ಕೋಲಾರ: ಕೋವಿಡ್-19 ಕಾಲಘಟ್ಟದಲ್ಲಿಯೂ ಐದಾರು ತಿಂಗಳುಗಳಿಂದ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಅಂದರ್ ಬಾಹರ್ ಜೂಜು ನಿರಾಂತಕವಾಗಿ ಎಗ್ಗಿಲ್ಲದೆ ನಡೆಯುತ್ತಿದ್ದು, ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.
ಪ್ರತಿ ನಿತ್ಯ ನೂರಾರು ಮಂದಿ ಒಂದೆಡೆ ಸೇರಿ ಎರಡು ಪಾಳಿಗಳಲ್ಲಿ ಜೂಜು ಕೇಂದ್ರಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದು, ನಿತ್ಯವೂ 50 ಲಕ್ಷ ರೂ.ಗಳಿಂದ ಒಂದು ಕೋಟಿ ರೂ.ವರೆಗೂ ವಹಿವಾಟು ನಡೆಯುತ್ತಿದೆ ಎನ್ನಲಾಗುತ್ತಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಲಕ್ಷ್ಮೀಪುರದ ವ್ಯಕ್ತಿಗಳಿಬ್ಬರು ಆವಲದೊಡ್ಡಿ ಎಂಬ ಗ್ರಾಮದಲ್ಲಿ ಅನಧಿಕೃತವಾಗಿ ಈ ಜೂಜು ಕೇಂದ್ರವನ್ನು ನಡೆಸುತ್ತಿದ್ದು, ಇದು ಐದಾರು ತಿಂಗಳುಗಳಿಂದ ಲಾಕ್‌ಡೌನ್ ಸೀಲ್‌ಡೌನ್ ಹಂಗಿಲ್ಲದೆ ಬೆಳಿಗ್ಗೆ 9 ರಿಂದ ಮಧ್ಯಾಹ್ನ ಒಂದರವರೆಗೂ ನಡೆಯುತ್ತಿದೆ.
ಮಧ್ಯಾಹ್ನ ಒಂದರಿಂದ ಸಂಜೆ 5ರವರೆಗೂ ಇದೇ ಶ್ರೀನಿವಾಸಪುರದ ತಾಲೂಕಿನ ಪುಂಗನೂರು ಕ್ರಾಸ್ ಬಳಿಯ ಆವಲಕೊಪ್ಪ ಗ್ರಾಮದಲ್ಲಿ ಕಣ್ಣೂರು ಆಲಂಬಗಿರಿ ವ್ಯಕ್ತಿಯೊಬ್ಬರು ಇಲ್ಲಿ ನಡೆಸುವ ಜೂಜು ಕೇಂದ್ರದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ಕೋಲಾರ, ಬೆಂಗಳೂರು, ಶ್ರೀನಿವಾಸಪುರ, ಮುಳಬಾಗಿಲು ಹಾಗೂ ಆಂಧ್ರ ಪ್ರದೇಶದ ಮದನಪಲ್ಲಿ ಇತರೆರೆಡೆಗಳಿಂದ ನೂರಾರು ಮಂದಿ ಈ ಜೂಜು ಕೇಂದ್ರಗಳಲ್ಲಿ ಜಮಾವಣೆಗೊಂಡು ಲಕ್ಷಾಂತರ ರೂಪಾಯಿಗಳನ್ನು ಪಣಕ್ಕಿಟ್ಟು ಅಂದರ್ ಬಾಹರ್ ಆಡುತ್ತಿದ್ದಾರೆಂದು ಹೇಳಲಾಗುತ್ತಿದೆ.
ಈ ಜೂಜುಕೇಂದ್ರದಲ್ಲಿ ಪಾಲ್ಗೊಳ್ಳಲು ನಂಬಿಕಸ್ತರೇ ಆಗಬೇಕಾಗಿದ್ದು, ಜೂಜಾಡಿಗಳಿಂದ ಮೊಬೈಲ್ ತರಬಾರದೆಂಬ ಕರಾರು ಮಾಡಲಾಗುತ್ತದೆ. ಒಂದು ವೇಳೆ ತಂದರೂ ಮೊಬೈಲ್‌ಗಳನ್ನು ಕಿತ್ತಿಟ್ಟುಕೊಳ್ಳಲಾಗುತ್ತದೆಯೆಂದು ಹೇಳಲಾಗುತ್ತಿದೆ.
