ಕನ್ನಡದ ಹಲವು ಖಾಸಗಿ ವಾಹಿನಿಗಳಲ್ಲಿ ಸಂಗೀತಕ್ಕೆ ಸಂಬಂಧಿಸಿ ದಂತೆ ಹತ್ತಾರು ರಿಯಾಲಿಟಿ ಶೋಗಳು ವಾರಾಂತ್ಯದಲ್ಲಿ ಪ್ರಸಾರವಾಗುತ್ತಿರುವುದು ಗೊತ್ತೇ ಇದೆ. ಈಗ ಕನ್ನಡದ ಡಿ.ಡಿ ಚಂದನ ವಾಹಿನಿ ಕೂಡ ಖಾಸಗಿ ವಾಹಿನಿಗಳಿಗೆ ಪೈಪೋಟಿ ನೀಡುವಂಥ, ಜನಮನ ಸೆಳೆಯುವಂಥ “ಗಾನ ಚಂದನ’ ಎನ್ನುವ ಮ್ಯೂಸಿಕ್ ರಿಯಾಲಿಟಿ ಶೋವನ್ನು ಆರಂಭಿಸಿದೆ.
ಖ್ಯಾತ ಹಿನ್ನೆಲೆ ಗಾಯಕಿ ಬಿ.ಆರ್ ಛಾಯಾ ಮತ್ತು ಹಿರಿಯ ಸಂಗೀತ ನಿರ್ದೇಶಕ, ಚಿತ್ರ ಸಾಹಿತಿ ವಿ. ಮನೋಹರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ “ಗಾನ ಚಂದನ’ ರಿಯಾಲಿಟಿ ಶೋ ಕಾರ್ಯಕ್ರಮದ ಮೆಗಾ ಅಡಿಷನ್ ಸುತ್ತು ಇತ್ತೀಚೆಗೆ ಪೂರ್ಣಗೊಂಡಿದ್ದು, ಇಂದಿನಿಂದ (ಗುರುವಾರದಿಂದ) ಗಾಯಕ, ಗಾಯಕಿಯರ ನಡುವೆ ಸ್ಪರ್ಧೆ ಏರ್ಪಡಲಿದೆ.
ಇನ್ನು ಬಿ.ಆರ್ ಛಾಯಾ ಅವರ ಪತಿ ಪದ್ಮಪಾಣಿ ಈಗಾಗಲೇ ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿ ಸಂಚರಿಸಿ, ಪ್ರತಿ ಜಿಲ್ಲೆಯಲ್ಲೂ 18 ರಿಂದ 35 ವಯಸ್ಸಿನ ಸುಮಾರು 30 ರಿಂದ 40 ಪ್ರತಿಭೆಗಳನ್ನು ಆಯ್ಕೆ ಮಾಡಿದ್ದಾರೆ. ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲು ಇತ್ತೀಚೆಗೆ ಗಾಯಕಿ ಬಿ.ಆರ್ ಛಾಯಾ, ವಿ. ಮನೋಹರ್ ಮತ್ತು ಪದ್ಮಪಾಣಿ ಮಾಧ್ಯಮಗಳ ಮುಂದೆ ಬಂದಿದ್ದು, ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಮೊದಲಿಗೆ “ಗಾನ ಚಂದನ’ ಆಡಿಷನ್ ಬಗ್ಗೆ ಮಾತನಾಡಿದ ಬಿ.ಆರ್ ಛಾಯಾ, “ಈಗಾಗಲೇ ಆಯ್ಕೆ ಮಾಡಿರುವ ಸ್ಪರ್ಧಿಗಳನ್ನು ಬೇರೆ ಬೇರೆ ಸುತ್ತಿನಲ್ಲಿ ಆಡಿಷನ್ ಮಾಡಲಾಗಿದ್ದು, ಅಂತಿಮ ಸುತ್ತಿನಲ್ಲಿ 79 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ ರಿಯಾಲಿಟಿ ಶೋನಲ್ಲಿ “ಆತ್ಮಾವಲೋಕನ’ ಹಾಗೂ “ಉಳಿದವರು ಕಂಡಂತೆ’ ಎಂಬ ಎರಡು ರೀತಿಯ ಅಂಕ ನೀಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಬೇರೆ ವಾಹಿನಿಗಳಲ್ಲಿ ನಡೆಯುವಂತೆ ಮತ ಹಾಕುವ ಅವಕಾಶ ಇರುವುದಿಲ್ಲ. ಸಾಧಾರಣವಾಗಿ ಹಾಡುವವರನ್ನೂ, ಚೆನ್ನಾಗಿ ಹಾಡುವಂತೆ ಮಾಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶ’ ಎಂದರು. ಕಾರ್ಯಕ್ರಮದ ಬಗ್ಗೆ ಮಾತನಾಡಿದ ಸಂಗೀತ ನಿರ್ದೇಶಕ ವಿ.ಮನೋಹರ್, “ಆತ್ಮಾವಲೋಕನ’ದಲ್ಲಿ ಗಾಯಕರು ತಾವು ತಪ್ಪಾಗಿ ಹಾಡಿದ ಸಾಲು ಅಥವಾ ಚರಣವನ್ನು ಸರಿಯಾದ ಧಾಟಿಯಲ್ಲಿ ಹಾಡಿ ತೋರಿಸಲು ಅವಕಾಶ ಮಾಡಿಕೊಡಲಾಗುವುದು.
“ಉಳಿದವರು ಕಂಡಂತೆ’ ಎನ್ನುವ ವ್ಯವಸ್ಥೆಯಲ್ಲಿ ಅಂಕವನ್ನು ಸಹಸ್ಪರ್ಧಿಗಳು ಕೊಡುತ್ತಾರೆ. ಸರ್ಕಾರದ ಕಾರ್ಯಕ್ರಮವಾಗಿದ್ದರಿಂದ ವಿಜೇತರಿಗೆ ಒಂದು ಲಕ್ಷ ಬಹುಮಾನ ನೀಡಲಾಗುವುದು. ಇದಲ್ಲದೇ ಮಹಿಳೆ, ಪುರುಷರಿಗೆ ಪ್ರತ್ಯೇಕವಾಗಿ ಪ್ರಶಸ್ತಿ ಕೊಡಬೇಕೆಂಬ ಚಿಂತನೆ ಇದೆ’ ಎಂದು ಮಾಹಿತಿ ನೀಡಿದರು.
ಅಂದಹಾಗೆ, ಪ್ರತಿ ಶನಿವಾರ ಮತ್ತು ಭಾನುವಾರದಂದು ಡಿ.ಡಿ ಚಂದನದಲ್ಲಿ ರಾತ್ರಿ 7.30 ರಿಂದ 8.15ರ ವರೆಗೆ “ಗಾನ ಚಂದನ’ ರಿಯಾಲಿಟಿ ಶೋ ಪ್ರಸಾರವಾಗುತ್ತಿದ್ದು, ಮುಂದಿನ ದಿನಗಳಲ್ಲಿ ವಿನೂತನ ಪ್ರಯೋಗದ ಮೂಲಕ ವೀಕ್ಷಕರ ಮುಂದೆ ಬರುತ್ತಿರುವ “ಗಾನ ಚಂದನ’ ಎಷ್ಟರ ಮಟ್ಟಿಗೆ ನೋಡುಗರ ಮನಗೆಲ್ಲಲಿದೆ ಅನ್ನೋದು ಕಾದು ನೋಡಬೇಕು.