Advertisement

ಜೂಜು ಮತ್ತು ಮೋಜು ಮಕಾವೋ

03:45 AM Jun 25, 2017 | |

ನಾವು ಚೀನಾ ಪ್ರವಾಸ ಕೈಗೊಂಡಾಗ, “ಹಾಂಕಾಂಗ್‌ ಚೀನಾ ಸುತ್ತೋಣ’ ಎಂಬ ದ್ವಾರಕೀಶ್‌ ಸಿನೆಮಾದ ಹಾಡಿನ ಗುಂಗು ಮನದಲ್ಲಿತ್ತಾದರೂ, ಈ ಮಕಾವೋ ಎಂಬುದೆಲ್ಲಿದೆ, ಹೇಗಿದೆ ಎಂಬುದು ಕೌತುಕಮಯವಾಗಿಯೇ ಉಳಿದಿತ್ತು. ನಾವೆಲ್ಲ ಹಾಂಕಾಂಗ್‌ ಬಂದರಿನಿಂದ ವಾಟರ್‌ಜೆಟ್‌ನಲ್ಲಿ ಒಂದು ಗಂಟೆ ಪ್ರಯಾಣಿಸಿ ರಾತ್ರಿ ಹತ್ತು ಗಂಟೆಗೆ ಮಕಾವೋದಲ್ಲಿ ಬಂದಿಳಿದಾಗ ಯಾವುದೋ ಅನ್ಯ ಲೋಕಕ್ಕೆ  ಬಂದೆವೇ ಎಂಬಂಥ ದಿಗ½$›ಮೆ. ಸುತ್ತಲೂ ಎತ್ತೆತ್ತಲೂ ತಲೆ ಎತ್ತಿ ನೋಡಬೇಕಾದಂಥ ಭವ್ಯ ಕಟ್ಟಡಗಳೆಲ್ಲ ವರ್ಣಮಯ ದೀಪಾಲಂಕೃತವಾಗಿ ಝಗಮಗಿಸುತ್ತಿವೆ. ಎಲ್ಲಿ ನೋಡಲಿ ಎಲ್ಲಿ ಬಿಡಲಿ ಎಂದೆನಿಸುವಂತಹ ಚಿತ್ತಾಕರ್ಷಕ ಬೆಳಕಿನ ವೈಭವವು ಆಕಾಶದ ನಕ್ಷತ್ರಗಳನ್ನೇ ಮಂಕಾಗಿಸುವಂತಿವೆ. ಕ್ಯಾಸಿನೋ (ಜೂಜು) ನಗರಿ ಮಕಾವೋ ಜೀವ ತಳೆಯುವುದೇ ರಾತ್ರಿಯ ವರ್ಣ ವೈಭವದಲ್ಲಿ. ಇಲ್ಲಿಗೆ ಜೂಜಿನ ಮೋಜು ಮಜಾದಲ್ಲಿ ರಾತ್ರಿ ಕಳೆಯಲು ಬರುವ ಪ್ರವಾಸಿಗರಿಂದಾಗಿ “ಏಷ್ಯಾದ ಲಾಸ್‌ ವೆಗಾಸ್‌’ ಎಂದೇ ಬಿಂಬಿಸಲ್ಪಡುತ್ತಿರುವಾಗ ಈ ವಿಧದ ಬೆಡಗು ಬೇಕೇ ಬೇಕಲ್ಲವೆ?

