ನು ಅಳವಡಿಸುವ ಮೂಲಕ ಪಾರದರ್ಶಕತೆ ತೋರಲಾಗಿದೆ.

14ನೇ ಹಣಕಾಸು ಅನುದಾನದ ಎಲ್ಲ ವೆಚ್ಚಗಳನ್ನು ಕೇಂದ್ರ ಸರಕಾರದ “ಪ್ರಿಯಾ ಸೋಫ್ಟ್‌ ‘ ಮೂಲಕವೇ ನಿರ್ವಹಿಸಲಾಗಿದೆ.
ಕಚೇರಿಯಲ್ಲಿ 8 ಸಿಸಿಟಿವಿ ಅಳವಡಿಸಲಾಗಿದ್ದು ದತ್ತಾಂಶಗಳನ್ನು ಸಂರಕ್ಷಿಸಲಾಗಿದೆ. ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಭೀಮ ನಾಯಕ್‌ ಬಿ. ಸಹಿತ 6 ಮಂದಿ ಸಿಬಂದಿಗಳಿದ್ದಾರೆ. ಸಿಬಂದಿಗಳು ಬಯೋಮೆಟ್ರಿಕ್‌ ಹಾಜರಾತಿ ಪಾಲಿಸುತ್ತಿದ್ದಾರೆ. ಸಿಬಂದಿಯ ಕನಿಷ್ಟ ವೇತನ, ಭತ್ತೆ ಪಾವತಿ ಮಾಡಲಾಗುತ್ತಿದೆ.

ಸರ್ವರ ಸಹಕಾರದಿಂದ ಪ್ರಶಸ್ತಿ
ಐದು ವರ್ಷಗಳಲ್ಲಿ ಜನಪರ ಆಡಳಿತ ನೀಡಿದ್ದು ಜನರು, ಸದಸ್ಯರು, ಪಿಡಿಒ , ಸಿಬಂದಿಯ ಒಟ್ಟು ಸಹಕಾರದಿಂದ ನಮ್ಮ ಪಂಚಾಯತ್‌ಗೆ ಎರಡನೇ ಬಾರಿಗೆ ಗಾಂಧೀ ಗ್ರಾಮ ಪುರಸ್ಕಾರ ಲಭಿಸಿರುವುದು ಸಂತಸಕರ ವಿಚಾರವಾಗಿದ್ದು ಎಲ್ಲರಿಗೂ ವಂದನೆಗಳು.
– ಸೋಮನಾಥ ಕೋಟ್ಯಾನ್‌ (ನಿಕಟಪೂರ್ವ ಅಧ್ಯಕ್ಷರು)

Advertisement

Udayavani is now on Telegram. Click here to join our channel and stay updated with the latest news.

Next