Advertisement

ಸಂಸ್ಥಾಪಕರ ದಿನಾಚರಣೆಯಲ್ಲಿ ಗಾನ ಸಿಂಚನ

06:00 AM Mar 23, 2018 | Team Udayavani |

ಔದ್ಯೋಗಿಕವಾಗಿ ಮಾತ್ರವಲ್ಲದೆ ಸಾಂಸ್ಕೃತಿಕವಾಗಿಯೂ ಮುನ್ನಡೆಯುವ ಅಗತ್ಯವನ್ನು ಮನಗಂಡಿರುವ ಅನೇಕ ಸಂಸ್ಥೆಗಳು ನಮ್ಮ ಲಲಿತಕಲೆಗಳನ್ನು ಪೋಷಿಸಲು ಮುಂದಾಗುತ್ತವೆ.ಈ ನಿಟ್ಟಿನಲ್ಲಿ “ಕರ್ಣಾಟಕ ಬ್ಯಾಂಕ್‌’ ಹಲವು ವರ್ಷಗಳಿಂದಲೂ ತಮ್ಮ ದೇಣಿಗೆ ಅಥವಾ ಪ್ರಾಯೋಜಕತ್ವದಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತ ಬಂದಿರುವುದು ಹೆಮ್ಮೆಯ ಸಂಗತಿ.

Advertisement

ಫೆ.2ರಂದು “ಕರ್ಣಾಟಕ ಬ್ಯಾಂಕ್‌’ ಸಂಸ್ಥಾಪಕರ ದಿನಾಚರಣೆಯನ್ನು ಅದ್ದೂರಿಯಾಗಿ ನಡೆಸಿತು. ಅಪರಾಹ್ನದ ಮೊದಲ ಕಾರ್ಯಕ್ರಮವಾಗಿ “ಈಶ ಪೌಂಡೇಶನ್‌’ ಸಂಸ್ಥಾಪಕರಾದ “ಸದ್ಗುರು’ ಜಗ್ಗಿ ವಾಸುದೇವ ಅವರು ಉಪನ್ಯಾಸ ಮತ್ತು ಸೂಕ್ತ ಮಾರ್ಗದರ್ಶನವನ್ನು ನೀಡಿದರು.

ಅನಂತರ ಚೆನ್ನೈನ ರಂಜನಿ ಮತ್ತು ಗಾಯತ್ರಿ ಸಹೋದರಿಯರಿಂದ ದ್ವಂದ್ವ ಗಾಯನ ನಡೆಯಿತು. ಈ ಸೋದರಿಯರ ಕಛೇರಿಯೆಂದರೆ ಲಯ, ಶ್ರುತಿ ಶುದ್ಧವಾದ ಸೌಖ್ಯ ಸಂಗೀತದ ರಸದೌತಣವೇ ಸರಿ. ತಮ್ಮ ನವನವೀನವಾದ ನಿರೂಪಣಾ ವೈಖರಿಗಳಿಂದಾಗಿ ಮತ್ತು ರಾಗಗಳಲ್ಲಿ ಭಾವ ಸೌಂದರ್ಯವನ್ನು ತುಂಬಿ ಬಿಡುವ ಸೂಕ್ಷ್ಮ ಸಂವೇದನೆಗಳಿಂದಾಗಿ ಸಭಿಕರನ್ನು ಕಛೇರಿಯ ಕೊನೆಯವರೆಗೂ ಸೆರೆ ಹಿಡಿದಿಡುವಂತಹ ಅಪೂರ್ವ ಕಲಾವಿದೆಯರು.

