Advertisement

ಗೆಜ್ಜೆಗಿರಿ ನಂದನಬಿತ್ತಿಲ್: ಕೊಡಿಮರ ತೈಲಾಧಿವಾಸ

06:56 AM May 09, 2019 | mahesh |

ಬಡಗನ್ನೂರು: ದೇಯಿ ಬೈದ್ಯೆತಿ, ಕೋಟಿ-ಚೆನ್ನಯರ ಮೂಲಸ್ಥಾನ ಕ್ಷೇತ್ರವಾದ ಬಡಗನ್ನೂರು ಗ್ರಾಮದ ಗೆಜ್ಜೆಗಿರಿ ನಂದನ ಬಿತ್ತಿಲ್ನಲ್ಲಿ ಬುಧವಾರ ಕೊಡಿಮರ ತೈಲಾಧಿವಾಸ ಕಾರ್ಯಕ್ರಮ ವಿವಿಧ ಧಾರ್ಮಿಕ ವಿಧಿ- ವಿಧಾನಗಳೊಂದಿಗೆ ನೂರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.

Advertisement

ಐನೂರು ವರ್ಷಗಳ ಹಿಂದೆ ತುಳುನಾಡಿನ ಅವಳಿ ವೀರರಾದ ಕೋಟಿ -ಚೆನ್ನಯರು ಬೆಳೆದ ಮಣ್ಣು ಗೆಜ್ಜೆಗಿರಿ ಮಾತೆ ದೇಯಿ ಬೈದ್ಯೆತಿ ಮತ್ತು ಗುರು ಸಾಯನ ಬೈದ್ಯರ ಮೂಲ ನೆಲೆಯಾಗಿದ್ದು, ಕ್ಷೇತ್ರದಲ್ಲಿ ಪುನರುತ್ಥಾನ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೊಡಿಮರಕ್ಕೆ ಎಳ್ಳೆಣ್ಣೆ ಸೇಚನದ ಪವಿತ್ರ ಕಾರ್ಯವನ್ನು ನಡೆಸಲಾಯಿತು. ನೂರಾರು ಭಕ್ತರು ಬೆಳಗ್ಗಿನಿಂದ ಸಂಜೆಯ ತನಕ ಕ್ಷೇತ್ರಕ್ಕೆ ಭೇಟಿ ನೀಡಿ ಎಣ್ಣೆ ಸಮರ್ಪಣೆ ಮಾಡಿದರು.

ಕ್ಷೇತ್ರದ ಯಜಮಾನ ಶ್ರೀಧರ ಪೂಜಾರಿ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಕ್ಷೇತ್ರದ ತಂತ್ರಿ ಲೋಕೇಶ್‌ ಶಾಂತಿ ನೇತೃತ್ವದಲ್ಲಿ, ಕನ್ಯಾನ ಕಣಿಯೂರಿನ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ, ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ದೇವಸ್ಥಾನದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಉಪಸ್ಥಿತಿಯಲ್ಲಿ ಪೂಜಾ ವಿಧಿ ವಿಧಾನಗಳು ನಡೆದು ತೈಲ ಪಾತ್ರೆಯಲ್ಲಿ ಕೊಡಿಮರವನ್ನು ಇರಿಸಲಾಯಿತು.

ಬಾಲಾಲಯದಲ್ಲಿ ಸಾಮೂಹಿಕ ಪ್ರಾರ್ಥನೆ, ಪೂಜೆಯ ಬಳಿಕ ಭಕ್ತರಿಗೆ ಕೊಡಿಮರಕ್ಕೆ ಎಳ್ಳೆಣ್ಣೆ ಸಮರ್ಪಿಸಲು ಅವಕಾಶ ಕಲ್ಪಿಸಲಾಯಿತು. ಕ್ಷೇತ್ರದಲ್ಲೇ ಪರಿಶುದ್ಧ ಎಳ್ಳೆಣ್ಣೆ ವಿತರಣೆ ಮಾಡಲು ಕೂಪನ್‌ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ಗೆಜ್ಜೆಗಿರಿ ಕ್ಷೇತ್ರದಲ್ಲಿ ಅಭಿವೃದ್ಧಿ ಯಾಗುತ್ತಿರುವುದನ್ನು ಪತ್ರಿಕೆಯಲ್ಲಿ ನೋಡಿ ಬಂದವನು ನಾನು. ಗೆಜ್ಜೆಗಿರಿಯಲ್ಲಿ ದೇವಿ ಶಕ್ತಿಯ ಗೆಜ್ಜೆ ಶಬ್ದ ಕೇಳಿಸಿಕೊಳ್ಳಬೇಕು. ನಂದನಬಿತ್ತಿಲ್ನಲ್ಲಿ ಪಾರಂಪರಿಕ ಔಷಧಿಯ ಶಕ್ತಿ ಹೆಚ್ಚಾಗಬೇಕು. ಅಭಿವೃದ್ಧಿಯ ನಿಟ್ಟಿನಲ್ಲಿ ಸರ್ವ ಮನಸ್ಸುಗಳು ಒಂದಾಗಬೇಕು ಎಂದು ಶ್ರೀ ಮಹಾಬಲ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.

Advertisement

ಒಂದಾಗೋಣ
ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ದೇವಸ್ಥಾನದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಮಾತನಾಡಿ, ಸತ್ಯ, ಧರ್ಮ, ನಿಷ್ಠೆ ಇದ್ದಲ್ಲಿ ಒಗ್ಗಟ್ಟು ಪ್ರದರ್ಶನವಾದಾಗ ಸವಾಲಿನ ಕೆಲಸವನ್ನು ಸಾಧಿಸಲು ಸಾಧ್ಯವಾಗುತ್ತದೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಆಶಯದಂತೆ ಎಲ್ಲ ಕೈಗಳು ಒಂದಾಗಿ ಈ ಕ್ಷೇತ್ರ ಪುನರುತ್ಥಾನಗೊಳ್ಳಬೇಕು ಎಂದು ಹೇಳಿದರು.

