Advertisement

ಶುದ್ಧ ಕುಡಿಯುವ ನೀರು ಪೂರೈಕೆಗೆ “ಜಲಧಾರೆ’ಯೋಜನೆ

11:30 AM Oct 03, 2018 | |

ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಅಂದಾಜು 60-70 ಸಾವಿರ ಕೋ.ರೂ. ಮೊತ್ತದ “ಜಲಧಾರೆ’ ಯೋಜನೆಗೆ ಶೀಘ್ರದಲ್ಲಿಯೇ “ಸಮಗ್ರ ಯೋಜನಾ ವರದಿ’ (ಡಿಪಿಆರ್‌) ಸಿದ್ಧಪಡಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

Advertisement

 ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆಯ ಅಂಗವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ವತಿಯಿಂದ ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 2017-18ನೇ ಸಾಲಿನ “ಗಾಂಧಿ ಗ್ರಾಮ ಪುರಸ್ಕಾರ’ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರಿಗೆ ಶುದ್ಧ ಹಾಗೂ ಗುಣಾತ್ಮಕ ಕುಡಿಯುವ ನೀರು ಸಮರ್ಪಕ ಪ್ರಮಾಣದಲ್ಲಿ ಸಿಗಬೇಕು ಎನ್ನುವುದು ಸರಕಾರದ ಆಶಯ. ಅದರಂತೆ ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ 85 ಎಲ್‌ಪಿಸಿಡಿ ಕುಡಿಯುವ ನೀರನ್ನು ಒದಗಿಸಲು ಬಜೆಟ್‌ನಲ್ಲಿ “ಜಲಧಾರೆ’ ಯೋಜನೆ ಘೋಷಿಸಲಾಗಿದೆ ಎಂದು ತಿಳಿಸಿದರು.

ಅಧಿಕಾರ ವಿಕೇಂದ್ರೀಕರಣದ ವಿಚಾರದಲ್ಲಿ ಗ್ರಾಮ ಪಂಚಾಯತ್‌ಗಳಿಗಿರುವ ಅಧಿಕಾರ ಮತ್ತು ಅನುದಾನವನ್ನು ಸಮರ್ಥವಾಗಿ ಬಳಸಿಕೊಂಡು ಪ್ರಾಮಾಣಿಕತೆಯಿಂದ ಕೆಲಸ ಮಾಡಿ. ಪಂಚಾಯತ್‌ ಮಟ್ಟದಲ್ಲಿ ಸ್ವತ್ಛತೆಗೆ ಆದ್ಯತೆ ಕೊಡಿ. ಪರಿಸರದ ಬಗ್ಗೆ ಕಾಳಜಿ ವಹಿಸಿ. ಕೆರೆಗಳ ಒತ್ತುವರಿ ತಡೆದು ಅವುಗಳ ಹೂಳು ತೆಗೆದು ನೀರಿನ ಸಂಗ್ರಹಕ್ಕೆ ಒತ್ತು ಕೊಡಿ ಎಂದು ಮುಖ್ಯಮಂತ್ರಿಯವರು ಇದೇ ವೇಳೆ ಗ್ರಾ.ಪಂ. ಅಧ್ಯಕ್ಷರು, ಪಿಡಿಒಗಳಿಗೆ ಸಲಹೆ ನೀಡಿದರು.
ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ಸ್ವರಾಜ್ಯದ ಕನಸು ನನಸಾಗಬೇಕು ಎಂದರೆ ಜನರ ಕೈಗೆ ಅಧಿಕಾರ ಕೊಡಬೇಕು ಎನ್ನುವುದು ಗಾಂಧೀಜಿ ಕನಸಾಗಿತ್ತು. ಈ ದಿಕ್ಕಿನಲ್ಲಿ ರಾಜ್ಯ ಸರಕಾರದ ಪ್ರಯತ್ನ ಸಾಗಿದೆ ಎಂದರು. ಈ ವೇಳೆ 2017-18ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪಡೆದ 175 ಗ್ರಾ. ಪಂ.ಗಳ ಅಧ್ಯಕ್ಷರು ಹಾಗೂ ಪಿಡಿಒಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next