Advertisement

ಸ್ವಾತಂತ್ರ್ಯದ ಕಿಚ್ಚು ನೆನಪಿಸುವ ಚನ್ನಪಟ್ಟಣದ ಗಾಂಧಿ ಭವನ

06:20 PM Aug 15, 2021 | Team Udayavani |

ರಾಮನಗರ: ಆಗಸ್ಟ್‌ 15ಕ್ಕೆ ದೇಶ 75ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಿದೆ. ಸ್ವಾತಂತ್ರ್ಯ ಹೋರಾಟದಕಿಚ್ಚು ನೆನಪಿಸುವ ಗಾಂಧಿ ಭವನ ಎಂಬ ಕಟ್ಟಡ ಚನ್ನಪಟ್ಟಣದಲ್ಲಿ ಇದೆ.

Advertisement

ಚನ್ನಪಟ್ಟಣ ನಗರದ ಪೊಲೀಸ್‌ ಠಾಣೆಯ ಮುಂಭಾಗ, ಬೆಂಗಳೂರು -ಮೈಸೂರು ಹೆದ್ದಾರಿ ಪಕ್ಕದಲ್ಲೇ ಗಾಂಧಿ ಭವನ ಇದೆ. ಸದ್ಯ ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧೀಜಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಗಾಂಧಿ ಭವನ ಇರುವ ಸ್ಥಳದಲ್ಲಿ ವಿಶ್ರಾಂತಿ ಪಡೆದಿದ್ದರು. ಈ ವೇಳೆ ಗಾಂಧೀಜಿ ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದವರನ್ನೆಲ್ಲ ಸೇರಿಸಿ ಸಭೆ ನಡೆಸಿದ್ದರು.. ಹೀಗೆ ಗಾಂಧೀಜಿ ಅವರ ಭೇಟಿಯನ್ನು ಸ್ಮರಿಸುವ ಸಲುವಾಗಿ ಈ ಸ್ಥಳದಲ್ಲಿ ಗಾಂಧಿ ಭವನ ನಿರ್ಮಾಣವಾಗಿದೆ ಎಂದು ಚನ್ನಪಟ್ಟಣದ ಜನತೆ ಹೇಳುತ್ತಾರೆ. ಮಂಡ್ಯದಿಂದ ಚನ್ನಪಟ್ಟಣ ಕ್ಕೆ ಆಗಮಿಸಿ ಗಾಂಧೀಜಿ ಇಲ್ಲಿನ ಬಾಲಕರ ಪ್ರೌಢಶಾಲೆಯಲ್ಲಿ ನಾಗರಿಕರನ್ನು ಭೇಟಿ ಮಾಡಿದ್ದರು. ನಂತರ ಗಾಂಧಿ ಭವನದಲ್ಲಿರುವ ಸ್ಥಳದಲ್ಲಿ ವಿಶ್ರಾಂತಿ ಪಡೆದುಕೊಂಡಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಸಿ ಕೊಂಡಿದ್ದವರ ಸಭೆ ನಡೆಸಿದ್ದರು.

ಇದನ್ನೂ ಓದಿ: ಅಫ್ಗಾನಿಸ್ತಾನ : ಕಾಬೂಲ್ ನನ್ನು ಬಲವಂತವಾಗಿ ವಶಪಡಿಸಿಕೊಳ್ಳುವುದಿಲ್ಲ : ತಾಲಿಬಾನ್

ರಾಮನಗರಕ್ಕೂ ಬಂದಿದ್ದರು ಗಾಂಧೀಜಿ: ಗಾಂಧೀಜಿ ನಂತರ ರಾಮನಗರಕ್ಕೆ ಆಗಮಿಸಿದ್ದರು. ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿ ಗಾಂಧಿ ಕೃಷ್ಣಯ್ಯ ಎಂಬುವರಿಗೆ ಸೇರಿದ್ದ ಕಟ್ಟಡದಲ್ಲಿ ನಾಗರಿಕರ ಸಭೆ ನಡೆಸಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸುವಂತೆ ನಾಗರಿಕರನ್ನು ಪ್ರೇರೇಪಿಸಿದ್ದರು. ಗಾಂಧೀಜಿ ಅವರ ಅನಯಾಯಿ ಆಗಿ ಗಾಂಧೀಜಿ  ಪಾಲಿಸುತ್ತಿದ್ದ ಕೃಷ್ಣಯ್ಯ ಅವರನ್ನು ರಾಮನಗರದ ಜನತೆ ಗಾಂಧಿ ಕೃಷ್ಣಯ್ಯ ಎಂದೇ ಕರೆಯುತ್ತಿದ್ದರು. ಇನ್ನೊಮ್ಮೆ ಬೆಂಗಳೂರಿನಿಂದ ಮೈಸೂರು ಕಡೆಗೆ ಪ್ರಯಾಣ ಬೆಳೆಸುವ ವೇಳೆ ಗಾಂಧೀಜಿ ಅವರು, ಈಗ ಮಾಯಗಾನಹಳ್ಳಿ ವೃತ್ತ ಎಂದು ಕರೆಯಲಾಗುವ ಗುರುಲಿಂಗಯ್ಯ ಸರ್ಕಲ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಕೆಂಪಯ್ಯ ಮತ್ತು
ನಾಗರಿಕರು ಗಾಂಧೀಜಿ ಅವರನ್ನು ಭೇಟಿ ಮಾಡಿದ್ದರು. ಸಂಶೋಧನಾ ವಿದ್ಯಾರ್ಥಿ ಎಸ್‌.ರುದ್ರೇಶ್ವರ ಅವರ ಪ್ರಕಾರ ರಾಮನಗರ ತಾಲೂಕು ಒಂದರಲ್ಲೇ ಸುಮಾರು 60 ಮಂದಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ, ಜೈಲು ಶಿಕ್ಷೆ ಅನುಭವಿಸಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ರಾಮನಗರ, ಚನ್ನಪಟ್ಟಣ, ಮಾಗಡಿ,ಕನಕಪುರ ತಾಲೂಕುಗಳಲ್ಲಿ ಜನರು ಭಾಗವಹಿಸಿದ್ದರು.

-ಬಿ.ವಿ. ಸೂರ್ಯಪ್ರಕಾಶ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next