“ನಾನು ಹಂಡ್ರೆಡ್ ಪರ್ಸೆಂಟ್ ಪಾಸಾಗಿದ್ದೇನೆ. ಆದರೆ, ಮಾಕ್ಸ್ ಕಾರ್ಡ್ ಇನ್ನಷ್ಟೇ ಕೈ ಸೇರಬೇಕಿದೆ…’ – ನಿರ್ಮಾಪಕ ರಮೇಶ್ ರೆಡ್ಡಿ ಹೀಗೆ ಖುಷಿಯಿಂದ ಹೇಳುತ್ತಿದ್ದರೆ ಸಭಾಂಗಣ ತುಂಬಾ ನಗು. ಅವರು ಹೇಳಿದ್ದು “ಗಾಳಿಪಟ-2′ ಚಿತ್ರದ ಬಗ್ಗೆ. ಯೋಗರಾಜ್ ಭಟ್-ಗಣೇಶ್ ಕಾಂಬಿನೇಶನ್‌ನಲ್ಲಿ ಬಂದ ಈ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಈ ಖುಷಿಯನ್ನು ಚಿತ್ರ ತಂಡ ಇತ್ತೀಚೆಗೆ ಎಲ್ಲರೊಂದಿಗೆ ಹಂಚಿಕೊಂಡಿದೆ. ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ರಮೇಶ್ ರೆಡ್ಡಿ, “ಈ ಹಿಂದೆ ನನ್ನನ್ನು ಪಾಸ್ ಮಾಡಿ ಅಂತಹ ಕೇಳುತ್ತಿದ್ದೆ. ಆದರೆ, ಈ ಬಾರಿ ಧೈರ್ಯದಿಂದ ಪಾಸಾಗಿದ್ದೇನೆ ಎಂದು ಹೇಳಲು ಖುಷಿಯಾಗುತ್ತಿದೆ. ಕರ್ನಾಟಕದ ಜನತೆ ನನ್ನ ಕೈ ಹಿಡಿದಿದ್ದಾರೆ. ಸಿನಿಮಾ ಹಿಟ್ ಆಗಿದೆ’ ಎಂದರು. ಎಲ್ಲಾ ಓಕೆ, ಕಲೆಕ್ಷನ್ ಎಷ್ಟಾಗಿದೆ ಎಂಬ ಪ್ರಶ್ನೆ ಎದುರಾದಾಗ “ಮಾರ್ಕ್ಸ್ ಕಾರ್ಡ್ ಇನ್ನೂ ಕೈ ಸೇರಿಲ್ಲ. ಪ್ರಿಂಟ್ ಆಗುತ್ತಿದೆ’ ಎಂಬ ಜಾಣ ಉತ್ತರ ಕೊಟ್ಟರು.
ಹೌದು, ಒಂದು ಸಿನಿಮಾ ಹಿಟ್ ಆದರೆ, ಇಡೀ ತಂಡ ಖುಷಿಯಾಗಿರುತ್ತದೆ. ಆ ಗೆಲುವು, ಸಂಭ್ರಮ ಮತ್ತೂಂದಿಷ್ಟು ಮಂದಿಗೆ ಪ್ರೇರಣೆಯಾಗುತ್ತದೆ. ಆ ಸಂಭ್ರಮ “ಗಾಳಿಪಟ-2′ ತಂಡದಲ್ಲಿ ಎದ್ದು ಕಾಣುತ್ತಿತ್ತು. ನಿರ್ದೇಶಕ ಯೋಗರಾಜ್ ಭಟ್ ಕೂಡಾ ಖುಷಿ ಹಂಚಿಕೊಂಡರು. “ಇಡೀ ಕರ್ನಾಟಕದ ಜನತೆ ಸಿನಿಮಾವನ್ನು ಅಪ್ಪಿಕೊಂಡಿದೆ. ಈ ಪ್ರೀತಿಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ಅದಕ್ಕಿಂತ ಹೆಚ್ಚಾಗಿ ನಮ್ಮ ನಿರ್ಮಾಪಕರು “ನಾ ಪಾಸಾದೆ ನಾ ಪಾಸಾದೆ’ ಎಂದು ಖುಷಿಯಿಂದ ಹೇಳಿ ಕೊಂಡರು. ಅದೇ ದೊಡ್ಡ ಖುಷಿ.
