ಸಾಗರ: ಮಾ. 12 ಮತ್ತು 13 ರಂದು ಗಣಪತಿ ಕೆರೆಹಬ್ಬ ಕಾರ್ಯಕ್ರಮ ವೈಶಿಷ್ಟ್ಯಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 12ರಂದು ಬೆಳಿಗ್ಗೆ 6ಕ್ಕೆ ಗಣಪತಿ ಕೆರೆ ಸ್ವಚ್ಚತೆ ಕಾರ್ಯಕ್ರಮಕ್ಕೆ ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ಚಾಲನೆ ನೀಡಲಿದ್ದಾರೆ. ಎರಡು ದಿನಗಳ ಕಾಲ ನಡೆಯಲಿರುವ ಸ್ವಚ್ಛತಾ ಕಾರ್ಯಕ್ರಮದಲ್ಲಿ ನಗರದ ವಿವಿಧ ಸಂಘಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು, ಸಾರ್ವಜನಿಕರು, ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಅದೇ ದಿನ ಸಂಜೆ 6-30ಕ್ಕೆ ಗಂಗಾರತಿ ಮಾದರಿಯಲ್ಲಿ ಗಣಪತಿ ಕೆರೆಯ ಗಣಪತಿ ವಿಸರ್ಜನೆ ಮಾಡುವ ಸ್ಥಳದಲ್ಲಿ ಸಾಗರಾರತಿ ಕಾರ್ಯಕ್ರಮ ನಡೆಯಲಿದೆ. ಇದೊಂದು ವಿಶೇಷ ಕಾರ್ಯಕ್ರಮವಾಗಿದ್ದು ಕೆರೆಯ ಎರಡೂ ದಂಡೆಯಲ್ಲಿ ಮಹಿಳೆಯರು ನಿಂತು ಗಣಪತಿ ಕೆರೆಗೆ ಆರತಿ ಬೆಳಗಲಿದ್ದಾರೆ. ನಂತರ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆಗೆ ಸಂಸದ ಬಿ.ವೈ.ರಾಘವೇಂದ್ರ ಅವರು ಚಾಲನೆ ನೀಡುತ್ತಾರೆ ಎಂದರು.
ನಂತರ ಸಾಗರದ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಿಂದ ಮೊದಲ ಬಾರಿಗೆ ಕಾಲೇಜು ಸಾಂಸ್ಕೃತಿಕ ಹಬ್ಬ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಂದ ವಿಶೇಷವಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದ ಬೇರೆಬೇರೆ ಭಾಗದ ನೃತ್ಯ ಪ್ರದರ್ಶನ ನಡೆಯಲಿದೆ. ಇದರ ಜೊತೆಗೆ ಸ್ಥಳೀಯರಿಂದ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತದೆ ಎಂದು ತಿಳಿಸಿದರು.
ಕೆರೆಹಬ್ಬ ಅಂಗವಾಗಿ ಪುರುಷರ ಮತ್ತು ಮಹಿಳೆಯರ ಹೊನಲು ಬೆಳಕಿನ ಪ್ರೋ ಕಬ್ಬಡ್ಡಿ ಪಂದ್ಯಾವಳಿ ನಡೆಯಲಿದೆ. ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಹೆಸರಾಂತ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಇಂದಿರಾಗಾಂಧಿ ಕಾಲೇಜಿನ ಎದುರಿಗೆ ಇರುವ ಸಂತೆ ಮಾರುಕಟ್ಟೆ ಸ್ಥಳದಲ್ಲಿ ಆಹಾರ ಮೇಳವನ್ನು ಆಯೋಜಿಸಿದೆ. 13ರಂದು ಕೆರೆ ಸ್ವಚ್ಛತಾ ಕಾರ್ಯ ಮುಂದುವರೆಯಲಿದ್ದು, ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನದ ಜೊತೆಗೆ ಕಲರ‍್ಸ್ ಕನ್ನಡ್ಛೆದೆ ತುಂಬಿ ಹಾಡಿದೆನು ವಿಜೇತ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್ ಮಾತನಾಡಿ, ಇಂದಿರಾಗಾಂಧಿ ಕಾಲೇಜಿನ ಮಕ್ಕಳು ಆಳ್ವಾಸ್ ಮಾದರಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಅವರಿಗೆ ಶಾಸಕರ ಮಾರ್ಗದರ್ಶನದಲ್ಲಿ ಪ್ರೋತ್ಸಾಹಿಸಲಾಗಿದೆ. ಇದರ ಜೊತೆಗೆ ಗಣಪತಿ ಕೆರೆ ಸ್ವಚ್ಛತಾ ಕಾರ್ಯಕ್ರಮ ಸತತ ಮೂರು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದ್ದು, ಈ ಬಾರಿ ಇನ್ನಷ್ಟು ಕೆರೆ ಸುಂದರಗೊಳಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಉಪಾಧ್ಯಕ್ಷ ವಿ.ಮಹೇಶ್, ಸದಸ್ಯರಾದ ಪ್ರೇಮ ಸಿಂಗ್, ಸತೀಶ್ ಕೆ., ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಲೋಕನಾಥ್ ಬಿಳಿಸಿರಿ, ಮಾಧ್ಯಮ ಪ್ರಮುಖ್ ಸಂತೋಷ್ ಕೆ.ಜಿ. ಹಾಜರಿದ್ದರು.