Advertisement

ಗಾಂಧಿ ಜಯಂತಿಗೆ 50 ಕ್ಯಾಂಟೀನ್‌

11:42 AM Sep 27, 2017 | |

ಬೆಂಗಳೂರು: ಯಾವೊಬ್ಬ ಬಡವರೂ ಹಸಿವಿನಿಂದ ಕೊರಗಬಾರದು ಎಂಬುದೇ ನಮ್ಮ ಸರ್ಕಾರದ ಕಾಳಜಿ. ಹಾಗಾಗಿ ಬಿಬಿಎಂಪಿಯ ಎಲ್ಲ 198 ವಾರ್ಡ್‌ಗಳಲ್ಲಿ ಈ ವರ್ಷದ ನವೆಂಬರ್‌ ವೇಳೆಗೆ ಇಂದಿರಾ ಕ್ಯಾಂಟೀನ್‌ ಸೇವೆ ಲಭ್ಯವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಮಹಾಲಕ್ಷ್ಮೀ ಲೇಔಟ್‌ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಕುರುಬರಹಳ್ಳಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಂಕರಮಠ ವಾರ್ಡ್‌ನ ಹಾಗೂ ಇನ್ನಿತರ ವಾರ್ಡ್‌ಗಳಲ್ಲಿ ಕೈಗೆತ್ತಿಕೊಳ್ಳಲಾದ 19.71 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ಹಾಗೂ ಚಾಲ್ತಿಯಲ್ಲಿರುವ 149.50 ಕೋಟಿ ರೂ. ಮೊತ್ತದ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಈಗಾಗಲೇ 101 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌ ಸೇವೆ ಲಭ್ಯವಾಗುತ್ತಿದೆ. ಅ.2ರಂದು ಗಾಂಧಿ ಜಯಂತಿ ದಿನ ಇನ್ನೂ 50 ಹಾಗೂ ನ.1ರ ರಾಜ್ಯೋತ್ಸವ ದಿನ ಉಳಿದ ಬಾಕಿ 47 ವಾರ್ಡ್‌ಗಳಲ್ಲಿ ಕ್ಯಾಂಟೀನ್‌ಗಳನ್ನು ತೆರೆಯಲಾಗುವುದು. ಈ ಮೂಲಕ ಇನ್ನೊಂದು ತಿಂಗಳ ಅವಧಿಯಲ್ಲಿ ಬಿಬಿಎಂಪಿಯ ಎಲ್ಲ 198 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌ ಸೇವೆ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದರು.

ಬಾಡಿಗೆ ಕಟ್ಟಡದಲ್ಲಿ ಕ್ಯಾಂಟೀನ್‌: “ಸರ್ಕಾರಿ ಜಾಗ ಲಭ್ಯವಿಲ್ಲದ ಕಡೆ ಕಟ್ಟಡಗಳನ್ನು ಬಾಡಿಗೆಗೆ ಪಡೆದುಕೊಂಡು ಇಂದಿರಾ ಕ್ಯಾಂಟೀನ್‌ ಆರಂಭಿಸಿದರೆ, ಬಾಡಿಗೆ ಹಣ ಸರ್ಕಾರ ಕೊಡಲಿದೆ. ಅಲ್ಲದೇ ರೋಗಿಗಳು ಮತ್ತು ಅವರೊಂದಿಗೆ ಬರುವ ಕುಟುಂಬದವರಿಗೆ ಅನುಕೂಲವಾಗಲು ವಿಕ್ಟೋರಿಯಾ, ಬೌರಿಂಗ್‌ ಹಾಗೂ ಕೆ.ಸಿ. ಜನರಲ್‌ ಸೇರಿದಂತೆ ಇತರ ಆಸ್ಪತ್ರೆಗಳಲ್ಲೂ ಇಂದಿರಾ ಕ್ಯಾಂಟೀನ್‌ ತೆರೆಯಲಾಗುವುದು. ಇದರ ಜೊತೆಗೆ ಪ್ರತಿ ಜಿಲ್ಲಾ ಕೇಂದ್ರ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲೂ ಇಂದಿರಾ ಕ್ಯಾಂಟೀನ್‌ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು,’ ಎಂದು ಸಿಎಂ ತಿಳಿಸಿದರು.