ಶ್ರುತಿ ಲೀನತೆಯೊಂದಿಗೆ ಏಕೀಭವಿಸಿದ ನಾಟಿ ರಾಗದ (ಜಯ ಜಾನಕಿ) ರಚನೆಯೊಂದಿಗೆ ಕಛೇರಿ ಪ್ರಾರಂಭ. ನಾಮ (ಅನ್ನಪೂರ್ಣೆ)ಮತ್ತು ನಾಸಿಕಾ ಭೂಷಣ (ಮಾರವೈರಿ ರಮಣಿ) ಕೃತಿಗಳು ಉತ್ತಮವಾಗಿದ್ದವು. ಪ್ರಧಾನವಾಗಿ ಮೆರೆದ ರಾಗಗಳು ತೋಡಿ ಮತ್ತು ಮೋಹನ.ತೋಡಿಯ ಗಮಕಯುಕ್ತವಾದ ಆಲಾಪನೆ ಚಿಕ್ಕದಾಗಿದ್ದರೂ ಅದಕ್ಕೆ ಬೇರೆಯೇ ಮಗ್ಗುಲುಗಳಿಂದ ಹೊಸ ರೀತಿಯ ಆರೈಕೆ ನೀಡಿದವರು ರಂಜನಿ. ಘನವಾಗಿ ಮೂಡಿ ಬಂದ ಕೃತಿ. “ಕಾವೇರಿ ತೀರಮುಲನು’ ಎಂಬಲ್ಲಿ ಮಾಡಿದ ಆಕರ್ಷಕವಾದ ನೆರವಲ್‌ ಮತ್ತು ಸ್ವರ ವಿನ್ಯಾಸಗಳು ಮುದ ನೀಡಿದವು.

ಸಾಮಾನ್ಯವಾಗಿ ಮೋಹನ ರಾಗದಲ್ಲಿ (ನನು ಪಾಲಿಂಬ) ಆಲಾಪನೆಯಲ್ಲಿ ಅಲಂಕಾರಿಕವಾಗಿ ನುಸುಳಿ ಬಿಡುವ ಮೋಹನ ಕಲ್ಯಾಣಿಯ ಛಾಯೆ ಮೂಡದಂತೆ. ರಿ.ಗ.ಪ.ದ. ನಾಲ್ಕೇ ಸ್ವರಗಳ ಮೆಟ್ಟಿಲುಗಳಲ್ಲಿ ನಿಂತು ವಿಸ್ತರಿಸುತ್ತ ಜಂಟಿ ಪ್ರಯೋಗಗಳು ಮತ್ತು ತ್ವರಿತಗತಿಯ “ಆ’ಕಾರಗಳಿಂದ ಅಲಂಕೃತಗೊಂಡ ರೀತಿ ಅನನ್ಯವಾಗಿತ್ತು. ಸ್ವರ ವಿನಿಕೆಗಳಲ್ಲೂ ನೂತನವಾದ ವಿನ್ಯಾಸಗಳು, “ಪೊರುತ್ತಂ’ಗಳು ತಿಸ್ರ ಪ್ರಯೋಗಗಳು, ಕುರೈಪ್ಪುಗಳೇ ಮುಂತಾಗಿ ಲೆಕ್ಕಾಚಾರಗಳೇ ಪ್ರಧಾನವಾಗಿದ್ದರೂ ಯಾವುದೇ ಉದ್ವೇಗವಿಲ್ಲದೆ, ನಿರಾಳವಾಗಿ ನಸುನಗುತ್ತಲೇ ನಿರೂಪಿಸಿ ಬಿಡುವ ಗಾಯಕಿಯರು ಶ್ರೋತೃಗಳಿಗೆ ಸಂಭ್ರಮಾಶ್ಚರ್ಯ ಉಂಟು ಮಾಡಿದರು.

Advertisement

ಪರ್ಯಾಯವಾಗಿ ಹಾಡಲಾದ ಶುಭ ಪಂತುವರಾಳಿ ರಾಗದ ಆಲಾಪನೆಯ “ಗ್ರಹಭೇದ’ದಲ್ಲಿ, ಹಿತವಾಗಿ ಒಳಹೊಕ್ಕು ಅಷ್ಟೇ ನವಿರಾಗಿ ಹೊರಬಂದ “ಬೃಂದಾವನ ಸಾರಂಗ’ ರಸಗ್ರಾಹಿಗಳ ಮುಕ್ತ ಶ್ಲಾಘನೆಯನ್ನು ಪಡೆಯಿತು. “ತಾನಂ’ ಹಾಡಿದ ನಂತರ ಗಾಯಕಿಯರು “ಸತ್ಯ ಜ್ಞಾನಾನಂದಮ|ಯಂ… ಸರ್ವಂ ವಿಷ್ಣುಮ||ಯಂ” ಎಂಬ ಪಲ್ಲವಿಯನ್ನು ಆದಿ ತಾಳದಲ್ಲಿ ಸುಲಲಿತವಾಗಿ ಪ್ರಸ್ತುತ ಪಡಿಸಿದರು. ಸ್ವರ ವಿನಿಕಗಳಲ್ಲಿ ಮಾಲಿಕೆಯಾಗಿ ಮೂಡಿಬಂದ ಶಕುನ, ಕುಮಾರ ಕಲ್ಯಾಣಿ, ಸಿಂಧು ಭೈರವಿ ರಾಗಗಳು ತಮ್ಮ ಭಾವಗಳನ್ನು ಕೇಳುಗರ ಮನದಲ್ಲಿ ಆಳವಾಗಿ ಮುದ್ರಿಸಿದವು.

