ಕಳೆದ ಆರು ವರ್ಷಗಳಿಂದ ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಸುರತ್ಕಲ್‌ನ ಚಿರಂತನ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ನಡೆಯುತ್ತಿರುವ ಪಂಚಮದ ಇಂಚರ ವಿವೇಕಸ್ಮತಿ ಹಿಂದುಸ್ಥಾನಿ ಸಂಗೀತ ಮಹೋತ್ಸವ ಸಂಗೀತ ಪ್ರೇಮಿಗಳಿಗೆ ಉತ್ತಮ ಗುಣಮಟ್ಟದ ಸಂಗೀತ ಕಛೇರಿಗಳನ್ನು ನೀಡುತ್ತಾ ಬಂದಿದೆ. ಈ ವರ್ಷದ ಉತ್ಸವವನ್ನು ದ್ವಿದಿನ ಸಂಗೀತ ಕಾರ್ಯಾಗಾರದೊಂದಿಗೆ ಹೊಂದಿಸಿ, ಸಂಜೆ ಅತ್ಯುತ್ತಮವಾದ ನಾಲ್ಕು ಸಂಗೀತ ಕಛೇರಿಗಳನ್ನು ಪ್ರಸ್ತುತಪಡಿಸಿದೆ.
ಹಿಂದುಸ್ಥಾನಿ ಸಂಗೀತದ ಹಲವು ಸೂಕ್ಷ್ಮ ಹಾಗೂ ಉನ್ನತ ಮಟ್ಟದ ವಿಚಾರ ಗಳನ್ನು ಇಲ್ಲಿನ ಸಂಗೀತ ಕಲಾವಿದ ರಿಗೆ ಒದಗಿಸುವ ಉದ್ದೇಶದಿಂದ ಈ ಸಂಗೀತ ಕಮ್ಮಟವನ್ನು ಆಯೋಜಿಸ ಲಾಗಿತ್ತು. ಕಿರಾಣಾ, ಗ್ವಾಲಿಯರ್, ಆಗ್ರಾ ಹಾಗೂ ಜೈಪುರ್ ಘರಾಣಾಗಳ ದಿಗ್ಗಜ ಗುರುಗಳಿಂದ ಪಾಠ ಹೇಳಿಸಿಕೊಂಡ ಹಾಗೂ ಪಂ| ಗಜಾನನ ಜೋಷಿ ಹಾಗೂ ಪಂ| ಬಬನ್‌ರಾವ್ ಹಳದಂಕರ್ ಅವರಿಂದ ಕಲಿತು, ಅವರ ಸ್ವರಚಿತ ಹಾಗೂ ಪಾರಂಪರಿಕ ಬಂದಿಶ್‌ಗಳ ಸಂಗ್ರಹವನ್ನು ಹೊಂದಿರುವ ಹಿರಿಯ ಸಂಗೀತ ಕಲಾವಿದೆ ಮುಂಬಯಿಯ ಪಂ| ಶುಭದಾ ಪರಾಡ್ಕರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಮ್ಮಟದಲ್ಲಿ ಅನೇಕ ಸಮಪ್ರಕೃತಿ ರಾಗ ಗಳಲ್ಲಿನ ಸೂಕ್ಷ್ಮ ವ್ಯತ್ಯಾಸಗಳನ್ನು ತಿಳಿಸಿ ಕೊಡಲಾಯಿತು. ವಿಲಂಬಿತ್ ತಿಲ ವಾಡಾ, ಝೂಮ್ರಾ ಹಾಗೂ ಝಪ್ ತಾಳಗಳಲ್ಲಿ ದೃತ್ ತೀನ್‌ತಾಲ್, ಏಕ್‌ತಾಲ್‌ಗಳಲ್ಲಿ ಸುಂದರ ಬಂದಿಶ್‌ಗಳನ್ನೂ ತರಾನ ಹಾಗೂ ಅವುಗಳನ್ನು ವಿಸ್ತರಿಸುವ ಕ್ರಮಗಳ ಬಗ್ಗೆಯೂ ಮಾಹಿತಿಯನ್ನು ಒದಗಿಸಿದರು. ಗಿಳಿಗುಂಡಿಯ ಸ್ವರ ಸಂವೇದನಾ ಪ್ರತಿಷ್ಠಾನದ ಸಹಯೋಗ ದೊಂದಿಗೆ ನಡೆದ ಈ ಕಮ್ಮಟದಲ್ಲಿ ದಕ್ಷಿಣಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಯ 25 ಕಲಾವಿದರು ಪಾಲ್ಗೊಂಡರು.
