ಸಾಗರ: ಇತಿಹಾಸ ಪ್ರಸಿದ್ಧ ಗಣಪತಿ ಕೆರೆ ಒತ್ತುವರಿ ಸಂಬಂಧ ಈಗಾಗಲೇ 74 ಜನರಿಗೆ ನೋಟಿಸ್ ನೀಡಲಾಗಿದೆ. ಈ ಪೈಕಿ 4 ಮತ್ತು 6 ನೇ ಸಂಖ್ಯೆಯಲ್ಲಿ ಶಾಸಕ ಹಾಲಪ್ಪ ಅವರ ಹೆಸರು ಕೂಡಾ ಇದೆ ಎಂದು ಗಣಪತಿ ಕೆರೆ ಹಿತರಕ್ಷಣಾ ಸಮಿತಿ ಸಂಚಾಲಕ ಐ.ವಿ. ಹೆಗಡೆ ಆರೋಪಿಸಿದರು.
ಬುಧವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣಪತಿ ಕೆರೆ ಇರುವುದು 24.37 ಎಕರೆ. ಶಾಸಕ ಹಾಲಪ್ಪ ಅವರು ಈಚೆಗೆ ಕೆರೆಯ ವಿಸ್ತೀರ್ಣ 30 ಎಕರೆ ಇದೆ ಎಂದು ಹೇಳಿರುವುದು ಹಾಸ್ಯಾಸ್ಪದವಾಗಿದೆ. ಕೆರೆ ಒತ್ತುವರಿ ತೆರವಿಗೆ ಸಂಬಂಧಪಟ್ಟಂತೆ 8 ಬಾರಿ ಸರ್ವೇ ನಡೆದಿದೆ. ಎಲ್ಲ ಸರ್ವೇಯಲ್ಲೂ ಒಂದೊಂದು ಅಳತೆ ಬರುತ್ತಿದ್ದು, ಯಾವುದೇ ಅಳತೆಯಲ್ಲೂ 30 ಎಕರೆ ಬಂದಿಲ್ಲ. ಆದರೆ ಶಾಸಕರು ಈಗ ಕೆರೆ ವಿಸ್ತೀರ್ಣದ ಬಗ್ಗೆ ಈ ರೀತಿ ಹೇಳಿಕೆ ನೀಡಿರುವುದು ಆಶ್ಚರ್ಯಕರ ಸಂಗತಿ ಎಂದರು.
ಗಣಪತಿ ಕೆರೆ ಬಾಜುದಾರರ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲ. ನಾನು ಕೆರೆ ಸಂಬಂಧದ ಫಲಾನುಭವಿಯೂ ಅಲ್ಲ. ಆದರೆ ಗಣಪತಿ ಕೆರೆ ಉಳಿಸಿ ಬೆಳೆಸಿಕೊಳ್ಳಬೇಕು ಎನ್ನುವವರ ಪೈಕಿ ನಾನು ಮೊದಲಿಗ. 1980ರ ದಶಕದಲ್ಲಿ ಮೊದಲ ಬಾರಿಗೆ ನಾನು ಮತ್ತು ಬಾಳೆಕಾಯಿ ಚಂದ್ರು ಎಂಬುವವರು ವಾಹನ ಮಾಲೀಕರು ಮತ್ತು ಚಾಲಕರ ಸಂಘದ ಮೂಲಕ ಕೆರೆಯನ್ನು ಮೂರ‍್ನಾಲ್ಕು ವರ್ಷ ಸ್ವಚ್ಚ ಮಾಡಿದ್ದೇವೆ. ನಂತರ ಶಾಸಕರು ಗಣಪತಿ ಕೆರೆ ಸ್ವಚ್ಚಗೊಳಿಸುವ ಪ್ರಯತ್ನ ನಡೆಸಿದ್ದನ್ನು ನಾನು ಸ್ವಾಗತಿಸುತ್ತೇನೆ. ಆದರೆ ಒತ್ತುವರಿ ತೆರವು ಮಾಡದೆ ಅಭಿವೃದ್ಧಿಗೆ ಸರ್ಕಾರದ ಹಣ ವಿನಿಯೋಗಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಹಿಂದೆ ತಹಶೀಲ್ದಾರ್ ರಾಜಣ್ಣ ಎಂಬುವವರು ಕೆರೆಯನ್ನು ಸರ್ವೇ ಮಾಡಿ ಬಾಂದ್ ಗುರುತಿಸಿ, ಬಾವುಟ ನೆಟ್ಟಿದ್ದರು. ಅದನ್ನು ಕಿತ್ತು ಹಾಕಲಾಗಿತ್ತು. ಹೊಸದಾಗಿ ಸರ್ವೇ ಮಾಡುವಾಗ ಹಿಂದಿನ ತಹಶೀಲ್ದಾರ್ ಗುರುತಿಸಿದ್ದ ಬಾಂದ್ ಮುಚ್ಚಿ ಹೊಸದಾಗಿ ಗುರುತು ಮಾಡಲಾಗಿದೆ. ಕೆರೆಯ ಇಕ್ಕೆಲಗಳಲ್ಲಿ ಮಣ್ಣು ತುಂಬಿ, ಕೆರೆ ಮುಚ್ಚಿ ರಸ್ತೆ ಮಾಡಿರುವುದರ ಉದ್ದೇಶ ನಿಗೂಢವಾಗಿದೆ ಎಂದರು.
ಕೆರೆ ಒತ್ತುವರಿ ಮಾಡಿದವರನ್ನು ರಕ್ಷಣೆ ಮಾಡಲು ನಗರಸಭೆಯಿಂದ 50 ಲಕ್ಷ ರೂ. ವಿನಿಯೋಗಿಸಿ ಅಚ್ಚುಕಟ್ಟು ಭದ್ರ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಹಿಂದೆ ಜಾಮಿಯಾ ಮಸೀದಿ, ರಾಘವೇಂದ್ರ ಮಠ, ಶಂಕರ ಮಠದವರು ಕೆರೆ ಒತ್ತುವರಿ ಮಾಡಿದ್ದರು ಎಂದು ತೆರವು ಮಾಡುವ ಪ್ರಯತ್ನ ನಡೆಸಲಾಗಿತ್ತು. ಅದನ್ನು ಅಲ್ಲಿಗೆ ನಿಲ್ಲಿಸಲಾಗಿದೆ. ಕೆರೆ ಅಭಿವೃದ್ಧಿ ಮಾಡಲು ನಮ್ಮ ಅಡ್ಡಿಯಿಲ್ಲ. ಆದರೆ ಕೆರೆಯನ್ನು ಮುಚ್ಚಿ ಸಣ್ಣದು ಮಾಡಿ ಇಂತಹ ಕೆಲಸಕ್ಕೆ ನನ್ನ ವಿರೋಧವಿದೆ ಎಂದು ಹೇಳಿದರು.
ನಗರ ವ್ಯಾಪ್ತಿಯಲ್ಲಿ 18 ಪಾರ್ಕ್‌ಗಳಿದ್ದು, ನಿರ್ವಹಣೆ ಇಲ್ಲದೆ ಹಾಳಗುತ್ತಿದೆ. ಅಂತಹದ್ದರಲ್ಲಿ ಗಣಪತಿ ಕೆರೆಯ ಮೇಲ್ಭಾಗ ಕೆರೆ ಮುಚ್ಚಿ ಪಾರ್ಕ್ ಮಾಡುವ ಅಗತ್ಯ ಏನಿತ್ತು ಎಂದು ಕಟುವಾಗಿ ಪ್ರಶ್ನಿಸಿ ದಾಖಲೆಗಳನ್ನು ಪ್ರದರ್ಶಿಸಿದರು.