ಕನ್ನಡಿಗರ ಪಾಲಿಗೆ “ಮಗಳು ಜಾನಕಿ’ ಅಂತಲೇ ಚಿರಪರಿಚಿತರಾದವರು ನಟಿ ಗಾನವಿ ಲಕ್ಷ್ಮಣ. ರಿಷಭ್ ಶೆಟ್ಟಿ ನಟನೆಯ “ಹೀರೋ’ ಸಿನಿಮಾ ಮೂಲಕ ಹಿರಿತೆರೆಗೆ ಪರಿಚಯವಾದ ನಟಿ. ಸದ್ಯ ಹರ್ಷ ನಿರ್ದೇಶನದ, ಶಿವರಾಜ್ ಕುಮಾರ್ ನಟಿಸಿ, ನಿರ್ಮಿಸುತ್ತಿರುವ “ವೇದ’ ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟ್ರೇಲರ್ ನೋಡಿದವರಿಗೆ ಗಾನವಿ ಹೊಸ ಗೆಟಪ್‌ನಲ್ಲಿ ಕಾಣಿಸಿ ಕೊಂಡಿರೋದು ಎದ್ದು ಕಾಣುತ್ತಿದೆ. ಅನುಭವಿ ಕಲಾವಿದರು, ತಂತ್ರಜ್ಞರ ಜೊತೆ ತೆರೆ ಹಂಚಿಕೊಂಡಿರುವ ಗಾನವಿ “ವೇದ’ ಚಿತ್ರದಲ್ಲಿ ಪುಷ್ಪಾ ಎಂಬ ಪಾತ್ರ ಮಾಡಿದ್ದಾರೆ. ಬಿಡುಗಡೆಯ ಹೊಸ್ತಿಲಿನಲ್ಲಿರುವ “ವೇದ’ ಚಿತ್ರ ಹಾಗೂ ತಮ್ಮ ಪಾತ್ರದ ಬಗ್ಗೆ ಗಾನವಿ ಮಾತನಾಡಿದ್ದಾರೆ.
ವೇದ ಚಿತ್ರದಲ್ಲಿನ ನಿಮ್ಮ ಪಾತ್ರ ಹಾಗೂ ಪಾತ್ರ ಸಿಕ್ಕ ಕುರಿತು ಹೇಳಿ?
“ವೇದ’ ಚಿತ್ರದಲ್ಲಿ ಪುಷ್ಪಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರದಲ್ಲಿ ಶಿವರಾಜ್ ಕುಮಾರ್ (ವೇದ) ಹೆಂಡತಿಯ ಪಾತ್ರ. ಈ ಮೊದಲು ನನ್ನ ಚಿತ್ರವನ್ನು ಹಾಗೂ ನಟನೆಯನ್ನು ನೋಡಿದ್ದ ನಿರ್ದೇಶಕ ಹರ್ಷ ಅವರು ಪುಷ್ಪಾ ಪಾತ್ರಕ್ಕಾಗಿ ಸಂಪರ್ಕಿಸಿದ್ದರು. ನಂತರ ಕಥೆ ಕೇಳಿ, ಪಾತ್ರದ ಬಗ್ಗೆ ಅರಿತು ಚಿತ್ರಕ್ಕೆ ಓಕೆ ಅಂದೆ. ಶಿವರಾಜ್‌ಕುಮಾರ್ ಸರ್ ಜೊತೆ ನಟಿಸುವ ಅವಕಾಶ ಮತ್ತಷ್ಟು ಚಿತ್ರ, ಪಾತ್ರವನ್ನು ಇಷ್ಟವಾಗುವಂತೆ ಮಾಡಿತು. ಚಿತ್ರೀಕರಣದ ಅನುಭವಗಳು ಅನನ್ಯ.
ಹರ್ಷ ಅವರ ನಿರ್ದೇಶನದಲ್ಲಿ ಮೊದಲ ಬಾರಿ ಕೆಲಸ ಮಾಡಿದ ಅನುಭವ?
ಹರ್ಷ ಹಾಗೂ ಶಿವಣ್ಣ ಅವರ ಕಾಂಬಿನೇಷನ್‌ಲ್ಲಿ ಕೆಲಸ ಮಾಡುತ್ತಿರುವುದು ನನಗೆ ಹೊಸ ಅನುಭವ. ಅದರಲ್ಲೂ ಹರ್ಷ ಸರ್ ಅವರ ಎನರ್ಜಿಗೆ ಸಾಟಿ ಇಲ್ಲ. ಅವರು ಒಂಥರ ಪವರ್ ಪ್ಯಾಕ್ ಇದ್ದ ಹಾಗೆ. ತಾನು ಬರೆದಿರುವ ಪಾತ್ರ, ಅದು ಯಾವ ತರಹ ಬರಬೇಕು ಎನ್ನುವುದು ಕುರಿತು ಸಾಕಷ್ಟು ಕಾಳಜಿ ವಹಿಸುತ್ತಾರೆ. ಅವರೊಬ್ಬ ಪ್ಯಾಷನೇಟ್ ನಿರ್ದೇಶಕ. ಪ್ರತಿ ಪಾತ್ರವನ್ನು ಕೂಡಾ ಸಮತೂಗಿಸಿಕೊಂಡು ಹೋಗುತ್ತಾರೆ. ಪ್ರತಿ ಪಾತ್ರಕ್ಕೂ ಅದರದ್ದೇ ಆದ ಮಹತ್ವ ನೀಡುತ್ತಾರೆ.
