ಗಜೇಂದ್ರಗಡ: ಮತದಾನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸುವ ನಿಟ್ಟಿನಲ್ಲಿ ಬಳಕೆಯಾಗುತ್ತಿರುವ ವಿವಿ ಪ್ಯಾಟ್ ಕಾರ್ಯವೈಖರಿ ಕುರಿತು ಜನರಿಗೆ ಮಾಹಿತಿ ನೀಡುವ ಮೂಲಕ ಕಡ್ಡಾಯ ಮತದಾನಕ್ಕೆ ಅಣಿಗೊಳಿಸಲಾಗುತ್ತಿದೆ ಎಂದು ಜಿಲ್ಲಾ ಉಪವಿಭಾಗಾಧಿಕಾರಿ ಅನ್ನಪೂರ್ಣಾ ಮುದಕಮ್ಮನವರ ಹೇಳಿದರು.
ಪಟ್ಟಣದ ಸರ್ಕಾರಿ ಮಾದರಿ ಕೇಂದ್ರ ಶಾಲೆ ನಂ. 1ರ ಮತಗಟ್ಟೆ ಕೇಂದ್ರದಲ್ಲಿ ಮತದಾನ ಕುರಿತು ಸಾರ್ವಜನಿಕರಿಗೆ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಿ ಅವರು ಮಾತನಾಡಿದರು.
ಈ ಹಿಂದೆ ಚುನಾವಣೆಯಲ್ಲಿ ಇವಿಎಂ ಹಾಗೂ ಬ್ಯಾಲೆಟ್ ಯೂನಿಟ್ ಯಂತ್ರಗಳನ್ನು ಬಳಸಲಾಗುತ್ತಿತ್ತು. ಆದರೆ, ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಕೇಂದ್ರ ಚುನಾವಣಾ ಆಯೋಗ ಕಳೆದ ಹಲವು ವರ್ಷಗಳಿಂದ ವಿವಿ ಪ್ಯಾಟ್ ಬಳಕೆ ಮಾಡುತ್ತಿದೆ. ಮತದಾರರು ತಾವು ಚಲಾಯಿಸಿದ ಮತದ ಖಾತ್ರಿಗಾಗಿ ವಿವಿ ಪ್ಯಾಟ್ ಉಪಕರಣ ಅಭಿವೃದ್ಧಿಪಡಿಸಿರುವುದರಿಂದ ಇದರ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರಾತ್ಯಕ್ಷಿಕೆ ನಡೆಸಲಾಗುತ್ತಿದೆ ಎಂದರು.
ಯಾವುದೇ ನೆಟ್‌ವರ್ಕ್ ಬಳಸಿ ವಿವಿ ಪ್ಯಾಟ್ ಉಪಕರಣದ ನಿರ್ವಹಣೆ ಮಾಡಲಾಗುವುದಿಲ್ಲ. ಹೀಗಾಗಿ, ವಿವಿ ಪ್ಯಾಟ್ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವುದರಿಂದ ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಗೆ ಮತದಾನ ಮಾಡಿದ ಕುರಿತು ಖಾತ್ರಿಪಡಿಸಿಕೊಳ್ಳಲು ಚುನಾವಣಾ ಆಯೋಗ ಈ ಉಪಕರಣ ಒದಗಿಸಿದೆ ಎಂದರು.
ತಹಶೀಲ್ದಾರ್ ರಜನಿಕಾಂತ್ ಕೆಂಗೇರಿ ಮಾತನಾಡಿ, ದೇಶದಲ್ಲಿ ರಾಜಾಡಳಿವಿದ್ದಾಗ ರಾಜರನ್ನು ಆಯ್ಕೆ ಮಾಡುವ ಜನರಿಗೆ ಅವಕಾಶವಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಯಿಂದ ಹಿಡಿದು ಸಾಮಾನ್ಯ ವ್ಯಕ್ತಿಯೂ ಸಹ ಪ್ರತಿ ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶವಿದೆ. ಮತದಾನ ಅತ್ಯಂತ ಪವಿತ್ರ ಕೆಲಸವಾಗಿದೆ. ಹೀಗಾಗಿ, ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ನಿಮಗೆ ಸೂಕ್ತ ಎನಿಸಿದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಚುನಾವಣೆ ಬಹುದೊಡ್ಡ ಅಸ್ತ್ರವಾಗಿದೆ. ಪ್ರತಿಯೊಬ್ಬರು ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢಗೊಳಿಸಬೇಕೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿ ಸಜ್ಜನರ, ಕಂದಾಯ ನಿರೀಕ್ಷಕಿ ಗೌರಮ್ಮ ಆನಂದಪ್ಪನವರ, ಚುನಾವಣಾ ನಿರ್ವಹಣಾಧಿಕಾರಿ ಬಸವರಾಜ ಗುಡಿಮುಂದಿನ, ಸೆಕ್ಟರ್ ಅಧಿಕಾರಿ ಎಂ.ಎ. ಫಣಿಬಂಧ, ಎಸ್.ಎಲ್. ಉಪ್ಪಾರ, ಬಿಎಲ್‌ಒ ಆರ್.ವಿ. ನಿರಂಜನ, ಜಿ.ಎನ್. ಕಾಳೆ, ಎಸ್.ಎಸ್. ಪಸಾರದ, ಪಿ.ಪಿ. ಅಂಬೋರೆ, ಮುಖ್ಯ ಶಿಕ್ಷಕಿ ಎಫ್. ಎಚ್. ಬಾಗವಾನ, ಶರಣಮ್ಮ ಅಂಗಡಿ, ಬಸವರಾಜ ಬಂಕದ, ಮುದಿಯಪ್ಪ ಮುಧೋಳ, ಮೂಕಪ್ಪ ನಿಡಗುಂದಿ, ಲೀಲಾವತಿ ಸವಣೂರ, ವಿಷ್ಣು ಅಂಬೋರೆ, ಮಾರುತಿ ಅವಧೂತ್ ಇದ್ದರು.