ಗಂಗಾವತಿ: ಗೃಹಲಕ್ಷ್ಮೀ ಯೋಜನೆಯಿಂದ ಮಹಿಳಾ ಸಬಲೀಕರಣ ಸಾಧ್ಯ. ಆರ್ಥಿಕ ಶಕ್ತಿ ಹೊಂದಿದ ಮಹಿಳೆ ಇಡೀ ಕುಟುಂಬವನ್ನು ಸಮರ್ಥವಾಗಿ ನಿಭಾಯಿಸಬಲ್ಲಳು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಅವರು ನಗರಸಭೆಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡುವ ಮೊದಲು ನೆರೆದ ಮಹಿಳಾ ಫಲಾನುಭವಿಗಳ ಜತೆ ಸಂವಾದದಲ್ಲಿ ಮಾತನಾಡಿದರು.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಶೋಷಿತರು,ಬಡವರು,ಕೃಷಿಕರಿಗೆ ನೆರವಾಗುವ ಮೂಲಕ ಬಡವರಿಗೆ ಆರ್ಥಿಕ ಶಕ್ತಿ ತುಂಬುವ ಕಾರ್ಯ ಮಾಡಿದೆ. ಬಡವರ ಕೈಗೆ ಹಣ ಕೊಟ್ಟರೆ ಆ ಹಣ ಉತ್ತಮ ಕಾರ್ಯಕ್ಕೆ ಉಪಯೋಗವಾಗುತ್ತದೆ. ಗೃಹಜ್ಯೋತಿ,ಶಕ್ತಿ ಯೋಜನೆ ಹಾಗೂ ಇದೀಗ ಗೃಹಲಕ್ಷ್ಮೀ ಯೋಜನೆಯ ಮೂಲಕ ಬಡ ಮಹಿಳೆಯರಿಗೆ ಆರ್ಥಿಕ ನೆರವಿನಿಂದ ಮಾರುಕಟ್ಟೆಯಲ್ಲಿ ಹಣ ಹರಿದು ಜಿಡಿಪಿ ಹೆಚ್ಚಾಗುತ್ತದೆ. ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಗಂಗಾವತಿ ಜನತೆ ಹೆಚ್ಚಾಗಿ ಮಹಿಳೆಯರು ಆಶೀರ್ವಾದ ಮಾಡಿದ್ದಾರೆ .ಇವರಿಗಾಗಿ ಗುಡಿ ಕೈಗಾರಿಕೆಗಳ ಮೂಲಕ ಕೆಲಸ ನೀಡಲಾಗುತ್ತದೆ. ಬಡ ನಿವೇಶನ ರಹಿತ ಮಹಿಳೆಯರನ್ನು ಗುರುತಿಸಿ ನಿವೇಶ ಮನೆ ನಿರ್ಮಿಸುವ ಯೋಜನೆ ಅನುಷ್ಠಾನ ಮಾಡಲಾಗುತ್ತದೆ. ಬಡ ಮಕ್ಕಳಿಗೆ ವಿದ್ಯಾಭ್ಯಾಸ ಕ್ಕೆ ನೆರವು ನೀಡಲಾಗುತ್ತದೆ ಎಂದರು.
ನಗರಸಭೆಯ ಸದಸ್ಯರಾದ ಶಾಮೀದ್ ಮನಿಯಾರ್, ಮೌಲಸಾಬ, ಮನೋಹರಸ್ವಾಮಿ, ಶರಭೋಜಿರಾವ್, ಪೌರಾಯುಕ್ತ ವಿರೂಪಾಕ್ಷ ಮೂರ್ತಿ ಇದ್ದರು.
ನಗರದ ವ್ಯಾಪ್ತಿಯಲ್ಲಿ 21ಸಾವಿರ ಮಹಿಳೆಯರುಗೃಹಲಕ್ಷ್ಮೀ ಯೋಜನೆಗೆ ಅಯ್ಕೆಯಾಗಿದ್ದಾರೆ.