Advertisement

ಆಟಕ್ಕುಂಟು ಲೆಕ್ಕಕ್ಕಿಲ್ಲದ ಭದ್ರತೆ

12:35 AM Apr 23, 2019 | Lakshmi GovindaRaju |

ಬೆಂಗಳೂರು: ದ್ವೀಪರಾಷ್ಟ್ರ ಶ್ರೀಲಂಕದ ರಾಜಧಾನಿ ಕೊಲೊಂಬೋ ಸೇರಿದಂತೆ ವಿವಿಧೆಡೆ ಭಾನುವಾರ ಉಗ್ರರು ಸರಣಿ ಬಾಂಬ್‌ ಸ್ಫೋಟಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಜನನಿಬಿಡ ಪ್ರದೇಶಗಳು ಎಷ್ಟು ಸುರಕ್ಷಿತವಾಗಿವೆ ಎನ್ನುವ ಪ್ರಶ್ನೆ ಎದುರಾಗಿದೆ. ಈ ಕುರಿತು ಉದಯವಾಣಿ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಹಲವು ಅಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.

Advertisement

ಬೆಂಗಳೂರಿನ ಹೃದಯ ಭಾಗ, ಲಕ್ಷಾಂತರ ಸಾರ್ವಜನಿಕರು ಬಂದು ಹೋಗುವ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ನಿಲ್ದಾಣ, ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್‌ ನಿಲ್ದಾಣ, ಮೆಟ್ರೋ ನಿಲ್ದಾಣಗಳು ಮತ್ತು ಶಾಪಿಂಗ್‌ ಮಾಲ್‌ಗ‌ಳಲ್ಲಿ ಭದ್ರತೆಯ ಕೊರತೆ ಕಂಡು ಬಂದಿದೆ.

ಈ ಪ್ರದೇಶಗಳಲ್ಲಿ ಪ್ರತಿ ನಿತ್ಯ ಲಕ್ಷಾಂತರ ಜನ ಸಂಚಾರ ಮಾಡುವುದರಿಂದ ಇಲ್ಲೆಲ್ಲಾ, ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಆದರೆ, ಇಲ್ಲಿರುವ ಸುರಕ್ಷತಾ ಸಾಧನಗಳನ್ನು ಯಾರೊಬ್ಬರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಮೆಟಲ್‌ ಡಿಟೆಕ್ಟರ್‌ಗಳಿದ್ದರೂ ಜನರು ಅವುಗಳ ಮೂಲಕ ಹಾದು ಹೋಗುವುದಿಲ್ಲ. ಪಕ್ಕದಲ್ಲಿರುವ ಪೊಲೀಸರು ಅಥವಾ ಭದ್ರತಾ ಸಿಬ್ಬಂದಿ ಅದನ್ನು ನೋಡಿಯೂ ನೋಡದವರಂತೆ ಬೇಜವಾಬ್ದಾರಿ ತೋರುತ್ತಾರೆ.

“ಪೀಕ್‌ಅವರ್‌’ ವೇಳೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ನೂಕುನುಗ್ಗಲು ಇರುತ್ತದೆ. ಆದರೆ, ಕೆಲವೇ ಕೆಲವರು ಮೆಟಲ್‌ ಡಿಟೆಕ್ಟರ್‌ ಮೂಲಕ ಹಾದು ಹೋಗುತ್ತಾರೆ. ಬಹುತೇಕರು ಅದರ ಪಕ್ಕದಲ್ಲಿರುವ ಸ್ಥಳದ ಮೂಲಕ ಸಾಗುತ್ತಾರೆ. ಆದರೆ, ಈ ಸಮಯದಲ್ಲಿ ಸಿಬ್ಬಂದಿ ಅತ್ತಕಡೆ ಗಮನ ಹರಿಸುವುದೇ ಇಲ್ಲ. ಮುಖ್ಯವಾಗಿ ಈ ಡಿಟೆಕ್ಟರ್‌ಗಳು ಕೆಟ್ಟು ನಿಂತು ಅದೆಷ್ಟು ಕಾಲವಾಗಿದೆಯೋ ಗೊತ್ತಿಲ್ಲ!

ಮೆಟ್ರೋ ನಿಲ್ದಾಣಗಳಲ್ಲಿ ಭದ್ರತೆಗೆ ಸಿಬ್ಬಂದಿಗಳನ್ನು ನೇಮಿಸಲಾಗಿದೆಯಾದರೂ, ನಿಲ್ದಾಣದ ಮೇಲೆ ದಾಳಿ ನಡೆದರೆ ಹೇಗೆ ಕಾರ್ಯಾಚರಣೆ ನಡೆಸಬೇಕು ಎಂಬ ಬಗ್ಗೆ ಅವರಿಗೆ ಯಾವುದೇ ತರಬೇತಿ ನೀಡಿಲ್ಲ ಎಂಬ ಅವಿಷಯ ಸಿಬ್ಬಂದಿ ಜತೆ ಮಾತನಾಡಿದಾಗ ತಿಳಿದು ಬಂದಿತು. ಉಗ್ರರು ನಗರದ ಇಂತಹ ಸೂಕ್ಷ್ಮ ಪ್ರದೇಶಗಳಿಗೆ ನುಸುಳಿದರೆ ಅವರನ್ನು ನಿಯಂತ್ರಿಸುವ, ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಕಳುಹಿಸುವ ಬಗ್ಗೆ ಯಾವುದೇ ಅಣುಕು ಪ್ರದರ್ಶನಗಳು ಆದ ಉದಾಹರಣೆ ಇಲ್ಲ.

