ಮಂಡ್ಯ: ಮಹಾತ್ಮ ಗಾಂಧೀಜಿ ಅವರ ಶಾಂತಿ ಹಾಗೂ ಅಹಿಂಸಾ ಮಾರ್ಗ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಅದರಂತೆ ಲಾಲ್‌ಬಹದ್ದೂರ್ ಶಾಸ್ತ್ರಿ ಅವರ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ . ವೆಂಕಟೇಶ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ ಹಾಗೂ ನೆಹರು ಯುವ ಕೇಂದ್ರ, ವಾರ್ತಾ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯಲ್ಲಿ ಮಾತನಾಡಿ, ಗಾಂಧೀಜಿ ಭಾರತ ದೇಶ ಕಂಡ ಅಪ್ರತಿಮ ಹೋರಾಟಗಾರರು, ಆಧ್ಯಾತ್ಮಿಕ ಚಿಂತಕರು, ಸಮಾಜ ಸುಧಾರಕರು, ಇಡೀ ವಿಶ್ವಕ್ಕೆ ಶಾಂತಿ ಮತ್ತು ಅಹಿಂಸೆಮಂತ್ರ ಹೇಳಿಕೊಟ್ಟ ಮಹಾನ್ ವ್ಯಕ್ತಿಯಾಗಿದ್ದಾರೆ. ಮಹಾತ್ಮ ಗಾಂಧೀಜಿ ಅವರು ಬಾಲ್ಯದಿಂದಲೇ ಶ್ರವಣ ಕುಮಾರರಿಂದ ಪ್ರೇರಿತರಾಗಿ ಭಾರತದ ಸಂಸ್ಕೃತಿ, ಸನಾತನ ಧರ್ಮದಲ್ಲಿರುವ ಗುರು-ಹಿರಿಯರು, ಮಾತೃ-ಪಿತೃವಿನ ಬಗ್ಗೆ ಅಪಾರ ಗೌರವ ಪಡೆದರು. ಸತ್ಯ ಹರಿಶ್ಚಂದ್ರರ ಆದರ್ಶಗಳನ್ನು ಪಾಲಿಸಿ ಮುಂದಿನ ಪೀಳಿಗೆಗೆ ಅತ್ಯಂತ ಪ್ರೇರೇಪಣೆ ನೀಡಿದ್ದಾರೆ ಎಂದರು.
ವಿಶ್ವದ ಗಮನ ಸೆಳೆದ ಗಾಂಧಿ: ಲಂಡನ್‌ನಲ್ಲಿ ಬ್ಯಾರಿ ಸ್ಟಾರ್ ಪದವಿ ಪಡೆದು ವಿಶ್ವದಲ್ಲಿ ನಡೆಯುತ್ತಿದ್ದ ಅಸ ಮಾನತೆ, ಜನಾಂಗೀಯ ಘರ್ಷಣೆ ಮತ್ತು ಗುಲಾಮ ಗಿರಿ ವಿರುದ್ಧ ದಕ್ಷಿಣ ಆಫ್ರಿಕಾದಲ್ಲಿ ಚಳವಳಿ ಆರಂಭಿ ಸುವ ಮೂಲಕ ವಿಶ್ವದ ಗಮನ ಸೆಳೆದರು. ನಂತರ ಭಾರತದಲ್ಲಿದ್ದ ಅಸಮಾನತೆ, ಸಂಘರ್ಷ ಮತ್ತು ಶೋಷಣೆ ವಿರುದ್ಧ ಪ್ರತಿ ಹಂತದಲ್ಲೂ ಇಡೀ ಸಮಾಜದ ದೃಷ್ಟಿಕೋನವಿಟ್ಟುಕೊಂಡು ಇಡೀ ಸಮಾಜ ಚಳವಳಿಯಲ್ಲಿ ಭಾಗವಹಿಸುವಂತೆ ಮಾಡಿ ಅಹಿಂಸೆ ಯಿಂದ, ಸತ್ಯಾಗ್ರಹದ ಮೂಲಕ ಬ್ರಿಟೀಷರ ದಾಸ್ಯ ದಿಂದ ಬಿಡಿಸಿ ಸ್ವಾತಂತ್ರ್ಯ ತಂದುಕೊಟ್ಟರು ಎಂದರು.
ರೈತರು-ಯೋಧರಿಗೆ ಗೌರವ: ಭಾರತ ದೇಶ ಕಂಡ ಪ್ರಧಾನಮಂತ್ರಿಗಳಲ್ಲಿ ಲಾಲ್‌ಬಹುದ್ದೂರ್ ಶಾಸ್ತ್ರಿ ಅವರು ಪ್ರಮುಖರಾಗಿದ್ದಾರೆ. ದೇಶದಲ್ಲಿ ರೈತರು ಹಾಗೂ ಯೋಧರಿಗೆ ವಿಶೇಷ ಗೌರವ ಕಲ್ಪಿಸಿದವರು. ಭಾರತದಲ್ಲಿ ಕಾಡುತ್ತಿದ್ದ ಬಡತನ, ಹಸಿವು ನಿವಾರಿಸುವಲ್ಲಿ ದಿಟ್ಟ ಕ್ರಮಗಳನ್ನು ಕೈಗೊಂಡರು. ಹಾಲಿನ ಉತ್ಪಾದನೆಗೆ ಹೆಚ್ಚು ಆದ್ಯತೆ ನೀಡುವ ಮೂಲಕ ನ್ಯಾಷನಲ್ ಡೈರಿ ಡೆವಲಪ್‌ಮೆಂಟ್ ಬೋರ್ಡ್ ಸ್ಥಾಪನೆ ಮಾಡಿ, ಅಮುಲ್ ಕೋ-ಅಪರೇಟಿವ್ ಸೊಸೈಟಿ ಸ್ಥಾಪಿಸುವಲ್ಲಿ ಪ್ರಮುಖ ಕಾರಣರಾಗಿದ್ದಾರೆ. ಹೈನುಗಾರಿಕೆಗೆ ಹೆಚ್ಚು ಒತ್ತನ್ನು ಕೊಟ್ಟು ದೇಶದಲ್ಲಿ ಜೈಜವಾನ್ ಜೈಕಿಸಾನ್ ಎಂಬ ಘೋಷಣೆ ಮೂಲಕ ರೈತರು ಮತ್ತು ಯೋಧರ ವಿಶೇಷತೆಯ ಬಗ್ಗೆ ಜಾಗೃತಿ ಮೂಡಿಸಿದ್ದಾರೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಪ್ರತಿಜ್ಞಾವಿಧಿ ಬೋಧಿಸಿದರು. ಅಪರ ಜಿಲ್ಲಾಧಿಕಾರಿ ಶೈಲಜಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಪಿ. ಮಂಚೇಗೌಡ,ವಾರ್ತಾಧಿಕಾರಿಟಿ.ಕೆ.ಹರೀಶ್,ಅನನ್ಯ ಸಂಸ್ಥೆಯ ಅಧ್ಯಕ್ಷೆ ಅನುಪಮ, ನಗರಸಭೆ ಸದಸ್ಯ ಶ್ರೀಧರ್, ಧರ್ಮ ಗುರುಗಳಾದ ಪದ್ಮನಾಭ, ಅನೀಶ್ ಜೋಸೆಫ್, ತನ್ವೀರ್ ಮಾಸ್ಟರ್ ಹಾಜರಿದ್ದರು.