“ಗಾಳಿಪಟ-2′ ಮಾಡಬೇಕೆಂಬುದು 10 ವರ್ಷಗಳ ಹಿಂದಿನ ಕನಸು. ನಾನು, ಗಣೇಶ್ ಹಲವು ಬಾರಿ ಮಾತನಾಡಿಕೊಂಡಿದ್ದೆವು. ಇನ್ನು, ಚಿತ್ರದ ಸೆಕೆಂಡ ಹಾಫ್ ಮಾಡುವ ಸಮಯದಲ್ಲಿ ಹಿರಿಯ ನಟ ಅನಂತ್‌ನಾಗ್ ಅವರು ಕೊಟ್ಟ ಸಲಹೆ ಮಹತ್ವದ್ದು’ ಎಂದ ಭಟ್, ನಿರ್ಮಾಪಕರ ಸಿನಿಮಾ ಪ್ರೀತಿಯ ಬಗ್ಗೆಯೂ ಮಾತನಾಡಿದರು.
ಇನ್ನು, ನಾಯಕ ನಟ ಗಣೇಶ್ ಕೂಡಾ ಸಿನಿಮಾದ ಗೆಲುವಿನ ಖುಷಿ ಹಂಚಿಕೊಂಡರು. ಭಟ್ರ, ತರ್ಲೆತನ, ಸಿನಿಮಾದ ಕಥೆ ಚರ್ಚೆಯ ಸಂದರ್ಭದಲ್ಲಿ ಬಂದ ಪ್ರಶ್ನೆಗಳು, ಭಟ್ಟರು ಅಂದುಕೊಂಡ ಇಂಟರ್‌ವಲ್ ಬ್ಲಾಕ್… ಹೀಗೆ ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ಹಿರಿಯ ನಟ ಅನಂತ್‌ನಾಗ್, ಭಟ್ಟರ ಜೊತೆಗಿನ ಕೆಲಸದ ಅನುಭವ, ಆಯ್ಕೆಗಳೊಂದಿಗೆ ಕೆಲಸ ಮಾಡುವ ಭಟ್ಟರ ಶೈಲಿ, ನಟ ಗಣೇಶ್ ಅವರೊಂದಿಗೆ ನಟನೆ ಮಾಡುವಾಗಿನ ಸಮಯದ ಹುಮ್ಮಸ್ಸು, ನಿರ್ಮಾಪಕರ ಸಿನಿಮಾ ಪ್ರೀತಿ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತನಾಡಿದರು. ಉಳಿದಂತೆ ಪವನ್ ಕುಮಾರ್, ನಾಯಕಿಯ ರಾದ ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಹಿರಿಯ ನಟ ಶ್ರೀನಾಥ್, ಜಯಂತ್ ಕಾಯ್ಕಿಣಿ, ಕೆವಿಎನ್ ಸಂಸ್ಥೆಯ ಸುಪ್ರಿತ್ ಸೇರಿದಂತೆ ಚಿತ್ರ ತಂಡ ಗೆಲುವಿನ ಖುಷಿ ಹಂಚಿಕೊಂಡಿತು. ವಿದೇಶಗಳಲ್ಲೂ “ಗಾಳಿಪಟ-2′ ಹಾರಾಟ ಜೋರಾಗಿದೆ. ಇತ್ತೀಚೆಗೆ ಲಿಥುವೇನಿಯಾದ ವಿಲ್ಲೇನಿಯಸ್ನ ಚಿತ್ರ ಮಂದಿರದಲ್ಲಿ ಮೊಟ್ಟ ಮೊದಲ ಬಾರಿಗೆ, ಕನ್ನಡಿಗರು ಸೇರಿ “ಗಾಳಿಪಟ-2′ ಚಿತ್ರವನ್ನು ವೀಕ್ಷಿಸಿ ಸಂಭ್ರಮಿಸಿದರು. ಹೇಮಂತ್, ಗುರುದತ್, ಅತಿಶ್, ಶರತ್, ರಕ್ಷಿತ್ ಹಾಗೂ ಭರತ್ ಗೌಡ ಈ ಶೋ ಆಯೋಜಕರು.