Advertisement

ಮೆಟಲ್‌ ಡಿಟೆಕ್ಟರ್‌ಗಳಿಗೆ ಸಂಪರ್ಕವೇ ಇಲ್ಲ: ರಿಯಾಲಿಟಿ ಚೆಕ್‌ ವೇಳೆ ಅತ್ಯಂತ ಆತಂಕಕಾರಿ ಅಂಶವೊಂದು “ಉದಯವಾಣಿ’ ಗಮನಕ್ಕೆ ಬಂದಿದೆ. ಅದೇನೆಂದರೆ, ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಅಕ್ಷರಷಃ ನಾಮ್‌ಕೇವಾಸ್ತೆ ಮೆಟಲ್‌ ಡಿಟೆಕ್ಟರ್‌ಗಳನ್ನು ಅಳವಡಿಸಲಾಗಿದೆ. ಕ್ವಿಂಟಾಲ್‌ ತೂಕದ ಬಾಂಬ್‌ ಅಥವಾ ಸ್ಫೋಟಕವನ್ನು ಅವುಗಳ ಮೂಲಕ ಕೊಂಡೊಯ್ದರೂ ಅವು ಕಂಡು ಹಿಡಿಯುವುದಿಲ್ಲ.

ನೀವು ಎಷ್ಟೇ ಬಾರಿ ಅವುಗಳ ಮೂಲಕ ಸುತ್ತಾಡಿದರೂ ಬೀಪ್‌ ಸೌಂಡ್‌ ಕೇಳಿಸುವುದಿಲ್ಲ. ಕಾರಣ, ಅಲ್ಲಿರುವ ಒಂದು ಮೆಟಲ್‌ ಡಿಟೆಕ್ಟರ್‌ಗೆ ವೈರ್‌ಗಳ ಸಂಪರ್ಕವೇ ಇಲ್ಲ. ಮತ್ತೂಂದು ಕೆಟ್ಟು ನಿಂತಿದೆ. ಆದರೂ, ಅವುಗಳನ್ನು ಬದಲಿಸಿ ಹೊಸ ಮೆಟಲ್‌ ಡಿಟೆಕ್ಟರ್‌ಗಳನ್ನು ತಂದಿರಿಸುವ ಕಾರ್ಯವನ್ನು ಕೆಎಸ್‌ಆರ್‌ಟಿಸಿ ಆಗಲಿ, ಪೊಲೀಸ್‌ ಇಲಾಖೆಯಾಗಲಿ ಮಾಡಿಲ್ಲ.

ನಾವು ಮನವಿ ಮಾಡಿದ್ದೆವು : ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ನಾಮ್‌ಕೆವಾಸ್ತೆಗೆ ಇರಿಸಿರುವ ಮಟಲ್‌ ಡಿಟೆಕ್ಟರ್‌ಗಳ ಕುರಿತು ಅಲ್ಲಿನ ಸಿಬ್ಬಂದಿಯನ್ನು ಪ್ರಶ್ನಿಸಿದರೆ, “ಹಲವು ಬಾರಿ ಇದರ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಯಾರೂ ಸ್ಪಂದಿಸಿಲ್ಲ. ಸಾರ್ವಜನಿಕರು ನಮ್ಮನ್ನು ನೋಡಿ ಅಪಹಾಸ್ಯ ಮಾಡಿದ ಉದಾಹರಣೆಗಳಿವೆ. ನಮ್ಮ ಸಮಸ್ಯೆ ಯಾರಿಗೆ ಹೇಳ್ಳೋಣ’ ಎಂದು ಪ್ರತಿಕ್ರಿಯಿಸಿದರು.

