Advertisement

ಗಣಪತಿ ಬಪ್ಪಾ ಮುಂದಿನ ವರ್ಷ ಬಾರಪ್ಪಾ

12:58 PM Sep 06, 2017 | |

ಹುಬ್ಬಳ್ಳಿ: ಗಣಪತಿ ಬಪ್ಪಾ ಮೋರಯಾ…. ಗಜಾನನ ಮಹಾರಾಜ ಕೀ ಜೈ…ಎಂಬ ಘೋಷಣೆಗಳೊಂದಿಗೆ ಚತುರ್ಥಿಯಿಂದ ಹನ್ನೊಂದು ದಿನಗಳ ಕಾಲ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಂದ ಪ್ರತಿಷ್ಠಾಪಿತಗೊಂಡಿದ್ದ ವಿಘ್ನ ವಿನಾಶಕ ಗಜಾನನ ಮೂರ್ತಿಗಳ ವಿಸರ್ಜನೆ ಮಂಗಳವಾರ ರಾತ್ರಿ ಶ್ರದ್ಧಾ -ಭಕ್ತಿ ಹಾಗೂ ವಿಜೃಂಭಣೆಯಿಂದ ನಡೆಯಿತು. 

Advertisement

ಮಧ್ಯಾಹ್ನದಿಂದಲೇ ಸಾರ್ವಜನಿಕ ಗಣೇಶೋತ್ಸವದ ಮೆರವಣಿಗೆ ಆರಂಭಗೊಂಡರೂ ಬೆಳಗಿನವರೆಗೂ ಸುಮಾರು 300 ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಿತು. ಮಹಾಪೂಜೆ, ಗಣಪತಿ ಎದುರಿನ ಹಣ್ಣು, ಕಾಯಿಗಳ ಸವಾಲು ಪೂರ್ಣಗೊಂಡ ನಂತರ ಮೆರವಣಿಗೆ ಮೂಲಕ ಮೂರ್ತಿಗಳನ್ನು ಸಾಗಿಸಲಾಯಿತು. 

ಕೇಸರಿ ಶಾಲು, ಪಟಗಾ ಸುತ್ತಿಕೊಂಡ ಭಕ್ತರು ಮೆರವಣಿಗೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡರು. ಮೆರವಣಿಗೆಯುದ್ದಕ್ಕೂ ಪಟಾಕಿಗಳನ್ನು ಸಿಡಿಸುತ್ತ, ಸಂಗೀತಕ್ಕೆ ನರ್ತಿಸುತ್ತ ಸಂಭ್ರಮದಿಂದ ಗಣೇಶನನ್ನು ಬೀಳ್ಕೊಡಲಾಯಿತು.  

ಡಿಜೆ ಅಬ್ಬರ: ಡಿಜೆ ಸಂಗೀತ ವ್ಯವಸ್ಥೆಯಿಂದ ಭಕ್ತರಿಗೆ ಖುಷಿಯಾಯಿತಾದರೂ ಸಾರ್ವಜನಿಕರಿಗೆ ತೊಂದರೆಯಾಯಿತು. ಸ್ಪರ್ಧೆಗಿಳಿದವರಂತೆ ಸೌಂಡ್‌ ಬಾಕ್‌ಗಳನ್ನು ಟ್ರ್ಯಾಕ್ಟರ್‌ ಟ್ರೇಲರ್‌ನಲ್ಲಿ ಒಂದರ ಮೇಲೊಂದರಂತೆ ಸೇರಿಸಿ ಅಬ್ಬರದ ಸಂಗೀತದ ಮಧ್ಯೆ ಮೆರವಣಿಗೆ ನಡೆಯಿತು. 

ಯುವಕರು ಅಬ್ಬರದ ಸಂಗೀತವನ್ನು ಇಷ್ಟಪಟ್ಟರೆ, ಪಕ್ಕಕ್ಕೆ ನಿಂತವರೊಂದಿಗೆ ಮಾತನಾಡಲೂ ಕಷ್ಟ ಪಡುವಂಥ ಸ್ಥಿತಿ ನಿರ್ಮಾಣವಾಗಿತ್ತು. ಜನರು ಅಂಗಡಿ, ಮನೆಗಳ ಮುಂದೆ ನಿಂತು ಮೆರವಣಿಗೆ ವೀಕ್ಷಿಸಿದರು. ಮೆರವಣಿಗೆ ಮುಂದೆ ಸಾಗುವಂತೆ ಮಾಡಲು ಪೊಲೀಸರು ಗಣೇಶೋತ್ಸವ ಸಮಿತಿಯವರ ಮನವೊಲಿಸುತ್ತಿದ್ದುದು ಕಂಡು ಬಂತು.  

Advertisement

ಎರಡು ಕಡೆ ವಿಸರ್ಜನೆ: ಸಾರ್ವಜನಿಕ ಗಣೇಶ ಮೂರ್ತಿಗಳಿಗೆ ಈ ಬಾರಿ ಎರಡು ಕಡೆ ವ್ಯವಸ್ಥೆ ಮಾಡಲಾಗಿತ್ತು. ಗಾಜಿನ ಮನೆಯ ಪಕ್ಕದ ಬಾವಿ, ಹೊಸೂರಿನ ಟ್ಯಾಂಕ್‌ ಪಾಲಿಕೆ ವತಿಯಿಂದ ವ್ಯವಸ್ಥೆ ಮಾಡಲಾಗಿತ್ತು. ಉಣಕಲ್ಲ ಸುತ್ತಮುತ್ತಲಿನ ಭಾಗದವರು ಉಣಕಲ್ಲ ಕೆರೆಯಲ್ಲಿ ಗಣಪತಿ ಮೂರ್ತಿಗಳ ವಿಸರ್ಜನೆ ಮಾಡಿದರು.

ಕಳೆದ ಬಾರಿ ಕಪಿಲಾ ಬಾವಿ ಹಾಗೂ ಶ್ರೀನಗರ ಬಾವಿಯಲ್ಲೂ ಗಣೇಶನ ವಿಸರ್ಜಣೆ ಮಾಡಲಾಗಿತ್ತು. ಆದರೆ ಈ ಬಾರಿ ನೀರಿಲ್ಲದ ಕಾರಣ ಎಲ್ಲರೂ ಗ್ಲಾಸ್‌ ಹೌಸ್‌ ಬಾವಿ ಹಾಗೂ ಹೊಸೂರ ನವೀಕೃತ ನೀರಿನ ಟ್ಯಾಂಕ್‌ನಲ್ಲಿ ಗಣೇಶ ವಿಸರ್ಜನೆ ಮಾಡಲಾಯಿತು. 

ನಗರದ ವಿವಿಧ ಪ್ರದೇಶಗಳಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಗಣೇಶನ ಮೂರ್ತಿಗಳು ದುರ್ಗದ ಬಯಲು, ಬ್ರಾಡ್‌ ವೇ, ಮೇದಾರ ಓಣಿ, ದಾಜಿಬಾನ ಪೇಟೆ, ಸಂಗೊಳ್ಳಿ ರಾಯಣ್ಣ ವೃತ್ತ, ಚನ್ನಮ್ಮ ವೃತ್ತ, ಬಸವ ವನದ ಮೂಲಕ ವಿಸರ್ಜನೆಗೆ ತೆರಳಿದವು. ಬುಧವಾರ ಬೆಳಗ್ಗೆವರೆಗೂ ಗಣೇಶಮೂರ್ತಿಗಳು ವಿಸರ್ಜನೆಗೊಂಡವು.  

Advertisement

Udayavani is now on Telegram. Click here to join our channel and stay updated with the latest news.

Next