ತಾತ್ಕಾಲಿಕ ಡೇರೆ ಹಾಕಿ ಜೂಜು ಕೇಂದ್ರವನ್ನು ನಡೆಸುತ್ತಿದ್ದು, ಟವೆಲ್ ಹಾಕಿ ಆಡುವವರಿಂದ ತಲಾ ಐದು ಸಾವಿರ, ಟವೆಲ್ ಹಾಕದೇ ಆಡುವವರಿಂದ ತಲಾ ಒಂದು ಸಾವಿರ ಪ್ರವೇಶ ದರ ವಸೂಲು ಮಾಡಲಾಗುತ್ತಿದೆ. ಹೀಗೆ ಜೂಜಾಟವಾಡಿಸುವವರು ನಿತ್ಯವೂ ಎರಡು ಲಕ್ಷ ರೂಪಾಯಿಗಳ ವರೆಗೂ ಆದಾಯ ಮಾಡಿಕೊಳ್ಳುತ್ತಿದ್ದಾರೆ.
ಜೂಜು ಕೇಂದ್ರಗಳ ಬಳಿ ಉಂಟಾಗುವ ಘರ್ಷಣೆ ಹಾಗೂ ಜಗಳಗಳನ್ನು ನಿಯಂತ್ರಿಸಲು ಸ್ವಯಂ ರಕ್ಷಣಾ ಪಡೆ ಸದಸ್ಯರಿದ್ದು, ಯಾವುದೇ ಕಾರಣಕ್ಕೂ ಪೊಲೀಸ್ ಠಾಣೆಗೆ ದೂರುಗಳು ದಾಖಲಾಗದಂತೆ ಎಚ್ಚರವಹಿಸಲಾಗುತ್ತಿದೆ.
ಜೂಜು ಕೇಂದ್ರಗಳಲ್ಲಿಯೇ ಆಟವಾಡಲೂ ಹಣವನ್ನು ಶೇ.10 ಕ್ಕಿಂತ ಹೆಚ್ಚು ಬಡ್ಡಿ ದರದಲ್ಲಿ ಸಾಲವಾಗಿ ನೀಡುವ ಸೌಲಭ್ಯವೂ ಇದ್ದು, ಫೋನ್ ಪೇ, ಗೂಗಲ್‌ಪೇಗಳನ್ನು ಬಳಸಿ ಸಾಲ ನೀಡುವ ವ್ಯಕ್ತಿಗಳು ನೆರೆದಿರುತ್ತಾರೆ ಎನ್ನಲಾಗಿದೆ.
ಕೋಲಾರ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಹಲವಾರು ವರ್ಷಗಳಿಂದಲೂ ಹೀಗೆ ಜೂಜು ಕೇಂದ್ರಗಳನ್ನು ನಡೆಸುತ್ತಿದ್ದು, ಪೊಲೀಸ್ ಮತ್ತು ಅಧಿಕಾರಿಗಳ ಭಯ ಈ ಅನಧಿಕೃತ ಜೂಜು ಕೇಂದ್ರಗಳನ್ನು ನಡೆಸುವವರಿಗೆ ಇಲ್ಲವಾಗಿದೆ.
ಇದೀಗ ಜೂಜು ನಡೆಸುವ ಪಾಲುದಾರರ ಮಧ್ಯೆ ತಗಾದೆ ಏರ್ಪಟ್ಟಿದ್ದು, ಇದರಿಂದ ಲಕ್ಷ್ಮೀಪುರ ಹಾಗೂ ಆವಲದೊಡ್ಡಿಯಲ್ಲಿ ನಡೆಯುತ್ತಿರುವ ಜೂಜಾಟದ ವೀಡಿಯೋಗಳು ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿಗಳನ್ನು ತಲುಪಿದೆಯೆಂದು ಹೇಳಲಾಗುತ್ತಿದೆ. ಆದರೂ, ಇದುವರೆವಿಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ವರಮಹಾಲಕ್ಷ್ಮಿಹಬ್ಬದ ದಿನ ಭರ್ಜರಿ ಜೂಜಾಟ ನಡೆಸಲು ಸಿದ್ಧತೆ ನಡೆಯುತ್ತಿದ್ದು, ಭಾರೀ ಅನಾಹುತಗಳು ಆಗುವ ಮೊದಲೇ ಪೊಲೀಸರು ಈಗಲಾದರೂ ಎಚ್ಚೆತ್ತುಕೊಂಡು ಲಕ್ಷ್ಮೀಪುರ ಹಾಗೂ ಆವಲದೊಡ್ಡಿಯ ಜೂಜು ಕೇಂದ್ರಗಳನ್ನು ತಡೆಗಟ್ಟಬೇಕು ಎಂದು ಸುತ್ತಮುತ್ತಲ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕೆ.ಎಸ್.ಗಣೇಶ್