ಹಳ್ಳಿಗಳಿಗೆ ನೀರು: “ಬೆಂಗಳೂರು ನಗರ ಪ್ರಪಂಚದ ಡೈನಾಮಿಕ್‌ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹೆಗ್ಗಳಿಕೆ ಉಳಿಸಿಕೊಳ್ಳುವ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡಲಿದೆ. ಬಿಬಿಎಂಪಿಗೆ ಹೊಸದಾಗಿ ಸೇರಿದ 110 ಹಳ್ಳಿಗಳಿಗೆ ಕುಡಿಯುವ ನೀರು, ಒಳಚರಂಡಿ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಪೌರಕಾರ್ಮಿಕರಿಗೆ ವೇತನ ಹೆಚ್ಚಿಸಿ, ಅದನ್ನು ನೇರವಾಗಿ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗುತ್ತಿದೆ.

Advertisement

ಕೊಳಗೇರಿ ನಿವಾಸಿಗಳ ನೀರಿನ ಬಾಕಿ ಬಿಲ್‌ ಮನ್ನಾ ಮಾಡಲಾಗಿದೆ. ಪ್ರತಿ ತಿಂಗಳು ಒಂದು ಕುಟುಂಬಕ್ಕೆ 10 ಸಾವಿರ ಲೀಟರ್‌ ಕುಡಿಯುವ ನೀರು ಉಚಿತವಾಗಿ ಒದಗಿಸಲಾಗುತ್ತಿದೆ. ರಾಜಕಾಲುವೆ ಒತ್ತುವರಿ ಆಗಿರುವುದರಿಂದ ಮಳೆ ಬಂದಾಗ ನಗರದಲ್ಲಿ ಸಮಸ್ಯೆ ಆಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ. ವೈಟ್‌ ಟ್ಯಾಪಿಂಗ್‌ ರಸ್ತೆಗಳನ್ನು ಅಭಿವೃದ್ಧಿಸಲಾಗುವುದು,’ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್‌. ಎಂ.ಆರ್‌. ಸೀತಾರಾಂ, ಎಚ್‌.ಎಂ. ರೇವಣ್ಣ, ಮೇಯರ್‌ ಜಿ. ಪದ್ಮಾವತಿ, ಶಾಸಕರಾದ ಕೆ. ಗೋಪಾಲಯ್ಯ, ಮುನಿರತ್ನ, ಶಂಕರಮಠ ವಾರ್ಡ್‌ ಸದಸ್ಯ ಎಂ. ಶಿವರಾಜು, ಪಾಲಿಕೆ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ಮತ್ತಿತರರು ಇದ್ದರು. 

ಬಿಜೆಪಿಯಿಂದ ಅಭಿವೃದ್ಧಿ ಆಗಿಲ್ಲ: ಸಮಾರಂಭದಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ಅಭಿವೃದ್ಧಿ ಬಗ್ಗೆ ಬಿಜೆಪಿ ಮಾತನಾಡಿದರೆ, ಅದು ಭೂತದ ಬಾಯಲ್ಲಿ ಭಗವದ್ಗೀತೆ ಆಗುತ್ತದೆ. ಐದು ವರ್ಷ ಪಾಲಿಕೆಯಲ್ಲಿ ಆಡಳಿತ ನಡೆಸಿದ ಬಿಜೆಪಿ ಯಾವುದೇ ಅಭಿವೃದ್ಧಿಯನ್ನು ಮಾಡಿಲ್ಲ. ಬದಲಾಗಿ ಬಿಬಿಎಂಪಿಯ ಆಸ್ತಿಗಳನ್ನು ಅಡ ಇಟ್ಟಿದ್ದರು. ಅಲ್ಲದೇ 8 ಸಾವಿರ ಕೋಟಿ ರೂ. ಗುತ್ತಿಗೆದಾರರ ಬಿಲ್‌ ಬಾಕಿ ಉಳಿಸಿದ್ದರು.

