Advertisement

ಸೈನಿ”ವಿರೋಧಿ’ಗಳನ್ನು ಬೆಂಡೆತ್ತಿದ ಗಂಭೀರ್‌!

02:53 AM Aug 05, 2019 | Team Udayavani |

ಹೊಸದಿಲ್ಲಿ: ಶನಿವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ, ಅದ್ಭುತ ಯಶಸ್ಸು ಪಡೆದ ಭಾರತ ತಂಡದ ನೂತನ ವೇಗದ ಬೌಲರ್‌ ನವದೀಪ್‌ ಸೈನಿ ಬಗ್ಗೆ ಈಗ ಕ್ರಿಕೆಟ್‌ ವಲಯದಲ್ಲಿ ಚರ್ಚೆ ಜೋರಾಗಿದೆ. ಇವೆಲ್ಲದರ ನಡುವೆ ಗೌತಮ್‌ ಗಂಭೀರ್‌ ಮಾಜಿ ಕ್ರಿಕೆಟಿಗರಾದ ಬಿಷನ್‌ ಸಿಂಗ್‌ ಬೇಡಿ, ಚೇತನ್‌ ಚೌಹಾಣ್‌ ಅವರನ್ನು ಕಟುವಾಗಿ ಟೀಕಿಸಿದ್ದು ಭರ್ಜರಿ ಸುದ್ದಿಯಾಗಿದೆ.

Advertisement

2013ರವರೆಗೆ ನವದೀಪ್‌ ಸೈನಿ ಒಬ್ಬ ಟೆನಿಸ್‌ ಚೆಂಡಿನ ಕ್ರಿಕೆಟಿಗ. ಆ ಸಂದರ್ಭದಲ್ಲಿ ಅವರು ಗಂಭೀರ್‌ ಗಮನಕ್ಕೆ ಬಂದರು. ಕೆಲವೇ ತಿಂಗಳಲ್ಲಿ ದಿಢೀರನೆ ದಿಲ್ಲಿ ರಣಜಿ ತಂಡಕ್ಕೆ ಆಯ್ಕೆಯಾದರು. ಆಗ ದಿಲ್ಲಿ ಕ್ರಿಕೆಟ್‌ ಮಂಡಳಿ ಸದಸ್ಯರಾಗಿದ್ದ ಬೇಡಿ ಮತ್ತು ಚೌಹಾಣ್‌ ಈ ಕ್ರಮವನ್ನು ವಿರೋಧಿಸಿದ್ದರು. ಸೈನಿ ಬೆಂಬಲಕ್ಕೆ ಗಂಭೀರ್‌ ಬಲವಾಗಿ ನಿಂತ ಪರಿಣಾಮ ಅವರು ಈಗ ಭಾರತ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಮಾತ್ರವಲ್ಲ ಮೊದಲನೇ ಪ್ರಯತ್ನದಲ್ಲಿಯೇ ಯಶಸ್ಸು ಸಾಧಿಸಿದ್ದಾರೆ.

ಗೌತಮ್‌ ಗಂಭೀರ್‌ ಟ್ವೀಟ್‌: “ಸೈನಿಗೆ ಅಭಿನಂದನೆಗಳು. ನೀವು ಬೌಲಿಂಗ್‌ ಮಾಡುವ ಮುನ್ನವೇ ಬಿಷನ್‌ ಸಿಂಗ್‌ ಬೇಡಿ, ಚೇತನ್‌ ಚೌಹಾಣ್‌ ಅವರನ್ನು ಬೌಲ್ಡ್‌ ಮಾಡಿ 2 ವಿಕೆಟ್‌ ಕಿತ್ತಾಗಿತ್ತು. ನಿಮ್ಮ ಅಂತಾರಾಷ್ಟ್ರೀಯ ಪ್ರವೇಶ ನೋಡಿ ಅವರ ಮಿಡ್ಲ್ ವಿಕೆಟ್‌ಗಳು ಹಾರಿ ಹೋಗಿವೆ. ಇವರೆಲ್ಲ, ನೀವು ಮೈದಾನ ಪ್ರವೇಶಿಸುವ ಮುನ್ನವೇ ನಿಮ್ಮ ಚರಮಗೀತೆ ಬರೆದಿದ್ದರು. ಅವರಿಗೆ ನಾಚಿಕೆಯಾಗಬೇಕು’ ಎಂದು ಗಂಭೀರ್‌ ಟ್ವೀಟ್‌ ಮಾಡಿದ್ದಾರೆ.

ಬೇಡಿ ಮರುತ್ತರ
ಗಂಭೀರ್‌ ಟ್ವೀಟ್‌ಗೆ ಬೇಡಿ ಕೂಡ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. “ಗೆಲ್ಲಬೇಕೆಂದರೆ ತೀರಾ ಕೀಳು ಮಟ್ಟಕ್ಕಿಳಿಯ ಬೇಕೆನ್ನುವುದರಲ್ಲಿ ನನಗೆ ನಂಬಿಕೆಯಿಲ್ಲ. ಟ್ವಿಟರ್‌ ಟೀಕೆಗಳಿಗೆ ಪ್ರತಿಕ್ರಿಯಿಸದಿರುವುದೇ ಮೇಲು. ನವದೀಪ್‌ ಸೈನಿ ಬಗ್ಗೆ ನಾನು ನಕಾರಾತ್ಮಕವಾಗಿ ಏನನ್ನೂ ಹೇಳಿಲ್ಲ. ಯಾರಾದರೂ ಏನಾದರೂ ಸಾಧಿಸಿದ್ದರೆ ಅದು ಅವರ ಸಾಧನೆಯೇ ಹೊರತು ಯಾರೋ ಎಂಕ, ಸೀನ, ನಾಣಿಯದ್ದಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next