ವೇದ ಬಗ್ಗೆ ಪ್ರೇಕ್ಷಕರಿಗೆ ಏನು ಹೇಳಲು ಬಯಸುತ್ತೀರಿ?
ವೇದ ಒಂದು ಅದ್ಭುತ ಸಿನಿಮಾ. ನಾನು ತುಂಬಾ ಇಷ್ಟಪಟ್ಟು, ಖುಷಿಯಿಂದ ಅನುಭವಿಸಿ ಪಾತ್ರ ಮಾಡಿದ್ದೇನೆ. ಚಿತ್ರದ ಪ್ರತಿಯೊಬ್ಬ ಕಲಾವಿದರು, ತಂತ್ರಜ್ಞರು ಅಷ್ಟೇ ಒಳ್ಳೆಯ ಮನಸ್ಸಿನಿಂದ ಚಿತ್ರ ಮಾಡಿದ್ದಾರೆ. ಹಳ್ಳಿಯ ಉತ್ತಮ ವಾತಾವರಣದ ಚಿತ್ರಗಳನ್ನು ನೋಡದೆ ವರ್ಷಗಳೇ ಆಗಿದ್ದವು. ಇಲ್ಲಿ ಅಂತಹ ಸುಂದರ ಅನುಭವ ಪ್ರೇಕ್ಷಕರಿಗೆ ಸಿಗುತ್ತದೆ. ಕಾಮಿಡಿ ಹಾಗೂ ಎಲ್ಲಾ ಭಾವನೆಗಳು ನಿಮಗೆ ಹತ್ತಿರವಾಗುತ್ತದೆ. ಶಿವಣ್ಣ ಅವರು ತುಂಬಾ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮೂಲಕ ಒಂದು ಹೊಸ ಅನುಭವ ನೋಡುಗರಿಗೆ ಸಿಗುತ್ತದೆ ಎಂದು ಧೈರ್ಯದಿಂದ ಹೇಳುತ್ತೇನೆ.
ಚಿತ್ರದ ಮೇಲಿನ ನಿಮ್ಮ ನಿರೀಕ್ಷೆ ಏನು?
ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್ ಹಿಟ್ ಆಗಿದೆ. ನನ್ನ ಪಾತ್ರವಾಗಲಿ, ಅಭಿನಯವಾಗಲಿ, ಎಲ್ಲರಿಗೂ ತುಂಬಾ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ. ಇದೊಂದು ಕಂಪ್ಲೀಟ್ ಫ್ಯಾಮಿಲಿ ಪ್ಯಾಕೇಜ್ ಸಿನಿಮಾ.
ಶಿವರಾಜ್‌ಕುಮಾರ್ ಜೊತೆ ಅವರದ್ದೇ ಹೋಮ್ ಬ್ಯಾನರ್‌ನಲ್ಲಿ ನಟಿಸಿದ ಅನುಭವ?
ಚಿತ್ರೀಕರಣಕ್ಕೆ ಹೋದ ಮೇಲೆ ಅರಿವಾಗಿದ್ದು, “ಹೋಮ್ ಬ್ಯಾನರ್’ ಅಂದರೇನು ಎಂಬುದು. ಜೊತೆಗೆ ಶಿವಣ್ಣ ದೊಡ್ಡ ಕಲಾವಿದರಾದರೂ ಅವರದು ಸರಳ ವ್ಯಕ್ತಿತ್ವ. ನಮ್ಮ ಜೊತೆ ಸರಳವಾಗಿ ನಡೆದುಕೊಳ್ಳುವ ಜೊತೆಗೆ ನಟನೆ ವೇಳೆ ಪ್ರೋತ್ಸಾಹ ನೀಡಿದ್ದಾರೆ. ಅವರ ಬೆಂಬಲದಿಂದ ಪಾತ್ರಕ್ಕೆ ಮತ್ತಷ್ಟು ಜೀವ ತುಂಬಲು ಸಾಧ್ಯವಾಯಿತು. ಅವರ ನಟನೆ ಹಾಗೂ ಅವರದ್ದೇ ಹೋಂ ಬ್ಯಾನರ್‌ನಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ.
ವಾಣಿ ಭಟ್ಟ