Advertisement

ಕೊಲ್ಲಿಯ ಹೆಬ್ಟಾಗಿಲು
ಮಕಾವೋ ಎಂಬ ಪದದ ಅರ್ಥವೇ ಕೊಲ್ಲಿಯ ಹೆಬ್ಟಾಗಿಲು ಎಂದು. ಪೂರ್ವದಲ್ಲಿ ಪ್ರಮುಖವಾದ ಪರ್ಲ್ ನದಿಯಂತೆ ಪಶ್ಚಿಮ, ದಕ್ಷಿಣಗಳಲ್ಲೂ ನದೀ ತೀರ ಹೊಂದಿದ್ದು ಉತ್ತರದಲ್ಲಿ ಚೀನಾದ ಗುವಾನ್‌ಡಾಂಗ್‌ ಪ್ರದೇಶದ ಭೂ ಗಡಿ ಹೊಂದಿರುವ ಪರ್ಯಾಯ ದ್ವೀಪ, ಮಕಾವೋ. ಹದಿನಾರನೆಯ ಶತಮಾನದಲ್ಲಿ ಚೀನಾದ ಮಿಂಗ್‌ ಅರಸರು ಇದನ್ನು ಪೋರ್ಚುಗೀಸರಿಗೆ ವ್ಯಾಪಾರಕ್ಕಾಗಿ ಬಾಡಿಗೆಗೆ ನೀಡಿದ್ದರು. ಕಾಲಕ್ರಮೇಣ ಇದು ಪೋರ್ಚುಗೀಸರ ವಸಾಹತು ಆಯಿತು. ಚೀನಾಕ್ಕೆ ಮಕಾವೋದ ಸಾರ್ವಭೌಮತ್ವ ಮರಳಿ ದೊರೆತಿದ್ದು 1999ರಲ್ಲಿ. ಮಕಾವೋ ಏಷ್ಯಾಖಂಡದಲ್ಲಿ ಯೂರೋಪಿಯನ್ನರ ವಶದಲ್ಲಿದ್ದ ಕೊನೆಯ ವಸಾಹತು. 2049ರವರೆಗೂ ಮಕಾವೋಕ್ಕೆ ಉನ್ನತ ಮಟ್ಟದ ಸ್ವಯಮಾಡಳಿತ ಅಧಿಕಾರ ಇದೆ. ಒಂದು ದೇಶ, ಎರಡು ಆಡಳಿತ ವ್ಯವಸ್ಥೆಯಂತೆ ಸೇನಾ ಸುರಕ್ಷೆ ಮತ್ತು ವಿದೇಶೀ ವ್ಯವಹಾರ ಮಾತ್ರ ಚೀನಾಕ್ಕೆ ಸೇರಿದ್ದು. ಉಳಿದಂತೆ ಇಲ್ಲಿನವರಿಗೆ ತಮ್ಮದೇ ಆಡಳಿತ ವ್ಯವಸ್ಥೆ ರೂಪಿಸಿಕೊಳ್ಳುವ ಸೌಲಭ್ಯವಿದೆ. ಹೀಗಾಗಿ ಇಲ್ಲಿ ಚೀನಾದಂತಲ್ಲದೆ ಬಂಡವಾಳಶಾಹಿತ್ವ ಇದೆ. ಚೀನಾದ ಕರೆನ್ಸಿ ಯುಯಾನ್‌. ಆದರೆ, ಇಲ್ಲಿನದು ಪಟಾಕ. ಆದರೆ, ಹಾಂಕಾಂಗ್‌ ಡಾಲರ್‌ನದೇ ಜಾಸ್ತಿ ಬಳಕೆ.

