Advertisement

ಇಬ್ಬರು ಅನಾಥ ಮಕ್ಕಳನ್ನು ದತ್ತು ಪಡೆದ ಗಾಲಿ ಜನಾರ್ದನ ರೆಡ್ಡಿ ದಂಪತಿಗಳು

07:12 PM Mar 19, 2023 | Team Udayavani |

ಗಂಗಾವತಿ: ವಿರೂಪಾಪೂರ ತಾಂಡದ ಇಬ್ಬರು ಅನಾಥ ಮಕ್ಕಳಿಗೆ ಶಿಕ್ಷಣ ವಸತಿ ವ್ಯವಸ್ಥೆ ಕಲ್ಪಿಸಲು ದತ್ತು ಪಡೆದಿದ್ದು ಅವರ ಭವಿಷ್ಯ ರೂಪಿಸಲಾಗುತ್ತದೆ. ಇದುವರೆಗೂ ಗಂಗಾವತಿ ಮತ ಕ್ಷೇತ್ರದಲ್ಲಿ ಈಗಾಗಲೇ ಇಕ್ಬಾಲ್ ಅನ್ಸಾರಿ ಹಾಗೂ ಪರಣ್ಣ ಮುನವಳ್ಳಿಯವರಿಗೆ ಎರಡೆರಡು ಅವಕಾಶವನ್ನು ನೀಡಲಾಗಿದೆ. ತಮಗೂ ಒಂದು ಅವಕಾಶ ನೀಡಿದರೆ ಮಹಿಳಾ ಉದ್ಯೋಗಕ್ಕಾ ಗಾರ್ಮೆಂಟ್ ಫ್ಯಾಕ್ಟರಿ ಸ್ಥಾಪನೆ ಸೇರಿ ಗಂಗಾವತಿಯ ಚಿತ್ರಣವನ್ನು ಮುಂಬೈ ನಂತೆ ಮಾರ್ಪಾಡು ಮಾಡುವುದಾಗಿ ಕೆಆರ್‌ಪಿ ಪಾರ್ಟಿ ಸ್ಥಾಪಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

Advertisement

ನಗರದ ವಿರೂಪಾಪೂರ ತಾಂಡದಲ್ಲಿ ಕೆಆರ್‌ಪಿ ಪಾರ್ಟಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ, ಗಂಗಾವತಿಯಲ್ಲಿ ಭತ್ತದ ಬೆಳೆಯು ವಿಪರೀತ ಹಾನಿಯಾಗುತ್ತಿದ್ದು ಮೊದಲಿನಂತೆ ರೈತರಿಗೆ ರೈಸ್ ಮಿಲ್ ಮಾಲೀಕರೂ ಸೇರಿ ಗಂಜ್ ವ್ಯಾಪಾರಿಗಳಿಗೆ ಸರಿಯಾದ ವ್ಯಾಪಾರ ವ್ಯವಹಾರವಿಲ್ಲ. ಗಂಗಾವತಿಯ ಭಾಗದಲ್ಲಿರುವ ಐತಿಹಾಸಿಕ ಪ್ರವಾಸಿ ತಾಣಗಳನ್ನು ಅಭಿವೃದ್ದಿಪಡಿಸಿ ಪ್ರವಾಸೋದ್ಯಮವನ್ನು ಬೆಳೆಸುವ ಮೂಲಕ ಪ್ರಗತಿ ಸಾಧಿಸಬಹುದಾಗಿದೆ. ಇದಕ್ಕಾಗಿ ಅಂಜನಾದ್ರಿ ಹಾಗೂ ಸುತ್ತಲಿನ ಪ್ರದೇಶವನ್ನು ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿಪಡಿಸಲು 5 ಸಾವಿರ ಕೋಟಿ ರೂ.ಗಳನ್ನು ಸರಕಾರದಿಂದ ಮಂಜೂರಿ ಮಾಡಿಸಲಾಗುತ್ತದೆ. ಹೊಸಪೇಟೆ ಗಂಗಾವತಿ ಪ್ರವಾಸೋದ್ಯಮ ಜೋಡಣೆಗೆ ವರ್ತೂಲ ರಸ್ತೆಗಳ ನಿರ್ಮಾಣ, ಪ್ರತಿ ವಾರ್ಡು ಮತ್ತು ಗ್ರಾಮಗಳಲ್ಲಿ ರೈತರಿಗೆ, ವಿದ್ಯಾರ್ಥಿಗಳಿಗೆ ಜನಸಾಮಾನ್ಯರಿಗೆ ಕೂಲಿಕಾರ್ಮಿಕರಿಗೆ ಅನುಕೂಲವಾಗುವಂತಹ ಯೋಜನೆ ರೂಪಿಸುವ ಕನಸು ಹೊಂದಿದ್ದು ಗಂಗಾವತಿ ಕ್ಷೇತ್ರದ ಜನರು ಒಂದು ಅವಕಾಶ ನೀಡುವಂತೆ ಮನವಿ ಮಾಡಿದರು.