ಮೊದಲನೆಯ ದಿನ ಸಂಜೆ ಸಿತಾರ್ ಕಲಾವಿದ ಉಸ್ತಾದ್ ರಫೀಕ್‌ಖಾನ್ ಅವರ ಸಿತಾರ್ ವಾದನ ನಡೆಯಿತು. ರಾಗ್ ಜಿಂಜೋಟಿಯನ್ನು ಮಧ್ಯಲಯ ರೂಪಕ ತಾಳ ಹಾಗೂ ದೃತ್ ತೀನ್‌ತಾಳದಲ್ಲಿ ನುಡಿಸಿದರು. ಬಳಿಕ ವರ್ಷ ಋತುವಿಗೆ ಸಂಬಂಧಿಸಿದ ಮಲ್ಹಾರ್ ರಾಗಗಳ ರಾಗ ಮಾಲಾ ನುಡಿಸಿ ರಂಜಿಸಿದರು. ಈ ಪ್ರಸ್ತುತಿಯೊಂದಿಗೆ ಧುಲಿಯಾ ಮಲ್ಹಾರ್, ಸೂರ್‌ದಾಸೀ ಮಲ್ಹಾರ್, ರಾಮ್‌ದಾಸೀ ಮಲ್ಹಾರ್, ಗೌಡ್‌ಮಲ್ಹಾರ್ ಹಾಗೂ ಮಿಯಾಮಲ್ಹಾರ್ ರಾಗಗಳನ್ನು ಪರಿಚಯಿಸಿದರು. ಧಾರವಾಡದ ಡಾ| ಉದಯ್ ಕುಲಕರ್ಣಿ ಸಮರ್ಥ ತಬಲಾ ಸಾಥ್ ನೀಡಿದರು.
ಅನಂತರದ ಕಛೇರಿಯಲ್ಲಿ ಬೆಂಗಳೂರಿನ ಹಿರಿಯ ಗಾಯಕ ಪಂ| ಪರಮೇಶ್ವರ ಹೆಗಡೆಯವರು ಶುದ್ಧಕಲ್ಯಾಣ್ ರಾಗವನ್ನು ವಿಲಂಬಿತ್ ಏಕ್‌ತಾಲ್‌ನ ಬಂದಿಶ್ ಬೋಲಾನ ಲಾಗೆ ಹಾಗೂ ದೃತ್ ತೀನ್‌ತಾಲ್‌ನ ಮಂದರ ಬಾಜೋ ಹಾಗೂ ಔಡವ ಬಾಗೇಶ್ರೀ ಎಂಬ ಅಪರೂಪದ ರಾಗದಲ್ಲಿ ಮಧ್ಯಲಯ ಝಪ್‌ತಾಲ್‌ನ ಶರದ ರಜನೀ ರುಚಿರ ಹಾಗೂ ದೃತ್ ಏಕ್‌ತಾಲ್‌ನಲ್ಲಿ ಬಿನತೀ ಕರತ ತೋರೆ ಎಂಬ ಸುಂದರ ಬಂದಿಶ್‌ಗಳನ್ನು ಪ್ರಸ್ತುತ ಪಡಿಸಿದರು. ಭೈರವಿಯಲ್ಲಿ ನಂದ ನಂದನ ಪಾಹೀ ಎಂಬ ಒಂದು ಭಜನ್ ಪ್ರಸ್ತುತಪಡಿಸಿ ತಮ್ಮ ಕಛೇರಿ ಕೊನೆಗೊಳಿಸಿದರು. ಇವರಿಗೆ ಸಂವಾದಿನಿಯಲ್ಲಿ ಧಾರವಾಡದ ಗುರುಪ್ರಸಾದ್ ಹೆಗಡೆ ಹಾಗೂ ತಬಲಾದಲ್ಲಿ ಭಾರವಿ ದೇರಾಜೆ, ತಂಬೂರ ಹಾಗೂ ಮಂಜೀರಗಳಲ್ಲಿ ಚೈತನ್ಯ ಭಟ್ ಹಾಗೂ ಸತೀಶ್ ಕಾಮತ್ ಸಹಕರಿಸಿದರು.
