ಹುಣಸೂರು: ನಗರದ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗಾಂಧಿಜಯಂತಿ ಅಂಗವಾಗಿ ವಿವಿಧ ಧರ್ಮಗಳ ಗ್ರಂಥ ಪಠಣ, ಭಜನೆ ನಡೆಸುವ ಮೂಲಕ ಹಾಗೂ ಸ್ವತ್ಛತಾ ಕಾರ್ಮಿಕರಿಗೆ ಸನ್ಮಾನಿಸುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.
ಕಾಲೇಜಿನ ಆವರಣದಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಗಾಂಧೀಜಿಯವರ ಆಶಯದಂತೆ ವಿದ್ಯಾರ್ಥಿನಿಯರಾದ ರಕ್ಷಿತಾ ಭಗವತ್‌ಗೀತೆ, ಸಾರಾಲತೀಶ್ ಬೈಬಲ್ ಹಾಗೂ ಮುಜಾಬಿಲ್ಲಾ ಕುರಾನ್ ಸೇರಿದಂತೆ ಸರ್ವಧರ್ಮ ಗ್ರಂಥ ಪಠಿಸುವ ಹಾಗೂ ಗಾಂಧೀಜಿಯವರ ಆಸಕ್ತಿಯ ಭಜನೆಯನ್ನು ಭಜಿಸುವ ಮೂಲಕ ಗಾಂಧೀಜಿಯವರ ಆಶಯವನ್ನು ಸಾಕಾರಗೊಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಎಲ್ಲ ಉಪನ್ಯಾಸಕರು, ವಿದ್ಯಾರ್ಥಿನಿಯರು ಕಾಲೇಜಿನ ಇಡೀ ಆವರಣದಲ್ಲಿ ಶ್ರಮದಾನದ ಮೂಲಕ ಸ್ವತ್ಛಗೊಳಿಸಿದರು. ನಂತರ ನಡೆದ ಸಮಾರಂಭದಲ್ಲಿ ಪ್ರಾಚಾರ್ಯ ಚೆಲುವಯ್ಯ, ಉಪನ್ಯಾಸಕರಾದ ಯೋಗಣ್ಣ, ಎನ್.ಎಸ್.ಎಸ್.ಸಂಯೋಜಕ ದೇವರ ಬಯ್ಯಣ್ಣ, ವಿದ್ಯಾರ್ಥಿನಿ ಮೈನಾಶ್ರೀ ಮಹಾತ್ಮಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ ಬಾಲ್ಯ,ಜೀವನ, ಹೋರಾಟದ ಬದುಕು ಹಾಗೂ ಐಕ್ಯತೆ, ಭಾವೈಕ್ಯತೆಯ ಸಂದೇಶದ ಕುರಿತು ಸಮಗ್ರ ಮಾಹಿತಿ ನೀಡುವ ಮೂಲಕ ನಮನ ಸಲ್ಲಿಸಿದರು.
ಸನ್ಮಾನ: ಸಮಾರಂಭದಲ್ಲಿ ಕಾಲೇಜಿನ ನಿತ್ಯದ ಸ್ವತ್ಛತಾ ಪೌರಕಾರ್ಮಿಕ ಕಪನಯ್ಯ ಹಾಗೂ ಜಯಮಾಲರನ್ನು ಪ್ರಾಚಾರ್ಯ ಚೆಲುವಯ್ಯ ಸೇರಿದಂತೆ ಉಪನ್ಯಾಸಕ ವೃಂದ ಸನ್ಮಾನಿಸಿ, ಅವರ ಸಾರ್ಥಕ ಸೇವೆಯನ್ನು ಸ್ಮರಿಸಿ ಅರ್ಥಪೂರ್ಣಗೊಳಿಸಿದರು.
ಉಪನ್ಯಾಸಕರಾದ ಡಾ.ಚಿದಾನಂದಮೂರ್ತಿ, ವಾಸು, ಕೃಷ್ಣಪ್ಪ ಇತರರು ಭಾಗವಹಿಸಿದ್ದರು.