Advertisement

ಹೈನುಗಾರಿಕೆಯಲ್ಲಿ ಯಶಸ್ವಿಯಾದ 66ರ ಹರೆಯದ ಗಣಪ ಪೂಜಾರಿ

10:07 AM Dec 25, 2019 | mahesh |

ಹೆಸರು: ಗಣಪ ಪೂಜಾರಿ
ಏನೇನು ಕೃಷಿ: ಅಡಿಕೆ, ಭತ್ತ, ತೆಂಗು, ಬಾಳೆ, ಕಾಳುಮೆಣಸು
ಎಷ್ಟು ವರ್ಷ : 66
ಕೃಷಿ ಪ್ರದೇಶ : ಸುಮಾರು 3.5 ಎಕ್ರೆ

Advertisement

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ವದ ಸ್ಥಾನ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಹೆಬ್ರಿ: ಚಾರ ಮಣಿಬಚ್ಚಲು ನಿವಾಸಿ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಉತ್ತಮ ಹೈನುಗಾರ ಪ್ರಶಸ್ತಿ ಪಡೆದ ಪ್ರಗತಿಪರ ಕೃಷಿಕ ಗಣಪ ಪೂಜಾರಿ ಬಾಲ್ಯದಿಂದಲೂ ಕೃಷಿಯಲ್ಲಿ ತೊಡಗಿಸಿಕೊಂಡು ಹೈನುಗಾರಿಕೆಯಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ.

ತನ್ನ 66ರ ಹರೆಯದಲ್ಲಿ ನಿರಂತರವಾಗಿ ತನ್ನ ಎರಡು ಗಂಡು ಮಕ್ಕಳೊಂದಿಗೆ ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಂಡು ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿದ್ದು, ಪರಿಶ್ರಮವಿದ್ದರೆ ಯಶಸ್ಸು ಕಂಡಿತ ಎನ್ನುವುದಕ್ಕೆ ಗಣಪ ಪೂಜಾರಿ ಉದಾಹರಣೆಯಾಗಿದ್ದಾರೆ. ಸುಮಾರು 3.5 ಎಕ್ರೆ ಜಾಗದಲ್ಲಿ ಮುಖ್ಯವಾಗಿ 2,500 ಅಡಿಕೆ, 1ಎಕ್ರೆ ಜಾಗದಲ್ಲಿ ಭತ್ತ, ತೆಂಗು, ಬಾಳೆ ಹಾಗೂ ಉಪಬೆಳೆಗಳಾದ ಕಾಳುಮೆಣಸು, ಹುಲ್ಲು ಮೊದಲಾದ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ರಾಸಾಯನಿಕ ಬಳಸಿ ಕೃಷಿ ಮಾಡುತ್ತಿರುವಾಗ ಆರ್ಥಿಕವಾಗಿ ನಷ್ಟವನ್ನು ಅನುಭವಿಸುತ್ತಿದ್ದಾಗ ಹೊಳೆದದ್ದು ಸಾವಯವ ಕೃಷಿ. ಹಟ್ಟಿಗೊಬ್ಬರ ಬಳಸಿ ಶೂನ್ಯ ಬಂಡವಾಳದೊಂದಿಗೆ ಸಾವಯವ ಕೃಷಿಯೊಂದಿಗೆ 15 ವರ್ಷಗಳಿಂದ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ.

ಹೈನುಗಾರಿಕೆ
ಸುಮಾರು 12 ವರ್ಷಗಳಿಂದ ವಿಶಾಲವಾದ ದನದ ಕೊಟ್ಟಿಗೆಯಲ್ಲಿ ಹೈನುಗಾರಿಕೆಯಲ್ಲಿ ಆಧುನಿಕ ಪದ್ಧತಿಯನ್ನು ಅಳವಡಿಸಿಕೊಂಡು 10 ದನಗಳನ್ನು ಸಾಕಿ ದಿನಕ್ಕೆ 125 ಲೀ. ಹಾಲನ್ನು ಡೈರಿಗೆ ನೀಡುತ್ತಿದ್ದಾರೆ.

