Advertisement

ಗಜೇಂದ್ರಗಡ: ವೈದ್ಯ ವಿದ್ಯಾರ್ಥಿಗಳಿಗೆ ಸಾಮಾಜಿಕ ಬದ್ಧತೆ ಅತ್ಯಗತ್ಯ

03:16 PM Mar 18, 2023 | Team Udayavani |

ಗಜೇಂದ್ರಗಡ: ಹಣದಿಂದ ಸಂತೃಪ್ತಿ, ಸಮಾಧಾನ ದೊರೆಯದು. ನಾವು ಮಾಡುವ ಕೆಲಸ ಕಾರ್ಯಗಳ ಮೂಲಕ ಸಮಾಜದಲ್ಲಿ ಸಿಗುವ ಗೌರವಗಳಿಂದ ಮಾತ್ರ ಸಂತೃಪ್ತಿ, ಸಮಾಧಾನ ದೊರೆಯುತ್ತವೆ. ಈ ನಿಟ್ಟಿನಲ್ಲಿ ಯುವ ವೈದ್ಯಕೀಯ ವಿದ್ಯಾರ್ಥಿಗಳು ಹಣಕ್ಕೆ ಮಹತ್ವ ನೀಡದೆ ಸಾಮಾಜಿಕ ಜವಾಬ್ದಾರಿ ಅರಿತು ಕೆಲಸದಲ್ಲಿ ತೊಡಗಬೇಕೆಂದು ಭಗವಾನ್‌ ಮಹಾವೀರ ಜೈನ್‌ ಆಯುರ್ವೇದಿಕ್‌ ಮೆಡಿಕಲ್‌ ಕಾಲೇಜಿನ ಪ್ರಾಚಾರ್ಯ ಡಾ|ಎನ್‌.ಎಚ್‌. ಕುಲಕರ್ಣಿ ಹೇಳಿದರು.

Advertisement

ಪಟ್ಟಣದ ಭಗವಾನ್‌ ಮಹಾವೀರ ಜೈನ್‌ ಆಯುರ್ವೇದಿಕ್‌ ಮೆಡಿಕಲ್‌ ಕಾಲೇಜಿನ 2023-24ನೇ ಸಾಲಿನ ವೈದ್ಯಕೀಯ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನೋವಿನಿಂದ ಬಂದ ಜನರಿಗೆ ಉತ್ತಮ ಚಿಕಿತ್ಸೆ ಹಾಗೂ ಸಮಾಧಾನದ ಮೂಲಕ ಆತ್ಮವಿಶ್ವಾಸ ತುಂಬುವುದು ವೈದ್ಯರ ಪ್ರಮುಖ ಕೆಲಸ. ವೈದ್ಯ ವೃತ್ತಿ ಪವಿತ್ರವಾದುದು. ವಿಶ್ವಸಂಸ್ಥೆ ಆಯುರ್ವೇದ ಪದ್ಧತಿಗೆ ಸಾಂಪ್ರದಾಯಿಕ ವೈದ್ಯ ಪದ್ಧತಿ ಎಂಬ ಮಾನ್ಯತೆ ನೀಡಿದೆ. ದೇಶದಲ್ಲಿ 250 ಆಯುರ್ವೇದ ಮಹಾವಿದ್ಯಾಲಯಗಳಿದ್ದು, ಅದರಲ್ಲಿ 56 ಮಹಾವಿದ್ಯಾಲಯಗಳು ನಮ್ಮ ರಾಜ್ಯದಲ್ಲಿಯೇ ಇವೆ. ನಮ್ಮ ಮಹಾವಿದ್ಯಾಲಯ ಕಳೆದ ದಶಕಗಳಿಂದ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಸಾಮಾಜಿಕ ಜವಾಬ್ದಾರಿ ಕಲಿಸುವ ಕೆಲಸವನ್ನೂ ಮಾಡುತ್ತಿದೆ ಎಂದರು.

ದೇಶದ ಹಲವಾರು ರಾಜ್ಯಗಳಿಂದ ಸಾವಿರಾರು ವಿದ್ಯಾರ್ಥಿಗಳು ಅತ್ಯನ್ನತ ಸ್ಥಾನದಲ್ಲಿ ಕೆಲಸ ಮಾಡುತ್ತಿರುವುದು ಮಹಾವಿದ್ಯಾಲಯದ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು. ಡಾ|ಕೆ.ಎಸ್‌. ಬೆಲ್ಲದ ಮಾತನಾಡಿ, ಸಮಾಜ ಉತ್ತಮವಾಗಿದ್ದರೆ ಇಡೀ ಜನಾಂಗವೇ ಆರೋಗ್ಯವಾಗಿರುತ್ತದೆ. ವೈದ್ಯಕೀಯ ವಿಜ್ಞಾನ ಕಷ್ಟ ಎಂದು ಕಲಿಯಲು ಗ್ರಾಮೀಣ ವಿದ್ಯಾರ್ಥಿಗಳು ಮುಂದೆ ಬರುತ್ತಿಲ್ಲ. ಇದು ಬದಲಾಗಬೇಕು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಾಗಿ ವೈದ್ಯಕೀಯ ಕ್ಷೇತ್ರಕ್ಕೆ ಬಂದಲ್ಲಿ ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ಕೊರತೆ ನೀಗಿಸಬಹುದು. ವೈದ್ಯನಾದವನಿಗೆ ಮಗುವಿನ ಮನಸ್ಸಿರಬೇಕು. ಸೇವಾ ಮನೋಭಾವನೆ ಇರುವವರು ಈ ಕ್ಷೇತ್ರಕ್ಕೆ ಬರಬೇಕು. ತಾನು ಕಲಿತ ವಿದ್ಯೆಯನ್ನು ಸಮಾಜದ ಉಪಯೋಗಕ್ಕೆ ಕಿಂಚಿತ್ತಾದರೂ ನೀಡಬೇಕೆಂದು ಹೇಳಿದರು. ಎಸ್‌.ಸಿ. ಗಾರವಾಡ, ಸುಮಯ್ಯ ಸಾಮುದ್ರಿ, ಪೂರ್ಣಿಮಾ ಬೆಲ್ಲದ, ಎ.ಡಿ. ಕೋಲಕಾರ ಸೇರಿದಂತೆ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next