ಇಬ್ಬರು ಮಕ್ಕಳ ದತ್ತು: ವಿರೂಪಾಪೂರ ತಾಂಡದಲ್ಲಿ ಅನಾರೋಗ್ಯದಿಂದ ಮೃತ ಲಂಬಾಣಿ ಮಹಿಳೆ ಶ್ರೀದೇವಿ ಅವರ ಮಕ್ಕಳಾದ ಸ್ವರೂಪ್ ಮತ್ತು ವೇಣು ಎನ್ನುವವರಿಗೆ ಶಿಕ್ಷಣ ಸೇರಿ ಅಗತ್ಯ ಸೌಕರ್ಯ ಕಲ್ಪಿಸಲು ಅವರ ಕುಟುಂಬದ ಹಿರಿಯರ ಜತೆ ಮಾತನಾಡಿ ದತ್ತು ಪಡೆದು ಆರ್ಥಿಕ ನೆರವು ನೀಡಲಾಗುವುದು. ಈಗಾಗಲೇ 6 ತಿಂಗಳ ಹಿಂದೆ ಮಕ್ಕಳಿಗೆ ನೆರವು ನೀಡುತ್ತಿದ್ದು ಎಲ್ಲಿಯೂ ಹೇಳದಂತೆ ಮನವಿ ಮಾಡಿದರೂ ಅವರ ಕುಟುಂಬದವರು ಬಹಿರಂಗ ಪಡಿಸುವಂತೆ ಕೋರಿದ್ದರಿಂದ ಇಂದು ನನ್ನ ಪತ್ನಿ ಅರುಣಾ ಲಕ್ಷ್ಮಿ ಲಂಬಾಣಿ ವೇಷದಲ್ಲಿ ಮಕ್ಕಳ ಜತೆ ಇದ್ದಾರೆಂದರು.

ಹಿರೇಜಂತಗಲ್, ನೀಲಕಂಠೇಶ್ವರ ಕ್ಯಾಂಪ್ ಸೇರಿ ವಿವಿಧ ವಾರ್ಡುಗಳಲ್ಲಿ ಸಮಾವೇಶ ಮಾಡುವ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪತ್ನಿ ಅರುಣಾ ಲಕ್ಷ್ಮೀ , ಕೆಆರ್‌ಪಿ ಪಾರ್ಟಿಯ ಜಿಲ್ಲಾಧ್ಯಕ್ಷ ಎ.ಮನೋಹರಗೌಡ, ಒಬಿಸಿ ಘಟಕದ ಜಿಲ್ಲಾಧ್ಯಕ್ಷ ಅಮರಜ್ಯೋತಿ ನರಸಪ್ಪ, ಈ.ರಾಮಕೃಷ್ಣ, ಹೊಸಮಲಿ ರಮೇಶ ನಾಯಕ, ಯಮನೂರ ಚೌಡ್ಕಿ, ರಾಮನಾಯಕ್, ಐಲಿ ಚಂದ್ರಪ್ಪ,. ಐಲಿ ನಾರಾಯಣಪ್ಪ, ಪೊಲಕಾಲ್ ಗಾಳಿನಾಥ, ಐಲಿ ಶಂಕರ್, ಸತೀಶ ದಂಡಿನ್ ಸೇರಿ ಅನೇಕರಿದ್ದರು.

Advertisement

ಲಂಬಾಣಿ ಉಡುಗೆಯಲ್ಲಿಗಮನ ಸೆಳೆದ ಅರುಣಾ
ನಗರದ ವಿರೂಪಾಪೂರ ತಾಂಡದಲ್ಲಿ ಕೆಆರ್‌ಪಿ ಪಾರ್ಟಿ ಸಮಾವೇಶದಲ್ಲಿ ಗಾಲಿ ಜನಾರ್ದನರೆಡ್ಡಿ ಪತ್ನಿ ಅರುಣಾ ಲಕ್ಷ್ಮೀ ಯವರು ಲಂಬಾಣಿ ಸಂಪ್ರದಾಯ ವೇಷ ಧರಿಸುವ ಮೂಲಕ ಗಮನ ಸೆಳೆದರು. ಲಂಬಾಣಿ ತಾಂಡದ ಮಹಿಳೆಯರ ಜತೆ ಫೋಟೋ ತೆಗೆಸಿಕೊಂಡರು. ನಂತರ ಲಂಬಾಣಿ ಭಾಷೆಯಲ್ಲಿ ಮಾತನಾಡಿ, ನನ್ನ ಪತಿ ಗಾಲಿ ಜನಾರ್ದನರೆಡ್ಡಿಯವರು ಯಾವುದೇ ತಪ್ಪು ಮಾಡಿಲ್ಲ. ಷಡ್ಯಂತ್ರ ನಡೆಸಿ ಕೇಸ್‌ಗಳಲ್ಲಿ ಸಿಲುಕಿಸಿದ್ದಾರೆ. ದೇವರ ದಯೆಯಿಂದ ಜೀವಂತ ಇದ್ದಾರೆ. ಗಂಗಾವತಿಯ ತಂದೆ ತಾಯಿಂದಿರು ಅವರನ್ನು ಗೆಲ್ಲಿಸುವ ಮೂಲಕ ಆಶೀರ್ವಾದ ಮಾಡಿದರೆ ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ನಮ್ಮ ಇಡೀ ಕುಟುಂಬ ಶ್ರಮಿಸಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next