ಎರಡನೆಯ ದಿನದ ಪ್ರಾರಂಭಿಕ ಕಛೇರಿ ಯನ್ನು ನಾಗರಾಜ್ ಹೆಗಡೆ ಶಿರನಾಲ ತನ್ನ ಬಾನ್ಸುರಿ ವಾದನದೊಂದಿಗೆ ಆರಂಭಿಸಿದರು. ಸಂಜೆಯ ಸುಂದರ ರಾಗ ಮುಲ್ತಾನಿಯನ್ನು ವಿಲಂಬಿತ್ ಝಪ್ ತಾಲ್ ಹಾಗೂ ದೃತ್ ತೀನ್‌ತಾಳಗಳಲ್ಲೂ ಅನಂತರ ಮೇಘ… ರಾಗ ವನ್ನು ಮಧ್ಯ ಲಯ್ ತೀನ್ ತಾಲ್, ದೃತ್ ಆಢಾ ಚೌತಾಲ್ ಹಾಗೂ ಅತಿದೃತ್ ತೀನ್ ತಾಲ ಗಳಲ್ಲಿ ಪ್ರಸ್ತುತಪಡಿಸಿ ಸಂಗೀತ ರಸಿಕರ ಮನವನ್ನು ಗೆದ್ದರು. ಇವರಿಗೆ ಬೆಂಗಳೂರಿನ ಗುರು ಮೂರ್ತಿ ವೈದ್ಯ ಅತ್ಯುತ್ತಮವಾಗಿ ತಬಲಾ ಸಾಥ್ ನೀಡಿದರು.
ಕೊನೆಯ ಕಛೇರಿ ನಡೆಸಿಕೊಟ್ಟವರು ಮುಂಬೈಯ ಹಿರಿಯ ಕಲಾವಿದೆ ಪಂ| ಶುಭದಾ ಪರಾಡ್ಕರ್. ಮಿಯಾ ಮಲ್ಹಾರ್ ರಾಗದಲ್ಲಿ ವಿಲಂಬಿತ್ ತಿಲವಾಡ ತಾಳದ ರೇ ಅತ ಧೂಮ ಎಂಬ ಬಂದಿಶ್ ಹಾಗೂ ದೃತ್ ತೀನ್‌ತಾಲ್‌ನಲ್ಲಿ ಆಲಿರೀ ಮೇರೋ ನೈನಾ ಬರಸತ ಎಂಬ ಬಂದಿಶ್‌ಗಳೊಂದಿಗೆ ಪ್ರಸ್ತುತ ಪಡಿಸಿ ಅನಂತರ ಅಪರೂಪದ ರಾಗ ಸಾವನಿಯಲ್ಲಿ ಝಪ್‌ತಾಲ್‌ದ ಹರ ಹರ ದಿನಕೆ ಹಾಗೂ ತೀನ್‌ತಾಲ್‌ನ ಮಾನತ ನಾಹೀ ಬಂದಿಶ್ ಪ್ರಸ್ತುತಪಡಿಸಿದರು. ಕೊನೆಗೆ ಕೈಸೇ ಬಲಾಯೀ ರೇ ಕನ್ಹಯ್ಯ ಎಂಬ ಕೃಷ್ಣನನ್ನು ಕುರಿತ ರಚನೆಯನ್ನು ಭೈರವಿಯಲ್ಲಿ ಹಾಡಿದರು. ಇವರಿಗೆ ಗುರುಮೂರ್ತಿ ವೈದ್ಯ ತಬಲಾದಲ್ಲೂ ಗುರುಪ್ರಸಾದ್ ಹೆಗಡೆೆ ಸಂವಾದಿನಿ ಯಲ್ಲೂ ಉತ್ತಮ ಸಾಥ್ ನೀಡಿದರು. ರಶ್ಮಿ ಹಾಗೂ ಉಮಾ ಹೆಗಡೆ ತಾನ್ಪುರ ಹಾಗೂ ಸಹ ಗಾಯನದ ಬೆಂಬಲ ನೀಡಿದರು.
ಮುರಳೀಧರ ಕಾಯಾರ