ಬಳ್ಳಾರಿ: ಮಾಜಿ ಸಚಿವ ಜಿ.ಜನಾರ್ಧನ ರೆಡ್ಡಿಯವರಿಗೆ ಕೋವಿಡ್ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಭಾನುವಾರ ಅವರು ಬಳ್ಳಾರಿಗೆ ಆಗಮಿಸಬೇಕಿದ್ದ ಕಾರ್ಯಕ್ರಮ ರದ್ದಾಗಿದೆ. ಈ ಕುರಿತು ಜನಾರ್ಧನ ರೆಡ್ಡಿಯವರೇ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಖಚಿತ ಪಡಿಸಿದ್ದಾರೆ.
ಸಧ್ಯ ಬೆಂಗಳೂರಿನಲ್ಲಿರುವ ಜನಾರ್ಧನ ರೆಡ್ಡಿಯವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.
ಅಕ್ರಮ ಗಣಿಗಾರಿಕೆಯ ಆರೋಪದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಬಳ್ಳಾರಿಯಿಂದ ದೂರ ಇರುವ ಮಾಜಿ ಸಚಿವ ಜನಾರ್ಧನ ರೆಡ್ಡಿಯವರಿಗೆ ಆಪ್ತಮಿತ್ರ ಆರೋಗ್ಯ ಸಚಿವ ಶ್ರೀರಾಮುಲು ಅವರ ತಾಯಿಯ ಪುಣ್ಯತಿಥಿಯಲ್ಲಿ ಭಾಗವಹಿಸುವ ಸಲುವಾಗಿ ಭಾನುವಾರ ಮತ್ತು ಸೋಮವಾರ (ಆ.30,31) ರಂದು ಎರಡು ದಿನಗಳ ಕಾಲ ಬಳ್ಳಾರಿಗೆ ಹೋಗಲು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಆದರೆ ಬಳ್ಳಾರಿಗೆ ಬರುವ ಮುನ್ನ ಶನಿವಾರ ಸಂಜೆ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದ ರೆಡ್ಡಿಯವರಿಗೆ ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿಗೆ ಬರುವ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಸ್ವತಃ ರೆಡ್ಡಿಯವರೇ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
ಕೋವಿಡ್ ಸೋಂಕಿನ ಕಾರಣಕ್ಕೆ ಸ್ನೇಹಿತ, ಸಚಿವ ಬಿ. ಶ್ರೀರಾಮುಲು ಅವರ ತಾಯಿಯವರ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ. ಪೂರ್ವ ನಿಗದಿಯಂತೆ ಆಗಸ್ಟ್ 30, 31ರಂದು ನಾನು ಬಳ್ಳಾರಿಗೆ ಬರಬೇಕಿತ್ತು. ಆದರೆ, ಕೊವಿಡ್ ಕಾರಣಕ್ಕೆ ಬರಾಲಾಗುತ್ತಿಲ್ಲ ಎಂದು ಅವರು ಪೋಸ್ಟ್ ನಲ್ಲಿ ವಿವರಿಸಿದ್ದಾರೆ.
ಜನಾರ್ಧನ್ ರೆಡ್ಡಿ ಶೀಘ್ರ ಗುಣಮುಖ ಆಗಲಿ ಎಂದು ರಾಮುಲು ಸೇರಿದಂತೆ ಅವರ ಹಲವು ಸ್ನೇಹಿತರು ಶುಭ ಹಾರೈಸಿದ್ದಾರೆ.