Advertisement

ಗಾಂಧಾರಿ ಸ್ವಗತ ಕೃತಿಗೆ ಡಾ|ಡಿ.ಎಸ್‌. ಕರ್ಕಿ ಕಾವ್ಯ ಪ್ರಶಸ್ತಿ

12:07 PM Nov 10, 2017 | |

ಹುಬ್ಬಳ್ಳಿ: ಕಾಗವಾಡದ ಡಾ| ಎಂ.ಬಿ. ಹೂಗಾರ ಅವರ ಗಾಂಧಾರಿ ಸ್ವಗತ ಕೃತಿಗೆ 2017ನೇ ಸಾಲಿನ ಡಾ| ಡಿ.ಎಸ್‌. ಕರ್ಕಿ ಕಾವ್ಯ ಪ್ರಶಸ್ತಿ ಲಭಿಸಿದೆ. ಸ್ಥಳೀಯ ಡಾ| ಡಿ.ಎಸ್‌. ಕರ್ಕಿ ಸಾಹಿತ್ಯ ವೇದಿಕೆಯ ವತಿಯಿಂದ ಪ್ರತಿವರ್ಷ ಕೊಡಮಾಡುವ ಪ್ರಶಸ್ತಿಯು 10 ಸಾವಿರ ರೂ. ನಗದು, ಸ್ಮರಣಿಕೆ, ಗೌರವಾರ್ಪಣೆ ಒಳಗೊಂಡಿದೆ. 

Advertisement

ಪ್ರಶಸ್ತಿ ಪ್ರದಾನ ಸಮಾರಂಭವು ನಗರದಲ್ಲಿ ನವೆಂಬರ್‌ ತಿಂಗಳಲ್ಲಿ ನಡೆಯಲಿದೆ. ಪ್ರಶಸ್ತಿ ಆಯ್ಕೆಗಾಗಿ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಅಂದಾಜು 120 ಕವನ ಸಂಕಲನಗಳಲ್ಲಿ ಹೂಗಾರ ಅವರ ಗಾಂಧಾರಿ ಸ್ವಗತ ಕೃತಿ ಆಯ್ಕೆಯಾಗಿದೆ ಎಂದು ವೇದಿಕೆಯ ಕಾರ್ಯದರ್ಶಿ ಎಂ.ಎ. ಸುಬ್ರಹ್ಮಣ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕಿರುಪರಿಚಯ: ಮೂಲತಃ ಜಮಖಂಡಿ ತಾಲೂಕು ಹುನ್ನೂರ ಗ್ರಾಮದವರಾದ ಡಾ| ಎಂ.ಬಿ. ಹೂಗಾರ ಅವರು ಬೆಳಗಾವಿ ಜಿಲ್ಲೆ ಕಾಗವಾಡ ಗ್ರಾಮದ ಶಿವಾನಂದ ಕಾಲೇಜಿನ ವಿಶ್ರಾಂತ  ಕನ್ನಡ ಅಧ್ಯಾಪಕರಾಗಿದ್ದಾರೆ. 1975ರಲ್ಲಿ ಶರಣರ ಆಂದೋಲನ ಹಾಗೂ ಹೊಸ ಸಮಾಜದ ಪರಿಕಲ್ಪನೆ ವಿಷಯದಲ್ಲಿ ಪಿಎಚ್‌ಡಿ ಪಡೆದರು.

ಧಾರವಾಡದ ಕರ್ನಾಟಕ ವಿವಿ ಹಾಗೂ ಕೊಲ್ಲಾಪುರದ ಶಿವಾಜಿ ವಿವಿಯಲ್ಲಿ ಸಂಶೋಧನಾ ಮಾರ್ಗದರ್ಶಕರಾಗಿ ಅನುಭವ ಹೊಂದಿದ್ದಾರೆ. ವ್ಯಾಕರಣ, ಶರಣ ಸಾಹಿತ್ಯ, ಸಂಶೋಧನೆ, ಕಾವ್ಯಮೀಮಾಂಸೆ, ಕಾವ್ಯ, ಅನುವಾದ ಮುಂತಾದ ವಿಷಯಗಳ 21 ಕೃತಿಗಳನ್ನು ರಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next