Advertisement

ಪರ್ಯಾಯ ಮಠಕ್ಕೆ ಬಾಳೆ
ಸುಮಾರು 1 ಎಕ್ರೆ ಜಾಗದಲ್ಲಿ ಯಾವುದೇ ರಾಸಾಯನಿಕ ಬಳಸದೆ ಬೆಳೆದ ಬಾಳೆಯ ಎಲೆಯನ್ನು ಉಡುಪಿ ಪರ್ಯಾಯ ಮಠಕ್ಕೆ ಪೂರೈಕೆ ಮಾಡಲಾಗುತ್ತಿದೆ.

ಲಭಿಸಿದ ಪ್ರಶಸ್ತಿಗಳು
ಆಧುನಿಕ ಪದ್ಧತಿಯನ್ನು ಬಳಸಿಕೊಂಡು ಹೈನುಗಾರಿಕೆಯಲ್ಲಿ ಯಶಸ್ಸು ಕಂಡಿದ್ದು 2017ರಲ್ಲಿ ತಾಲೂಕು ಮಟ್ಟದ ಉತ್ತಮ ಹೈನುಗಾರಿಕೆ ಪ್ರಶಸ್ತಿ ಹಾಗೂ 2018ರಲ್ಲಿ ಜಿಲ್ಲಾಮಟ್ಟದ ಉತ್ತಮ ಹೈನುಗಾರ ಪ್ರಶಸ್ತಿ ಲಭಿಸಿದೆ.

ಯಂತ್ರೋಪಕರಣ ಬಳಕೆ
ಹೈನುಗಾರಿಕೆ ಕೃಷಿಯಲ್ಲಿ ದನದ ಹಟ್ಟಿ ತೊಳೆಯಲು ಹಾಗೂ ಹಾಲು ಕರೆಯಲು ಕಾರ್ಮಿಕರ ಕೊರತೆ ನೀಗಿಸಲು ಯಂತ್ರೋಪಕರಣಗಳ ಮೊರೆ ಹೋಗಿದ್ದಾರೆ. ಅಲ್ಲದೆ ವಿದ್ಯುತ್‌ ಕೈಕೊಟ್ಟಾಗ ಜನರೇಟರ್‌ ವ್ಯವಸ್ಥೆ ಕೂಡ ಮಾಡಲಾಗಿದೆ.

ಸಂಶೋಧನೆ
ಸಗಣಿ ನೀರು, ಗೋಮೂತ್ರವನ್ನು ಸ್ಲರಿ ಹೊಂಡದ ಮೂಲಕ ಸಂಸ್ಕರಿಸಿದ ನೀರನ್ನು ತೋಟಗಳಿಗೆ ಬಿಡಲಾಗುತ್ತಿದೆ.

ಸ್ವತಃ ತೊಡಗಬೇಕು
ಕಾರ್ಮಿಕರ ಕೊರತೆ ನೆಪವೊಡ್ಡಿ ಹೆಚ್ಚಿನ ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ. ಆದರೆ ಸ್ವತಃ ನಾವೇ ಕೃಷಿಯಲ್ಲಿ ತೊಡಗಿಸಿಕೊಂಡಾಗ ಯಶಸ್ಸನ್ನು ಕಾಣಲು ಸಾಧ್ಯ. ನನ್ನೊಂದಿಗೆ ನನ್ನ ಮಕ್ಕಳು ಕೃಷಿಯಲ್ಲಿ ತೊಡಗಿಕೊಂಡ ಪರಿಣಾಮ ಇಂದು ಹೈನುಗಾರಿಕೆಯಲ್ಲಿ ಯಶಸ್ಸನ್ನು ಕಾಣಲು ಸಾಧ್ಯವಾಗಿದೆ.
-ಗಣಪ ಪೂಜಾರಿ, ಪ್ರಗತಿಪರ ಕೃಷಿಕ, ಚಾರ ಮಣಿಬಚ್ಚಲು

ಹೆಬ್ರಿ ಉದಯಕುಮಾರ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next