ನಮ್ಮ ವಾಸ್ತವ್ಯದ ಹೋಟೆಲ್‌ ವೆನೀಷಿಯಾವನ್ನು ಇಡಿಯಾಗಿ ನೋಡಲು ಒಂದು ದಿನವಿಡೀ ಬೇಕು. ಇಲ್ಲಿ ಹೋಟೆಲ್‌ಗ‌ಳೂ ಪ್ರವಾಸೀ ತಾಣಗಳೇ. ಬೆಳಗಿನ ಉಪಾಹಾರದ ನಂತರ ಹೊಟೇಲನ್ನು ಸಾಧ್ಯವಾದಷ್ಟು ನೋಡೋಣವೆಂದು ಹೊರಟೆವು. ಮೇಲ್ಭಾಗದ ಅಂತಸ್ತಿನಲ್ಲಿ ವಿಸ್ತಾರವಾದ ಪ್ರದೇಶದಲ್ಲಿ ಥರಥರದ ಅಂಗಡಿಗಳು. ಅಲ್ಲಲ್ಲಿ ಕೃತಕ ಕೊಳಗಳು, ಬೋಟಿಂಗ್‌ ವ್ಯವಸ್ಥೆ. ಸಮವಸ್ತ್ರ ಧರಿಸಿ ವಾದ್ಯವೃಂದದೊಂದಿಗೆ ಹಾಡುತ್ತ ಸಾಗುವ ಗಾಯಕ ವೃಂದ. ಮೇಲ್ಭಾಗದ ಬೆಳೊ¾àಡಗಳು ತೇಲಾಡುತ್ತಿರುವ ನೀಲಾಗಸ ಕೂಡ ಕಣ್ಮನ ಸೆಳೆಯುವಂತಿದೆಯಲ್ಲ ಎಂದು ತಲೆ ಮೇಲೆತ್ತಿ ನೋಡುತ್ತಿದ್ದಂತೆ ಅದು ಮೇಲ್ಚಾವಣಿ ಮಾತ್ರ, ಆಕಾಶ ಮೋಡಗಳೆಲ್ಲ ಕೃತಕ ಸೃಷ್ಟಿ ಅಷ್ಟೆ, ಎಂದರಿವಾದಾಗ ಆ ಬೆರಗನ್ನು ಅರಗಿಸಿಕೊಳ್ಳಲೇ ಸ್ವಲ್ಪ ಸಮಯ ಬೇಕಾಯಿತು.

ಹೋಟೆಲ್‌ನ ಕ್ಯಾಸಿನೋದಲ್ಲಿ ಜೂಜಾಡುವವರಿಗೆ ಮಾತ್ರ ಪ್ರವೇಶ. ಛಾಯಾಚಿತ್ರಗಳನ್ನು ತೆಗೆಯುವಂತಿಲ್ಲ. ಇಲ್ಲಿ ಭಾರತೀಯರು ನಡೆಸುವ ಕ್ಯಾಸಿನೋ ಕೂಡ ಇದೆ. ನಮ್ಮ ತಂಡದ ಇಬ್ಬರು ಒಳ ಹೋದರು. ಒಬ್ಬರಿಗೆ ದೊಡ್ಡ ಪ್ರಮಾಣದ ನಷ್ಟವಾದರೆ ಇನ್ನೊಬ್ಬರಿಗೆ ಸಣ್ಣ ಪ್ರಮಾಣದ ಲಾಭವಾಗಿತ್ತು. ಒಳಗೆ ನೂರಾರು ವಿಧದ ಜೂಜಾಟಗಳು. ಅದೃಷ್ಟ ಚಕ್ರ ತಿರುಗಿಸುತ್ತಲೋ, ಗುಂಡಿ ಅದುಮುತ್ತಲೋ ಆಡುವುದಂತೆ. ಆಡುವವರಿಗೆ ಕುಳಿತಲ್ಲೇ ಉಚಿತ ಪಾನೀಯಗಳ ಸರಬರಾಜು ಇದೆ ಎಂದರು, ಒಳ ಹೋದವರು. ಮಕಾವೋಗೆ ಜೂಜಾಟ, ಹೋಟೆಲ್‌ ಉದ್ಯಮ, ಪ್ರವಾಸೋದ್ಯಮಗಳಿಂದಲೇ ಪ್ರಮುಖ ಆದಾಯ. ಅಷ್ಟರಲ್ಲಿ ನಮ್ಮ ಗೈಡ್‌ ತರುಣ ಸ್ಟೀವನ್‌ ಬಂದಿದ್ದ.
ನಮ್ಮನ್ನೆಲ್ಲಾ ಇಲ್ಲಿನ ಎ-ಮಾ ದೇಗುಲಕ್ಕೆ ಕರೆದೊಯ್ದ. ಇದು ಮಕಾವೋದ ಐತಿಹಾಸಿಕ ಮಹತ್ವದ ಸ್ಥಳ. ಇದು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೂ ಸೇರಿದೆ. ಮಕಾವೋ ಹಿಂದೆ ಮೀನುಗಾರರ ವ್ಯಾಪಾರ ಕೇಂದ್ರವಾಗಿತ್ತು. ಎ-ಮಾ ದೇವತೆ ಮೀನುಗಾರರ ಸಂರಕ್ಷಕಿ. ಈ ದೇವತೆಯ ಕುರಿತು ಹಲವು ದಂತಕತೆಗಳಿವೆ. 1488ರಿಂದ 1828ರವರೆಗೂ ಈ ದೇವಾಲಯದ ನಿರ್ಮಾಣ ಮುಂದುವರಿ ದಿತ್ತು. ಹಾಗೆಂದು ವಿಶೇಷ ವಾಸ್ತು ಶೈಲಿ, ಭವ್ಯತೆ ಇದೆಯೆನ್ನುವಂತಿಲ್ಲ. ನಿಸರ್ಗದ ಮಡಿಲಲ್ಲಿರುವ ಸುಭದ್ರವಾದ ದೇಗುಲದಂತಿದೆ. ಇದು ಇರುವುದೇ ಬರ್ರ ಎಂಬ ಎತ್ತರದ ಗುಡ್ಡದ ಇಳಿಜಾರಿನಲ್ಲಿ ಬಂಡೆಗಳೆಡೆಯಲ್ಲಿ. ಈ ಗುಡ್ಡವನ್ನು ಪವಿತ್ರ ಪರ್ವತ ಎಂದು ಪರಿಗಣಿಸುತ್ತಾರೆ. ಸೊಳ್ಳೆಬತ್ತಿಯನ್ನು ಕೋನಾಕೃತಿಯಲ್ಲಿ ಸುರುಳಿ ಸುತ್ತಿ ಕವುಚಿಟ್ಟ ಬಿದಿರ ಹೆಡಗೆಗಳಂತಿರುವ ಅಗರಬತ್ತಿಗಳು ದೇಗುಲದೆಲ್ಲೆಡೆ ನೇತಾಡುತ್ತಿದ್ದವು. ಚೀನೀಯರ ಪೂಜಾ ವಿಧಾನದಲ್ಲಿ ಭಕ್ತರು ಊದುಬತ್ತಿ ಹೊತ್ತಿಸುವುದಕ್ಕೆ ನಮ್ಮಲ್ಲಿನ ಮಂಗಳಾರತಿಯಂತೆಯೇ ಪ್ರಾಧಾನ್ಯ.