ಕ್ಷೇತ್ರದ ಯಜಮಾನ ಶ್ರೀಧರ ಪೂಜಾರಿ, ಹಿರಿಯರಾದ ಲೀಲಾವತಿ ಪೂಜಾರಿ, ದೇಯಿ ಬೈದ್ಯೆತಿ-ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲು, ಉಪಾಧ್ಯಕ್ಷರಾದ ಪೀತಾಂಬರ ಹೆರಾಜೆ, ರಾಜಶೇಖರ ಕೋಟ್ಯಾನ್‌, ಕಾರ್ಯದರ್ಶಿ ಸುಧಾಕರ ಸುವರ್ಣ, ತಾಲೂಕು ಅಧ್ಯಕ್ಷ ಪ್ರವೀಣ್‌ ಕುಮಾರ್‌ ಕೆಡೆಂಜಿಗುತ್ತು, ಕರಸೇವೆ ಸಮಿತಿಯ ಉದಯ ಕುಮಾರ್‌ ಕೋಲಾಡಿ, ದಯಾನಂದ ಕರ್ಕೇರ, ನಾರಾಯಣ ಪೂಜಾರಿ ನಂಜೆ, ನಾರಾಯಣ ಪೂಜಾರಿ ಮಡ್ಯಂಗಳ, ನಾರಾಯಣ ಪೂಜಾರಿ ಮೇರ್ವೆ, ಪಡುಮಲೆ ಶ್ರೀ ಕೂವೆಶಾಸ್ತರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ.ಪಿ. ಸಂಜೀವ ರೈ, ಪ್ರಮುಖರಾದ ಚಂದ್ರಶೇಖರ ಉಚ್ಚಿಲ್, ಹರೀಶ್‌ ಸಾಲ್ಯಾನ್‌ ಮುಂಬಯಿ, ನಾರಾಯಣ ಸುವರ್ಣ ಮುಂಬಯಿ, ರತ್ನಾಕರ ಮುಂಬಯಿ, ಉಲ್ಲಾಸ್‌ ಕೋಟ್ಯಾನ್‌, ಮಹಾಬಲ ಪೂಜಾರಿ, ಉಮೇಶ್‌ ಪೂಜಾರಿ, ಕೇಶವ ಪೂಜಾರಿ ಬೆದ್ರಾಳ, ಗೌರವ ಸಲಹೆಗಾರರಾದ ಕೂರೇಲು ಸಂಜೀವ ಪೂಜಾರಿ, ಗುಂಡ್ಯಡ್ಕ ವಾಸು ಪೂಜಾರಿ ಮತ್ತಿತರರು ಪಾಲ್ಗೊಂಡರು.

ಅವಳಿ ವೀರರ ಮೂಲ ನೆಲೆಯಲ್ಲಿ ಪ್ರಸ್ತುತ ಬೆರ್ಮೆರ್‌ ಗುಂಡ, ಮೂಲಸ್ಥಾನ ಗರಡಿ, ಧರ್ಮಚಾವಡಿ, ದೇಯಿ ಬೈದ್ಯೆತಿ ಸಮಾಧಿ, ಧೂಮಾವತಿ, ಕುಪ್ಪೆ ಪಂಜುರ್ಲಿ ದೈವಸ್ಥಾನ ಪುನರುತ್ಥಾನ ಕಾರ್ಯ ನಡೆಯುತ್ತಿದೆ.

ಡಿ. 9ರಂದು ಕೊಡಿಮರವನ್ನು ಕೊಳ್ತಿಗೆ ಗ್ರಾಮದ ಚಿಮುಲಗುಂಡಿಯಿಂದ ಹಾಗೂ ಬಿಂಬ ಮರವನ್ನು ಸುಳ್ಯ ತಾಲೂಕಿನ ಉಬರಡ್ಕ ಗ್ರಾಮದ ನೈಯೋಡಿಯಿಂದ ಗೆಜ್ಜೆಗಿರಿ ಕ್ಷೇತ್ರಕ್ಕೆ ಮೆರವಣಿಗೆಯ ಮೂಲಕ ತರಲಾಗಿತ್ತು. ಸ್ತಪತಿ ಉಮೇಶ್‌ ಬಳ್ಪ ಅವರ ತಂಡ ಕೊಡಿಮರ ಕೆತ್ತನೆ ಕಾರ್ಯ ಪೂರ್ಣಗೊಳಿಸಿದೆ.

ಮಹತ್ತರ ಕಾರ್ಯ
ಆಶೀರ್ವಚನ ನೀಡಿದ ಕನ್ಯಾನ ಕಣಿಯೂರಿನ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ, ತುಳುನಾಡು ದೈವ -ದೇವರುಗಳ, ಪ್ರಕೃತಿ ಆರಾಧನೆಯ ಪುಣ್ಯಭೂಮಿ. ಈ ಪರಿಸರದಲ್ಲಿ ಘನತೆ, ಗೌರವದ ಬದುಕು ನಡೆಸಿದ ಪುಣ್ಯಪುರುಷರ, ದೇವಿ ಶಕ್ತಿ ಆವಿರ್ಭವಿಸಿದ ಕ್ಷೇತ್ರ ಪುನರುತ್ಥಾನ ಗೊಳ್ಳುತ್ತಿರುವುದು ಮಹತ್ತರ ಕಾರ್ಯ. ಅಭಿವೃದ್ಧಿಯ ಅವಕಾಶ ನಮ್ಮ ಭಾಗ್ಯ ಎಂದು ತಿಳಿದುಕೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next