ಅದನ್ನು ನಮ್ಮ ಸರ್ಕಾರ ಬಂದ ಮೇಲೆ ಪಾವತಿಸುತ್ತಿದ್ದೇವೆ. ಬಿಬಿಎಂಪಿಗೆ ಸರ್ಕಾರದಿಂದ 7,300 ಕೋಟಿ ರೂ. ಅನುದಾನ ಕೊಟ್ಟಿದ್ದೇವೆ. ಸಾವಿರ ಕೋಟಿ ವೆಚ್ಚದಲ್ಲಿ ರಾಜಕಾಲುವೆ ಒತ್ತುವರಿ ತೆರವು ಮಾಡುತ್ತಿದ್ದೇವೆ. ಆದರೆ, ಬಿಜೆಪಿಯವರು ಅಭಿವೃದ್ಧಿ ಮಾಡುವುದಿಲ್ಲ, ಒಳ್ಳೆಯ ಕೆಲಸ ಮಾಡಲು ಬಿಡುವುದೂ ಇಲ್ಲ ಎಂದು ವಾಗ್ಧಾಳಿ ನಡೆಸಿದರು. 

ಮಾಡಬಾರದ್ದನ್ನು ಮಾಡಿ ಜೈಲಿಗೆ ಹೋಗಿ ಬಂದವರು, ಈಗ ಬಾಯಿಗೆ ಬಂದ ಸುಳ್ಳುಗಳನ್ನು ಹೇಳಿಕೊಂಡು ಮುಂದಿನ ಬಾರಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿ ರಾಜ್ಯ ಸುತ್ತಾಡುತ್ತಿದ್ದಾರೆ. ಆದರೆ, ಅದು ಸಾಧ್ಯವಿಲ್ಲ. ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೆ ಬರುತ್ತೇವೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ 

ಸಿಎಂ ಹೆಚ್ಚು ಅನುದಾನ ನೀಡಿದ್ದರೂ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಲು ಸ್ಥಳೀಯ ಬಿಜೆಪಿ ಮುಖಂಡರು ಬಿಡುತ್ತಿಲ್ಲ. ಪಕ್ಷಾತೀತವಾಗಿ ಕೆಲಸ ಮಾಡಲು ಬಿಜೆಪಿಯವರು ಅಡ್ಡಿಯಾಗಿದ್ದಾರೆ. ಬಿಜೆಪಿಯವರು ರಾಜ್ಯ, ಪಾಲಿಕೆ ಆಡಳಿತ ನಡೆಸಿದಾಗ ಅಭಿವೃದ್ಧಿ ಕೆಲಸ ಮಾಡಿಲ್ಲ. ಈಗ ಅಭಿವೃದ್ಧಿ ಕೆಲಸ ಮಾಡಲು ಬಿಡುತ್ತಿಲ್ಲ.
ಕೆ.ಗೋಪಾಲಯ್ಯ, ಮಹಾಲಕ್ಷ್ಮೀಲೇಔಟ್‌ ಜೆಡಿಎಸ್‌ ಶಾಸಕ

ಮುಖ್ಯಮಂತ್ರಿಯವರು ಪಾಲಿಕೆಗೆ ಅನುದಾನ ನೀಡುವಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ನಗರೋತ್ಥಾನ ಯೋಫ‌ಜನೆಯಡಿ ಸಾಕಷ್ಟು ಅನುದಾನ ಕೊಟ್ಟಿದ್ದಾರೆ. ಅದಕ್ಕೆ ತಕ್ಕಂತೆ ಅಭಿವೃದ್ಧಿ ಕೆಲಸಗಳೂ ಆಗುತ್ತಿವೆ. ಮುಂದಿನ ಬಾರಿ ನಗರದ ಜನ ಕಾಂಗ್ರೆಸ್‌ಗೆ ಆಶಿರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ.
-ಜಿ. ಪದ್ಮಾವತಿ, ಮೇಯರ್‌

ವಾರ್ಡ್‌ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಾಗಿದೆ. ಎಂ.ವಿ.ನಗರದ 258 ಮನೆಗಳಿಗೆ ಹಕ್ಕುಪತ್ರ ನೀಡುವಂತೆ ಸಿಎಂಗೆ ಮನವಿ ಮಾಡಲಾಗಿದೆ. 60 ಲಕ್ಷ ವೆಚ್ಚದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ನಡೆದಿದೆ. ಪೌರ ಕಾರ್ಮಿಕರ ಶ್ರಮ ವಿಹಾರ ಕೇಂದ್ರ ಉದ್ಘಾಟಿಸಿಲಾಗಿದೆ.
-ಎಂ. ಶಿವರಾಜು, ಶಂಕರಮಠ ವಾರ್ಡ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next