ನಮಸ್ತೆ, ನಮಸ್ತೆ
ಹಳೇ ಮಕಾವೋದಲ್ಲಿರುವ ಸೈಂಟ್‌ ಪೌಲ್‌ ಕೆಥೆಡ್ರಲ್‌ಗೆ  ನಡೆದು ಬರುವಾಗ ರಸ್ತೆ ಬದಿಯಲ್ಲಿ ಆಕರ್ಷಕ ವಸ್ತುಗಳನ್ನು ಮಾರುವವರು ನಮ್ಮನ್ನು ನೋಡಿ ಕೈ ಮುಗಿದು “ನಮಸ್ತೇ’ ಎನ್ನುತ್ತ ಆಹ್ವಾನಿಸುತ್ತಿದ್ದರು. ಸೈಂಟ್‌ ಪೌಲ್‌ ಚರ್ಚನ್ನು 1602ರಲ್ಲಿ ಕಟ್ಟಲಾಗಿತ್ತು. ಅಗ್ನಿ ಆಕಸ್ಮಿಕಕ್ಕೆ ಒಳಗಾದ ಈ ಭವ್ಯ ಚರ್ಚ್‌ನ ದಕ್ಷಿಣ ಭಾಗ ಮಾತ್ರ ಉಳಿದು ಇದು ಇಂದು ಒಂದು ಅವಶೇಷವಾಗಿದೆ. 