ತನಿ ಆವರ್ತನದಲ್ಲಿ ಡೆಲ್ಲಿ ಸಾಯಿರಾಂ (ಮೃದಂಗ) ಮತ್ತು ಚಂದ್ರಶೇಖರ ಶರ್ಮ (ಘಟ) ಪಾಂಡಿತ್ಯ ಪ್ರದರ್ಶಿಸಿದರು. ಭಿನ್ನ ಶೈಲಿಯಲ್ಲಿ ರಾಗ ಸಂಯೋಜಿಸಲಾದ ಖರಹರಪ್ರಿಯ (ನರ ಜನ್ಮ) ಶುದ್ಧ ಧನ್ಯಾಸಿ (ನಾರಾಯಣ) ದೇವರ ನಾಮಗಳು, “ಲಲಿತ’ ರಾಗದ ಭಜನ ಮತ್ತು “ಚಂದ್ರ ಕಂಸ’ ರಾಗದ ಅಭಂಗ್‌ ಲಘು ಪ್ರಸ್ತುತಿಗಳಾಗಿದ್ದು ಗಾಯಕಿಯರ ಮಧುರವಾದ ಧ್ವನಿಯಲ್ಲಿ ಮನೋಜ್ಞವಾಗಿ ಮೂಡಿಬಂದು ರಸಿಕರನ್ನು ಸಂಮೋಹನಗೊಳಿಸಿದವು. ಮುಖ್ಯ ಕಲಾವಿದೆಯರಿಗೆ ಸರಿಸಾಟಿಯಾಗಿ ವಯಲಿನ್‌ ನುಡಿಸಿದ ಎಚ್‌.ಎನ್‌. ಭಾಸ್ಕರ್‌ ಅಭಿನಂದನಾರ್ಹರು.

ಈ ಕಛೇರಿಯಲ್ಲಿ ಎರಡೆರಡು “ಮೈಕ್‌’ಗಳ ಪ್ರಭಾವದಿಂದ ಘಟ ಮತ್ತು ಮೃದಂಗದ ಶಬ್ದ ಹೆಚ್ಚಾಗಿ ಅತಿಯಾದ ಅಬ್ಬರವೆನಿಸಿತು ನೇರ ಪ್ರಸಾರದ ಪರದೆಗಳನ್ನು ವೇದಿಕೆಯ ಎಡ, ಬಲಗಳಲ್ಲಿ ಅಳವಡಿಸಿದ್ದರಾಗುತ್ತಿತ್ತು ಎಂದೆನಿಸಿತು. ಸಭಾಗಾಯನದಲ್ಲಿ ಶ್ರೋತೃಗಳು ಪ್ರೇಕ್ಷಕರೂ ಆಗಿರುತ್ತಾರಷ್ಟೆ? ಕಲಾವಿದೆಯರ ಹಿಂದಿನ ಪರದೆಯಲ್ಲಿ ಎಡೆಬಿಡದೆ ನಡೆಯುತ್ತಿದ್ದ ಬೃಹದಾಕಾರದ ಚಿತ್ರ ಸಂಚಲನಗಳಿಂದಾಗಿ ಸಭಿಕರ ಏಕಾಗ್ರತೆ ತಪ್ಪಿದಂತಾಗಿ ಉಂಟಾದ ಗೊಂದಲ ಋಣಾತ್ಮಕ ಅಂಶವೆನಿಸಿತು.

ಸರೋಜಾ ಆರ್‌. ಆಚಾರ್ಯ 

Advertisement

Udayavani is now on Telegram. Click here to join our channel and stay updated with the latest news.

Next