ಒಳಗೆ ಒಕೆ, ಹೊರಗಿಲ್ಲ ಯಾಕೆ?: ನಗರದ ಮೆಟ್ರೋ ನಿಲ್ದಾಣ ಮತ್ತು ಕೆಂಪೇಗೌಡ ಮತ್ತು ಯಶವಂತ ಪುರದ ರೈಲ್ವೆ ನಿಲ್ದಾಣಗಳು ಹೆಚ್ಚು ಅಸುರಕ್ಷಿತ ಎನ್ನುವುದು ರಿಯಾಲಿಟಿ ಚೆಕ್‌ನಲ್ಲಿ ಕಂಡುಬಂತು. ಈ ನಿಲ್ದಾಣಗಳಲ್ಲಿ ಸಾರ್ವಜನಿಕರು ಒಳಗೆ ಬರುವಾಗ ಭದ್ರತಾ ಸಿಬ್ಬಂದಿ ಪರಿಶೀಲಿಸುತ್ತಾರೆ. ಆದರೆ, ಹೊರಗೆ ಹೋಗುವು ಮಾರ್ಗಗಳಲ್ಲಿ ಭದ್ರತಾ ಸಿಬ್ಬಂದಿಯಾಗಲಿ, ಸಿಸಿಟಿವಿ ಕ್ಯಾಮರಾಗಳಾಗಲಿ ಇಲ್ಲ. ರೈಲ್ವೆ ಹಳಿಗಳ ಮೂಲಕವೂ ಯಾರಾದರು ನುಸುಳುವ ಸಾಧ್ಯತೆ ಇದೆ, ಮೆಟ್ರೋ ನಿಲ್ದಾಣಗಳದ್ದೂ ಇದೇ ಕಥೆ.

ಬೆಂಗಳೂರಿಗೆ ಈಗ ನೀಡಿರುವ ಭದ್ರತೆ ತುಂಬಾ ಕಡಿಮೆ. ಕೆಲವು ಕಡೆ ಹೆಸರಿಗಷ್ಟೇ ಸಿಬ್ಬಂದಿಯನ್ನು ನೇಮಿಸಲಾಗಿದೆ. ಅವಘಡಗಳು ಸಂಭವಿಸಿದ ನಂತರ ಎಚ್ಚೆತ್ತುಕೊಳ್ಳುವುದಕ್ಕಿಂತ ಭದ್ರತೆ ಹೆಚ್ಚಿಸುವುದು ಒಳ್ಳೆಯದು.
-ನಾಗೇಶ್‌ ಪಾಟಾಲ್‌, ಉದ್ಯೋಗಿ

ಸಮಸ್ಯೆಗಳಿಗೆಲ್ಲ ಅಧಿಕಾರಿಗಳನ್ನೇ ಹೊಣೆ ಮಾಡುವುದು ಸರಿಯಲ್ಲ. ಅನುಮನಾಸ್ಪದ ವ್ಯಕ್ತಿಗಳು, ವಸ್ತುಗಳು ಕಂಡುಬಂದ ಕೂಡಲೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಬೇಕು. “ನಮಗ್ಯಾಕೆ’ ಎನ್ನುವ ಧೋರಣೆ ಹೋಗಬೇಕು.
-ಲಕ್ಷ್ಮೀ, ಗೃಹಿಣಿ

ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಯಾವುದೇ ದುರಂತಗಳು ನಡೆದಿಲ್ಲ. ಈ ಹಿಂದೆಗಿಂತ ಈಗ ಭದ್ರತೆ ಹೆಚ್ಚಾಗಿದೆ. ಇದೇ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗಬೇಕು.
-ಮಂತೇಶ್‌ ಜಿಲಾದರ್‌, ಉದ್ಯೋಗಿ

ಇಂತಹ ಪ್ರಕರಣಗಳು ನಡೆದಾಗಲೆಲ್ಲ ಭದ್ರತೆ ವಿಷಯ ಮುನ್ನೆಲೆಗೆ ಬರುತ್ತದೆ. ಚರ್ಚೆ ನಡೆಯುತ್ತದೆ. ಆದರೆ, ಯಾವುದೂ ಕಾರ್ಯರೂಪಕ್ಕೆ ಬರುವುದಿಲ್ಲ. ಅವಘಡಗಳು ನಡೆದಾಗ ಮಾತ್ರ ನಮ್ಮ ವ್ಯವಸ್ಥೆ ಎಚ್ಚೆತ್ತುಕೊಳ್ಳುತ್ತದೆ.
-ಹರ್ಷ, ಉದ್ಯೋಗಿ

ಭದ್ರತೆ ಹೇಳಿಕೊಳ್ಳುವಷ್ಟು ಸುರಕ್ಷಿತವಾಗಿಲ್ಲ. ಹೆಚ್ಚು ಜನರಿರುವ ಪ್ರದೇಶಗಳಲ್ಲಿ ನಡೆದಾಡುವಾಗ ಆತಂಕವಾಗುತ್ತದೆ. ಜನನಿಬಿಡ ಪ್ರದೇಶಗಳಲ್ಲಿ ಇನ್ನಷ್ಟು ಭದ್ರತೆಯನ್ನು ಹೆಚ್ಚಿಸಬೇಕಾಗಿದೆ.
-ಪ್ರಶಾಂತ್‌, ವಿದ್ಯಾರ್ಥಿ

Advertisement

Udayavani is now on Telegram. Click here to join our channel and stay updated with the latest news.

Next