Advertisement

ಚರ್ಚ್‌ ಸಮೀಪದಲ್ಲಿ ಮಕಾವೋ ಕಲ್ಚರಲ್‌ ಸೆಂಟರ್‌ ಇದೆ. ಮಕಾವೋ ಸ್ಕೆçಲೈನ್‌ನ 243ಮೀ. ಎತ್ತರದ ಮಕಾವೋ ಟವರನ್ನು ಬಸ್‌ನಿಂದಲೇ ತೋರಿಸಿದ ನಮ್ಮ ಗೈಡ್‌. ಸೆನಾಡೋ ಚೌಕ ಇಲ್ಲಿನ ಪ್ರಸಿದ್ಧ ಚೌಕ. ಲೋಟಸ್‌ ಫ್ಲವರ್‌ ಸ್ಕ್ವೇರ್‌ ನೋಡಲು ನಮ್ಮ ಬಸ್‌ ನಿಂತಿತು. ಇಲ್ಲಿರುವ ಬೃಹತ್‌ ಚಿನ್ನದ ಲೇಪನದ ತಾವರೆಯನ್ನು ಪ್ರಾಸ್ಪರಿಟಿ ಆಫ್ ಮಕಾವೋ ಎನ್ನುತ್ತಾರೆ.

ಮಕಾವೋದ ಥೀಮ್‌ ಪಾರ್ಕ್‌ ಕೂಡ ಪ್ರಸಿದ್ಧವಾದುದು. ಇಲ್ಲಿ ಮೂರು ವಿಭಾಗಗಳಿವೆ. ಡೈನಾಸ್ಟಿ ಪಾರ್ಕ್‌ನಲ್ಲಿ ಚೀನಾದ ಸಾಂಪ್ರದಾಯಿಕ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನಾಲಯವಿದೆ. ಮಕಾವೋ ಈಸ್ಟ್‌ ಮೀಟ್ಸ್‌ ವೆಸ್ಟ್‌ ವಿಭಾಗದಲ್ಲಿ ಕೃತಕ ಜ್ವಾಲಾಮುಖೀ, ಜಲಪಾತ, ಲೇಸರ್‌ ಶೋ, ಇತ್ಯಾದಿಗಳಿವೆ. ಲೆಜೆಂಡಾ ಪಾರ್ಕ್‌ನಲ್ಲಿ ಪೀಸಾ ಗೋಪುರದಂತಹ ನಿರ್ಮಾಣಗಳಿವೆ. 

ಮಕಾವೋ ನಗರ ಸಂಯೋಜನೆಯಲ್ಲಿ ಅದನ್ನು ಕಾಂಕ್ರೀಟ್‌ ಜಂಗಲ್‌ ಆಗಿಸದೆ ಮರದ ಕಟಕಟೆಯೊಳಗೆ ಹೂಕುಂಡಗಳು, ಹುಲ್ಲುಹಾಸುಗಳು, ಆಕರ್ಷಕ ಮರಗಳು, ಬಳ್ಳಿಗಳು, ಉದ್ಯಾನವನಗಳನ್ನು ರೂಪಿಸಿ ಸೌಂದರ್ಯ ಪ್ರಜ್ಞೆ ಮೆರೆದಿದ್ದಾರೆ.
 
ದೈನಂದಿನ  ಜಂಜಡಗಳಿಂದ ಬಿಡುಗಡೆಹೊಂದಿ ಪುನಶ್ಚೇತನಗೊಳ್ಳಬೇಕೆನ್ನುವವರಿಗೆ ಕೆಸಿನೋನಗರಿ ಮಕಾವೋದಲ್ಲಿ ಜೂಜಾಡದೆಯೂ ಹೆಜ್ಜೆಹೆಜ್ಜೆಗೂ ಮನವನ್ನು ಆಹ್ಲಾದಗೊಳಿಸುವ ಸಂಗತಿಗಳು ಹಲವಾರಿವೆ.

– ಕೆ. ಆರ್‌. ಉಮಾದೇವಿ

Advertisement

Udayavani is now on Telegram. Click here to join our channel and stay updated with the latest news.

Next