ಮೇಲಿನ ಶೀರ್ಷಿಕೆ ನೋಡಿ ನಾನು ಯಕ್ಷಗಾನದ ಬಗ್ಗೆ ಹೇಳುತ್ತಿದ್ದೇನೆ ಅಂದುಕೊಂಡಿರಾ! ಇಲ್ಲ ಇಲ್ಲ. ನಾನು ಹೇಳುತ್ತಿರುವುದು ಬಾಲ್ಯದ ಆಟಗಳ ಬಗ್ಗೆ.
ಬಾಲ್ಯ ಅಂದರೇನೆ ಹಾಗೆ. ಸಣ್ಣ ವಯಸ್ಸಿನ ಸಿಹಿನೆನಪುಗಳನ್ನು ಹೊತ್ತಿರುವ ಆಗರ. ಆ ಬಾಲ್ಯದ ನಮ್ಮ ಆಟ-ಪಾಠಗಳು ಎಂದೆಂದಿಗೂ ಮರೆಯಲು ಅಸಾಧ್ಯ. ಅದರಲ್ಲೂ ಬಾಲ್ಯದಲ್ಲಿ ಪಾಠಗಳಿಗಿಂತ ಆಟಗಳಿಗೆ ಪ್ರಾಮುಖ್ಯ ಜಾಸ್ತಿ. ಅಬ್ಟಾ! ಅದನ್ನು ನೆನಪಿಸಿಕೊಂಡರೆ ಆಗುವ ಖುಷಿ ಅಷ್ಟಿಷ್ಟಲ್ಲ. ಅದರಲ್ಲೂ ಅಂದಿನ ಕಾಲದ ಮಕ್ಕಳು ಆಡುತ್ತಿದ್ದ ಕ್ರೀಡೆಗಳು ಬಹಳ ಕುತೂಹಲಕಾರಿ. ಲಗೋರಿ, ಮಾರಾಮಾರಿ, ಮರಕೋತಿ ಆಟ, ಕುಂಟೆಬಿಲ್ಲೆ ಹೀಗೆ ಹತ್ತುಹಲವು
ಆಟಗಳನ್ನು ಆಡುತ್ತಿದ್ದರು. ಆ ಗುಂಪಿನಲ್ಲಿ ನಾನು ಇದ್ದವಳು. ಪ್ರಾಥಮಿಕ ಶಾಲೆಯಲ್ಲಿರುವಾಗ ಬೆಲ್ ರಿಂಗಣಿಸಿದರೆ ಸಾಕು, ಓಡಿಹೋಗಿ ಮೈದಾನ ದಲ್ಲಿ ನಮ್ಮ ಆಟ ಶುರು. ಲಗೋರಿಯಲ್ಲಿ ಹೊಡೆಯುವ ಬಾಲು, ಮಾರಾಮಾರಿ ಯಲ್ಲಿ ಚೆಂಡನ್ನು ಹೊಡೆದರೆ ಎಲ್ಲಿ ನೋವಾಗುತ್ತದೇನೋ ಎಂಬ ಕಾಳಜಿಯಿಂದ ಪೇಪರಿನ ಉಂಡೆ ಮಾಡಿ ಅದಕ್ಕೆ ಪ್ಲಾಸ್ಟಿಕ್ ಕಟ್ಟಿ ಅದನ್ನೇ ಚೆಂಡಿನಂತೆ ಮಾಡಿ ಒಬ್ಬರ ಮೇಲೊಬ್ಬರು ಬಿಸಾಕುತ್ತಿದ್ದೆವು. ಇನ್ನು ಕುಂಟೇಬಿಲ್ಲೆಯಂತೂ ನಾವು ಆಡಲು ಕಾಯುತ್ತಿದ್ದ ಆಟ. ಹುಡುಗಿಯರಿಗಂತೂ ಅಚ್ಚುಮೆಚ್ಚಿನ ಆಟ. ನಾಲ್ಕು ಗೆರೆ, ಐದು ಗೆರೆ, ಆರು ಗೆರೆ ಹೀಗೆ ಹತ್ತುಹಲವು ವಿಧಗಳು. ಹೀಗೆ ಅಂದಿನ ಆಟಗಳು ಬಹಳ ಖುಷಿ ಕೊಡುತ್ತಿದ್ದವುಗಳು. ಈಗಲೂ ಕೆಲವು ಗ್ರಾಮೀಣ ಪ್ರದೇಶದಲ್ಲಿ ಈ ಆಟಗಳು ಇನ್ನೂ ಜೀವಂತವಾಗಿವೆ.
ಚೈತ್ರಾ,
ದ್ವಿತೀಯ ವಾಣಿಜ್ಯ ವಿಭಾಗ, ಎಸ್‌ಡಿಪಿಟಿ ಪ್ರಥಮ ದರ್ಜೆ ಕಾಲೇಜು, ಕಟೀಲು