ಈ ವಾರ ಬಿಡುಗಡೆಯಾಗುತ್ತಿರುವ “ಸಂಕಷ್ಟಕರ ಗಣಪತಿ’ ಚಿತ್ರವು ತಮಿಳಿನ “ಪೀಚನ್‌ಕೈ’ ಎಂಬ ಚಿತ್ರದ ರೀಮೇಕಾ ಎಂಬ ಪ್ರಶ್ನೆ ಬರುತ್ತಿದ್ದಂತೆಯೇ ಉತ್ತರಿಸುತ್ತಾ ಹೋದರು ನಿರ್ದೇಶಕ ಅರ್ಜುನ್. ಅವರು ಹೇಳುವಂತೆ ಇದು ಯಾವುದೇ ಚಿತ್ರದ ರೀಮೇಕ್ ಅಲ್ಲವಂತೆ. “ಯೂಟ್ಯೂಬ್‌ನಲ್ಲಿ ಸುಮಾರು ಜನ ಇದು “ಪೀಚನ್‌ಕೈ’ನ ರೀಮೇಕ್ ಎಂದು ಹೇಳಿದ್ದಾರೆ. ಆದರೆ, ಕೊನೆಗೆ ತಮಿಳು ಚಿತ್ರದ ನಿರ್ದೇಶಕರೇ ಬಂದು, ಆ ಚಿತ್ರಕ್ಕೂ ಈ ಚಿತ್ರಕ್ಕೂ ಸಂಬಂಧವಿಲ್ಲ ಅಂತ ಹೇಳಿದ್ದಾರೆ. ಏಲಿಯನ್ ಹ್ಯಾಂಡ್ ಸಿಂಡ್ರೋಮ್ ಕುರಿತು ಹಲವು ಚಿತ್ರಗಳು ಬಂದಿದೆ. ತಮಿಳು, ಇಂಗ್ಲೀಷ್ ಅಲ್ಲದೆ ಅರೇಬಿಕ್‌ನಲ್ಲೂ ಒಂದು ಕಿರು ಚಿತ್ರ ಬಂದಿದೆ. ಖಾಯಿಲೆ ಅದೇ ಇರಬಹುದು. ಕಥೆ ಬೇರೆ’ ಎಂದು ಹೇಳಿಕೊಂಡರು ಅರ್ಜುನ್.
Advertisement
ಲಿಖೀತ್ ಅಭಿನಯದ “ಸಂಕಷ್ಟಕರ ಗಣಪತಿ’ ಚಿತ್ರವನ್ನು ಕೆ.ಆರ್.ಜಿ ಸ್ಟುಡಿಯೋಸ್‌ನ ಕಾರ್ತಿಕ್ ಗೌಡ ಕರ್ನಾಟಕದಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡು ತ್ತಿದ್ದಾರಂತೆ. ಅದಲ್ಲದೆ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಅಮೇರಿಕಾ ಮುಂತಾದ ಕಡೆ ಚಿತ್ರ ಬಿಡುಗಡೆಯಾಗುತ್ತಿದೆಯಂತೆ. ಹೀಗೆ ಚಿತ್ರ ಅಲ್ಲೆಲ್ಲಾ ಬಿಡುಗಡೆಯಾಗುತ್ತಿರುವುದಕ್ಕೆ, ಜನ ಇಟ್ಟಿರುವ ನಿರೀಕ್ಷೆಯೇ ಕಾರಣ ಮತ್ತು ಜನ ಹಾಗೆ ನಿರೀಕ್ಷೆ ಇಡುವುದಕ್ಕೆ ಟ್ರೇಲರ್ ಹಿಟ್ ಆಗಿದ್ದೇ ಕಾರಣ ಎಂಬುದು ಅರ್ಜುನ್ ನಂಬಿಕೆ. “ಫೇಸ್‌ಬುಕ್‌ನಲ್ಲಿ ಚಿತ್ರದ ಟ್ರೇಲರ್‌ಗೆ 30 ಲಕ್ಷ ಹಿಟ್ಸ್ ಬಿದ್ದಿದೆ. ಎಲ್ಲಾ ಕಡೆಯಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಇನ್ನು ಚಿತ್ರ ಸಹ ಚೆನ್ನಾಗಿ ಬಂದಿದೆ. ನಾನು ಮೂರು ಬಾರಿ ಚಿತ್ರ ನೋಡಿದೆ. ನಿರ್ದೇಶಕ ಅಂತ ಹೇಳುತ್ತಿಲ್ಲ. ಚಿತ್ರ ಚೆನ್ನಾಗಿ ಬಂದಿದೆ. ಯಾವುದೇ ಲ್ಯಾಗ್ ಇಲ್ಲದೆ ಎರಡು ಗಂಟೆಯ ಸಿನಿಮಾ ಇದು’ ಎಂದರು ಅರ್ಜುನ್.