Advertisement
ಉದ್ಘಾಟನೆಯ ದಿನ ಮಧೂರು ಮೋಹನ ಕಲ್ಲೂರಾಯರ ಕುಮಾರವ್ಯಾಸ ನಮನದೊಂದಿಗೆ ಪ್ರಸ್ತುತಿಗೊಂಡ ಕಾರ್ಯಕ್ರಮದ ಆದಿಯಲ್ಲಿ ಈ ಮಹಾಕವಿಯ ಆದಿ ಪರ್ವದಿಂದಲೇ ಕಾರ್ಯಕ್ರಮ ಆರಂಭವಾಗಿ ಕಳೆಯೇರಿಸಿತು. ಬೆಳಾಲು ರಾಜಾರಾಮ ಶರ್ಮರ ವ್ಯಾಖ್ಯಾನ. ಜಯರಾಮ ಕುದ್ರೆಂತಾಯರ ವಾಚನ. “ಪೆತ್ತಳಾಕೆಯು ವಹಿ°ವೀರ್ಯನ| ಮತ್ತೆ ಕಾಲಾಂತರಕೆ ತಂದಳು| ಚಿತ್ತವಿಸು ತನ್ನರಸನಾಳುವ ದೇಶದರಮನೆಗೆ’ ಎಂದು ಹೇಳಿದ ಕುಮಾರವ್ಯಾಸನು ವರ್ಣಿಸಿದ ಕುರು ಪಾಂಡವ ವೃತ್ತಾಂತದ ಮನೋಜ್ಞ ವಿವರಣೆ ಪ್ರಶಂಸೆ ಗಳಿಸಿತು.
Related Articles
Advertisement
ಐದನೆಯ ದಿನದ ವ್ಯಾಖ್ಯಾನದ ಸಾರಥ್ಯ ರಾಜಾರಾಮ ಶರ್ಮರದು. ಭೀಷ್ಮ ಪರ್ವದ ಕಾವ್ಯ ಭಾಗವನ್ನು ಹಿರಿಯ ಗಮಕಿಗಳಾದ ಗಿರಿಜಾ ದಾಸ್ ವಾಚನ ಮಾಡಿದರು. “ಆದಡರ್ಜುನ ನೋಡು ಸೈನ್ಯಮ| ಜೋದಧಿಯ ಮಧ್ಯದಲಿ ಮೆರೆವವ|ನಾ ದುರಂತ ಪರಾಕ್ರಮನು ಗಂಗಾಕುಮಾರಕನು’ ಎಂದು ಭೀಷಣ ಸಾಮರ್ಥ್ಯವಂತ ಭೀಷ್ಮನ ಕಲಿತನವನ್ನು ಬಯಲಿಗಿಟ್ಟ ಕವಿಯ ಆಶಯವನ್ನು ಹೃದಯಂಗಮವಾಗಿ ಕೇಳುಗರಿಗೆ ತಲುಪಿಸುವಲ್ಲಿ ಸಾರ್ಥಕ ಪ್ರಯತ್ನವೆನಿಸಿತು.
ಇಷ್ಟು ದಿನಗಳ ಕಾರ್ಯಕ್ರಮದಲ್ಲಿ ಆಳವಾಗಿ ಕೇಳುಗರ ಮನವನ್ನು ಕೊರೆದದ್ದು ಆರನೆಯ ದಿನ ಸುವರ್ಣ ಕುಮಾರಿಯವರು ನಡೆಸಿಕೊಟ್ಟ ವಾಚನ. ರಾಮಕೃಷ್ಣ ಭಟ್ಟರ ವ್ಯಾಖ್ಯಾನ. ದಾನಶೂರ ಕರ್ಣನ ಬದುಕಿನ ದುರಂತ ಅಂತ್ಯದ ಕರುಣಾಜನಕ ಕಾವ್ಯದ ಘಟ್ಟವನ್ನು ಸಮರ್ಥವಾದ ಶೈಲಿಯಲ್ಲಿ ರೂಪಿಸಿದ ಪರಿ ಕಣ್ಣಾಲಿಗಳನ್ನು ಹನಿಗೂಡಿಸುವಂತಿತ್ತು. “ವೈರಿಗಜ ಪಂಚಾನನನು ರಣ|ಧೀರನಪ್ರತಿಮ ಮಲ್ಲ ಕರ್ಣನು| ದಾರದಲಿ ಹಳಚಿದನು ಹನುಮನ ಹಳವಿಗೆಯ ರಥವ’ ಎಂದಿರುವ ಕುಮಾರವ್ಯಾಸನು ಇಂತಹ ಶೂರ ಕರ್ಣನ ಕೊನೆಗಾಲದ ಕಥೆಯನ್ನು ಬಹು ಭಾವಪೂರ್ಣವಾಗಿ ಚಿತ್ರಿಸಿದ್ದು ಇಲ್ಲಿ ಅದರ ಸ್ಪಷ್ಟ ಚಿತ್ರಣ ಅನಾವರಣಗೊಂಡಿತು.
ಕೊನೆಯ ದಿನ ಪಟ್ಟಾಭಿಷೇಕ. ಗದಾ ಪರ್ವದ ಕತೆ. ಡಾ| ಶ್ರೀಧರ ಭಟ್ಟರ ವ್ಯಾಖ್ಯಾನ ನವಿರು ಹಾಸ್ಯದ ಜೊತೆಗೆ ಗದಾಯುದ್ಧದ ಪರಿ ಸುಂದರ, ಸುಲಿತವಾಗಿ ಹರಿದುಬಂತು. ಸಮಯಾವಕಾಶ ಕಡಿಮೆಯಿದ್ದರೂ ಹೆಚ್ಚು ಮನ ಮುಟ್ಟುವಂತೆ ಪ್ರಸ್ತುತಪಡಿಸುವಲ್ಲಿ ಕಾರ್ಯಕ್ರಮ ಯಶಸ್ಸು ಗಳಿಸಿತು. ಮಧುರ ಕಂಠದ ಮನೋರಮಾ ತೋಳ್ಪಡಿತ್ತಾಯರ ವಾಚನ ಕಡೆಗೂ ದುಷ್ಟಶಕ್ತಿಗಳ ಹನನವಾಗಿ ಸಾತ್ವಿಕ ಶಕ್ತಿಯೇ ವಿಜಯ ಸಂಪಾದಿಸಿತೆಂಬ ಕತೆಯನ್ನು ವಿರಳವಾಗಿ ಶ್ರುತಪಡಿಸಿತು.
ಪ. ರಾಮಕೃಷ್ಣ ಶಾಸ್ತ್ರಿ